‘ದೇವಸ್ಥಾನ ಭೇಟಿಯಿಂದ ಆಡಳಿತಕ್ಕೆ ಧಕ್ಕೆಯಾಗಿಲ್ಲ’

7
ನಾಡಿಗೆ ಒಳಿತು ಬಯಸಿದ್ದರಲ್ಲಿ ತಪ್ಪೇನಿದೆ: ಎಚ್‌ಡಿಕೆ

‘ದೇವಸ್ಥಾನ ಭೇಟಿಯಿಂದ ಆಡಳಿತಕ್ಕೆ ಧಕ್ಕೆಯಾಗಿಲ್ಲ’

Published:
Updated:

ನವದೆಹಲಿ: ‘ದೇವರ ದಯೆಯಿಂದಲೇ ನನಗೆ ಅಧಿಕಾರ ಪ್ರಾಪ್ತವಾಗಿದ್ದರಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ. ನನ್ನ ದೇವಸ್ಥಾನ ಭೇಟಿಯಿಂದ ಸುಸೂತ್ರ ಆಡಳಿತ ನಿರ್ವಹಣೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಪ್ರಮಾಣ ವಚನ ಸ್ವೀಕರಿಸಿದ ನಂತರ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇದ್ದೇನೆ ಎಂಬ ಬಗ್ಗೆ ಟೀಕೆಗಳು ಎದುರಾಗುತ್ತಿವೆ. ದೇವಸ್ಥಾನಗಳಿಗೆ ತೆರಳಿ ನಾಡಿಗೆ ಒಳಿತನ್ನು ಬಯಸಿದ್ದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.

‘ಕಳೆದ ವಾರ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಜಮೀನಿಗೆ ಭೇಟಿ ನೀಡಿ ಭತ್ತದ ಸಸಿ ನಾಟಿ ಮಾಡಿ ಬಂದಿರುವುದಕ್ಕೆ ರೈತ ಸಮುದಾಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಅದೇ ಮಾದರಿಯಲ್ಲೇ ರಾಜ್ಯದ ಪ್ರತಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ರೈತರ ಜಮೀನಿಗೆ ತೆರಳಿ ಕೃಷಿಯ ಕುರಿತು ಅರಿವು ಮೂಡಿಸಲು ಯತ್ನಿಸುವೆ’ ಎಂದು ಅವರು ಹೇಳಿದರು.

ಕಡಿಮೆ ಮಳೆ ಸುರಿಯುವ ಪ್ರದೇಶದ ರೈತರಲ್ಲಿ ಪರ್ಯಾಯ ಬೆಳೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಧಿಕ ನೀರನ್ನು ಆಶ್ರಯಿಸುವ ಕಬ್ಬು, ಭತ್ತ ಮತ್ತಿತರ ಬೆಳೆಗಳ ಬದಲಿಗೆ, ಅಲ್ಪಾವಧಿ ಬೆಳೆ ಬೆಳೆಯುವಂತೆ ಪ್ರೇರೇಪಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ‘ರೈತಸ್ಪಂದನ’ ಕಾರ್ಯಕ್ರಮದ ಮೂಲಕವೂ ರೈತರ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆಯ ಅಭಾವ ಕಂಡುಬಂದಿದೆ. ಒಂದೆರಡು ಜಲಾಶಯಗಳನ್ನು ಹೊರತುಪಡಿಸಿ ನಾಡಿನ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ಪರಿಹಾರ ಕಾರ್ಯಕ್ರಮಗಳು ನಡೆದಿವೆ ಎಂದು ಅವರು ವಿವರಿಸಿದರು.

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪಿನ ಕುರಿತು ಸಮಗ್ರವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು. ಕಾನೂನು ತಜ್ಞರು ನ್ಯಾಯಮಂಡಳಿಗೆ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ. ಸರ್ಕಾರ ಈ ಕುರಿತು ನಿರ್ಧಾರ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.

**

ಹೆಸರು ಖರೀದಿಗೆ ಕ್ರಮ

ಉತ್ತರ ಕರ್ನಾಟಕದ ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ರೈತರು ಬೆಳೆದಿರುವ ಹೆಸರು ಬೆಳೆಯ ಇಳುವರಿ ಕುಂಠಿತಗೊಂಡಿದೆ. ಅಷ್ಟಿಷ್ಟು ಬೆಳೆ ಕೈಗೆಟುಕಿದ್ದು, ದರ ಕುಸಿತದಿಂದ ಕೃಷಿಕರಿಗೆ ಸಮಸ್ಯೆಯಾಗಿದೆ. ಅವರ ನೆರವಿಗಾಗಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಖರೀದಿಗಾಗಿ ಕ್ರಮ ಕೈಗೊಳ್ಳಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !