ಭಾರತೀಯ ಪೌರತ್ವ ತೊಡಕು: ಅಫ್ಗನ್ ವಲಸಿಗರು ನಿರಾಳ?

7
ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ

ಭಾರತೀಯ ಪೌರತ್ವ ತೊಡಕು: ಅಫ್ಗನ್ ವಲಸಿಗರು ನಿರಾಳ?

Published:
Updated:

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ ಕುರಿತು ಜಂಟಿ ಸಂಸದೀಯ ಸಮಿತಿ ಸೋಮವಾರ ಲೋಕಸಭೆಯಲ್ಲಿ ವರದಿ ಸಲ್ಲಿಸಲಿದ್ದು, ತಿದ್ದುಪಡಿ ಮಸೂದೆ ಜಾರಿಗೊಳಿಸುವಂತೆ ಶಿಫಾರಸು ಮಾಡುವ ಸಂಭವ ಇದೆ.

ಮಂಗಳವಾರ (ಇದೇ 8) ಚಳಿಗಾಲದ ಅಧಿವೇಶನದ ಕೊನೆಯ ದಿನ. ಹಾಗಾಗಿ ಇಲ್ಲಿ ಮಸೂದೆ ಅಂಗೀಕಾರವಾಗುವುದು ಮಾತ್ರ ಇನ್ನೂ ಸ್ಪಷ್ಟವಿಲ್ಲ ಎಂದು ಮೂಲಗಳು ತಿಳಿಸಿವೆ. 

ಅಫ್ಗಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ತಾರತಮ್ಯ ಅಥವಾ ಸಂಕಷ್ಟಕ್ಕೊಳಗಾದ ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ವಲಸೆ ಬಂದು ಹಲವು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ, ಭಾರತದ ಪೌರತ್ವ ಪಡೆಯಲು ಸಾಕಷ್ಟು ತೊಡಕು ಅನುಭವಿಸುತ್ತಿದ್ದಾರೆ. ಈಗ ಅಂತಹ ವಲಸಿಗರಿಗೆ ಈ ತಿದ್ದುಪಡಿ ಮಸೂದೆಯಿಂದ ನೆರವಾಗುವ ಸಾಧ್ಯತೆ ಇದೆ. 

ಪ್ರಸ್ತುತ 1965ರ ಪೌರತ್ವ ಕಾಯ್ದೆ ಅನುಸಾರ, 12 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಬಳಿಕ ಮಾತ್ರ ಈ ದೇಶಗಳ ವಲಸಿಗರು ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. 

ಇದೀಗ ಈ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ರೂಪಿಸಲಾಗಿದೆ. ಇದರ ಅನುಸಾರ, ಅಫ್ಗಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ನಿರಾಶ್ರಿತರು ಭಾರತದಲ್ಲಿ 6 ವರ್ಷ ವಾಸವಿದ್ದರೆ ಅವರು ಭಾರತದ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. 

ಪ್ರಸ್ತುತ ಅಫ್ಗನ್ ವಲಸಿಗರು ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸಬೇಕಾದ ವೀಸಾ ಆಧಾರದಲ್ಲಿ ಇಲ್ಲಿ ವಾಸಿಸುತ್ತಿದ್ದಾರೆ. ಈಚೆಗೆ ಸರ್ಕಾರ ಇವರಿಗೆ ದೀರ್ಘಾವಧಿ ವೀಸಾ ನೀಡುತ್ತಿದೆ. ಆದರೆ ಆ ಪ್ರಕ್ರಿಯೆ ಸಹ ಸಂಕೀರ್ಣವಾಗಿದೆ.

ಕಾಂಗ್ರೆಸ್, ಟಿಎಂಸಿ, ಸಿಪಿಎಂ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿವೆ. ಪೌರತ್ವ ಸಾಂವಿಧಾನಿಕ ವಿಷಯ, ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲಾಗುವುದಿಲ್ಲ ಎನ್ನುವುದು ಇವರ ನಿಲುವು. ಜತೆಗೆ ಈಶಾನ್ಯ ಭಾರತದ ಜನರು ಮತ್ತು ಬಹುತೇಕ ಸಂಘಟನೆಗಳು ಸಹ ತಿದ್ದುಪಡಿ ಮಸೂದೆ ವಿರೋಧಿಸಿವೆ.ಮೇಘಾಲಯ, ಮಿಜೋರಾಂ ಸರ್ಕಾರ ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ. 

**

‘ಘನತೆಯ ಜೀವನಕ್ಕೆ ಪೌರತ್ವ ಬೇಕು’

‘ನಮಗೆ ಯಾವುದೇ ಪರಿಹಾರ, ಮನೆ, ಉದ್ಯೋಗ ಬೇಡ. ನಮಗೆ ಘನತೆಯಿಂದ ಜೀವನ ಮಾಡುವ ಅವಕಾಶ ಬೇಕು. ಆಗ ಜೀವನೋಪಾಯ ಗಳಿಸಲು, ಉದ್ಯಮಕ್ಕಾಗಿ ವಿದೇಶಗಳಿಗೆ ತೆರಳಲು, ಉತ್ತಮ ಶಿಕ್ಷಣ ಪಡೆಯಲು ಭಾರತೀಯ ಪೌರತ್ವ ಅವಶ್ಯ’ ಎಂದು ಖಲ್ಸಾ ದಿವಾನ್ ಸೊಸೈಟಿಯ ಮನೋಹರ್ ಸಿಂಗ್ ಹೇಳುತ್ತಾರೆ. 

ಪೌರತ್ವ ಇಲ್ಲದೆ ವಲಸಿಗರೆಲ್ಲಾ ತೆರೆದ ಜೈಲಿನಲ್ಲಿ ಜೀವಿಸುತ್ತಿದ್ದಾರೆ. ಉತ್ತಮ ಶಿಕ್ಷಣ ಹೊಂದಿದ್ದರೂ ಅಫ್ಗನ್ ಪಾಸ್‌ಪೋರ್ಟ್ ಹೊಂದಿರುವ ಕಾರಣ, ಉದ್ಯೋಗ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ವಿವರಿಸುತ್ತಾರೆ. 

ಅಫ್ಗಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದ ಸಿಖ್ ಹಾಗೂ ಹಿಂದೂಗಳು ಸೇರಿ ಈ ಸೊಸೈಟಿ ರಚಿಸಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !