ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ: ‘ಕೈ’ ಮೇಲು: ತುಸು ಬಾಡಿದ ‘ಕಮಲ’

Last Updated 31 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಲೋಕಸಭೆ ಚುನಾವಣೆಯಲ್ಲಿ ಸೋತು ಸೊರಗಿದ್ದ ಕಾಂಗ್ರೆಸ್ ನಗರಿಗರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

56 ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 19, ಬಿಜೆಪಿ 14, ಜೆಡಿಎಸ್ 2 ಕಡೆ ಅಧಿಕಾರ ರಚಿಸುವಷ್ಟು ಬಹುಮತ ಪಡೆದುಕೊಂಡಿವೆ. ಉಳಿದೆಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಕಷ್ಟು ಕಡೆಗಳಲ್ಲಿ ಪಕ್ಷೇತರರು ನಿರ್ಣಾಯಕರಾಗಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಹುತೇಕ ಕಡೆಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ.

ನಗರಸಭೆ: 7 ನಗರಸಭೆಗಳಲ್ಲಿ ಬಸವಕಲ್ಯಾಣ, ಶಹಾಪುರ ನಗರಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಹಿರಿಯೂರು ನಗರಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ, ಅಧಿಕಾರ ರಚಿಸಲು ಪಕ್ಷೇತರರ ನೆರವು ಬೇಕೇಬೇಕು.ಹರಿಹರದಲ್ಲಿ ಕಾಂಗ್ರೆಸ್– ಜೆಡಿಎಸ್ ಒಗ್ಗೂಡಿದರೆ ಮಾತ್ರ ಅಧಿಕಾರ ಹಿಡಿಯಬಹುದು. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ ಸಾಧ್ಯವಾದರೆ ಅಧಿಕಾರ ಅನುಭವಿಸಬಹುದು, ಇಲ್ಲವಾದರೆ ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಿಪಟೂರು ನಗರಸಭೆಯಲ್ಲಿ ಬಿಜೆಪಿಯು ಪಕ್ಷೇತರಸದಸ್ಯರ ಬೆಂಬಲ ಪಡೆದರೆ ಅಧಿಕಾರ ಹಿಡಿಯಬಹುದು.ಕಾಂಗ್ರೆಸ್– ಜೆಡಿಎಸ್ ಒಟ್ಟಾಗಿ ಪಕ್ಷೇತರರನ್ನು ಒಲಿಸಿಕೊಂಡರೂಅಧಿಕಾರ ಹೊಂದಬಹುದು. ನಂಜನಗೂಡಿನಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಏರುವ ವಾತಾವರಣ ಇದೆ.

ಪುರಸಭೆ: 30 ಪುರಸಭೆಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 5, ಜೆಡಿಎಸ್ 2 ಕಡೆ ಬಹುಮತ ಪಡೆದಿದೆ. ಆನೇಕಲ್,ಬಂಗಾರಪೇಟೆ, ಬಾಗೇಪಲ್ಲಿ, ಪಾವಗಡ, ಕುಣಿಗಲ್, ಕೆ.ಆರ್.ನಗರ, ಬಸವನಬಾಗೇವಾಡಿ, ಬಾಲ್ಕಿ, ಹುಮನಾಬಾದ್, ಚಿಟಗುಪ್ಪ, ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ. ಮೂಡುಬಿದಿರೆ, ಗುಂಡ್ಲುಪೇಟೆ, ಮುಂಡರಗಿ, ನರಗುಂದ, ಬ್ಯಾಡಗಿಯಲ್ಲಿ ಬಿಜೆಪಿ ಅಧಿಕಾರ ಹೊಂದುವಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಬನ್ನೂರು, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್‌ಗೆ ಬಹುಮತ ಸಿಕ್ಕಿದೆ.

ಶ್ರೀನಿವಾಸಪುರದಲ್ಲಿ ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮಾಲೂರಿನಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ ಅಧಿಕಾರ ಹಿಡಿಯಬೇಕಾದರೆ ಪಕ್ಷೇತರರ ಬೆಂಬಲ ಅನಿವಾರ್ಯ. ಕಡೂರು,ಮಳವಳ್ಳಿ, ನವಲಗುಂದದಲ್ಲಿ ಕಾಂಗ್ರೆಸ್– ಜೆಡಿಎಸ್ ಒಟ್ಟಾಗಿ ಅಧಿಕಾರ ಹಂಚಿಕೊಳ್ಳುವ ಅವಕಾಶಗಳಿವೆ.ಇಂಡಿ, ಶಿಗ್ಗಾವಿಯಲ್ಲಿ ಬಿಜೆಪಿಯು ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಸಾಧ್ಯವಿದೆ.

ಪಟ್ಟಣ ಪಂಚಾಯಿತಿ: 19 ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 9, ಕಾಂಗ್ರೆಸ್ 4 ಕಡೆ ಬಹುಮತ ಪಡೆದಿದೆ. ಮೊಳಕಾಲ್ಮುರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಸುಳ್ಯ, ಕಲಘಟಗಿ, ಹೊನ್ನಾವರ, ಸಿದ್ದಾಪುರ, ಔರಾದ್‌ಗಳಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ನರಸಿಂಹರಾಜಪುರ, ಮೂಲ್ಕಿ, ಯಳಂದೂರು, ಕಮಲಾಪುರದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ.

ತುರುವೇಕೆರೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಒಗ್ಗೂಡಿದರೂ ಪಕ್ಷೇತರ ಅಭ್ಯರ್ಥಿಯ ಬೆಂಬಲ ಅತ್ಯಗತ್ಯ. ಅಲ್ಲಿ ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆದರೆ ಬಿಜೆಪಿ ಕೂಡ ಅಧಿಕಾರ ಹಿಡಿಯಬಹುದು. ಆಲೂರಿನಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರ ಹಿಡಿಯುವ ಅವಕಾಶಗಳಿವೆ. ಅರಕಲಗೂಡು, ಹೊನ್ನಾವರ, ಅಳ್ನಾವರದಲ್ಲಿ ಕಾಂಗ್ರೆಸ್– ಜೆಡಿಎಸ್ ಒಗ್ಗೂಡಿ ಗದ್ದುಗೆ ಏರಬಹುದು. ಹೊಳಲ್ಕೆರೆಯಲ್ಲಿ ಪಕ್ಷೇತರರ ಬೆಂಬಲ ಇಲ್ಲದೆ ಯಾರೂ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಇದೆ.

ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಜೆಡಿಎಸ್–ಕಾಂಗ್ರೆಸ್‌ ಸ್ಥಳೀಯ ಆಡಳಿತ ಹಿಡಿಯಲು ಮೈತ್ರಿಗೆ ಮುಂದಾಗಲಿವೆ.

ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ನಮ್ಮ ಪಕ್ಷ ಅಧಿಕಾರ ಹಿಡಿಯುವ ಅವಕಾಶ ಇರುವ ಕಡೆಗಳಲ್ಲಿ ಜೆಡಿಎಸ್‌ ಬೆಂಬಲ ನೀಡಲಿದೆ. ಜೆಡಿಎಸ್‌ಗೆ ಅನುಕೂಲಕರ ವಾತಾವರಣ ಇರುವ ಕಡೆ ಕಾಂಗ್ರೆಸ್‌ ಬೆಂಬಲ ನೀಡಲಿದೆ. ಅಲ್ಲಿಯೂ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದರು.

ಪಕ್ಷಗಳ ಹಿಂದಿಕ್ಕಿದ ಪಕ್ಷೇತರರು
ತಾಳಿಕೋಟೆ, ಭಟ್ಕಳ ಪುರಸಭೆಗಳಲ್ಲಿ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ತಾಳಿಕೋಟೆಯ ಒಟ್ಟು 23 ಸ್ಥಾನಗಳಲ್ಲಿ 16 ಮಂದಿ ಪಕ್ಷೇತರರು ಗೆಲುವು ಕಂಡಿದ್ದು, ಕಾಂಗ್ರೆಸ್, ಬಿಜೆಪಿ ತಲಾ 3, ಜೆಡಿಎಸ್ 1 ವಾರ್ಡ್‌ನಲ್ಲಿ ಆಯ್ಕೆ ಆಗಿದೆ. ಭಟ್ಕಳದ 23 ವಾರ್ಡ್‌ಗಳಲ್ಲಿ 18 ಪಕ್ಷೇತರರು ಜಯ ದಾಖಲಿಸಿದ್ದು, ಕಾಂಗ್ರೆಸ್ 4, ಬಿಜೆಪಿ 1 ವಾರ್ಡ್‌ನಲ್ಲಿ ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT