ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ಜಾಫರಾಬಾದ್‌ನಲ್ಲಿ ಘರ್ಷಣೆ

Last Updated 23 ಫೆಬ್ರುವರಿ 2020, 20:01 IST
ಅಕ್ಷರ ಗಾತ್ರ

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಈಶಾನ್ಯ ದೆಹಲಿಯ ಜಾಫರಾಬಾದ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದಾರೆ.

ಸೀಲಾಂಪುರ– ಮೌಜ್‌ಪುರ ಮತ್ತು ಯಮುನಾ ವಿಹಾರ್‌ಗೆ ಸಂಪರ್ಕ ಕಲ್ಪಿಸುವ ಜಾಫರಾಬಾದ್‌ ಮೆಟ್ರೊ ರೈಲು ನಿಲ್ದಾಣದ ಬಳಿ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದು, ಈ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

500ಕ್ಕೂ ಹೆಚ್ಚು ಮಹಿಳೆಯರು ಶನಿವಾರ ರಾತ್ರಿಯಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ಕಾರಣಕ್ಕೆ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಮುಚ್ಚಲಾಗಿತ್ತು.

ಕೇಂದ್ರ ಸರ್ಕಾರವು ಕಾಯ್ದೆಯನ್ನು ಹಿಂಪಡೆಯುವ ವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿ
ರುವ ಮಹಿಳೆಯರು ತಿಳಿಸಿದ್ದಾರೆ.

‘ಜಾಫರಾಬಾದ್‌ ನಿಲ್ದಾಣದಲ್ಲಿ ಮೆಟ್ರೊ ರೈಲುಗಳು ನಿಲುಗಡೆಯಾಗುವುದಿಲ್ಲ’ ಎಂದು ದೆಹಲಿ ಮೆಟ್ರೊ ಟ್ವೀಟ್‌ ಮಾಡಿದೆ.

ಅಲಿಗಡದಲ್ಲಿ ಪ್ರತಿಭಟನೆ: ಸಿಎಎ ವಿರೋಧಿಸಿ ಉತ್ತರ ಪ್ರದೇಶದ ಅಲಿಗಡ ಜಿಲ್ಲಾಧಿಕಾರಿ ಕಚೇರಿಗೆ ಭೀಮ್‌ ಆರ್ಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರ್‍ಯಾಲಿಯನ್ನು ಪೊಲೀಸರು ಅರ್ಧದಲ್ಲೇ ತಡೆದಿದ್ದಾರೆ.

ಇಲ್ಲಿನ ಓಲ್ಡ್ ಸಿಟಿ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದಾರೆ.

ದುಷ್ಕರ್ಮಿಯಿಂದ ಗುಂಡಿನ ದಾಳಿ: ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ತಾರಿಕ್‌ (22) ಎಂಬ ಯುವಕ ಗಾಯಗೊಂಡಿದ್ದಾನೆ.

ಯುವಕನನ್ನು ಇಲ್ಲಿನ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್‌ ನೆಹರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನನುಕೂಲಕ್ಕೆ ಪೊಲೀಸರೇ ಕಾರಣ: ‘ಸಿಎಎ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯು
ತ್ತಿದ್ದು, ಅನಗತ್ಯವಾಗಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿರುವುದರಿಂದ ಪ್ರಯಾಣಿಕರಿಗೆ ಅನನುಕೂಲವಾಗಿದೆ’ ಎಂದು ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್‌ ಅಬೀಬುಲ್ಲಾ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಯ್ಯದ್‌ ಬಹದ್ದೂರ್‌ ಅಬ್ಬಾಸ್‌ ನಖ್ವಿ ಮತ್ತು ಭೀಮ್‌ ಆರ್ಮಿ ಮುಖಂಡ ಚಂದ್ರಶೇಖರ ಆಜಾದ್‌ ಅವರು ಕೂಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಇದೇ ನಿಲುವು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT