72ನೇ ಸ್ವಾತಂತ್ರ್ಯ ದಿನಾಚರಣೆ: ಅಖಂಡ ಕರ್ನಾಟಕ ಅಸ್ಮಿತೆ ಮಂತ್ರ ಜಪಿಸಿದ ಸಿ.ಎಂ

7
ಕೃಷಿಕರ ಬದುಕು ಹಸನುಗೊಳಿಸಲು ‘ರೈತ ಸ್ಪಂದನ’ * ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ * ಎಲ್ಲರಿಗೂ ವಿದ್ಯುತ್‌

72ನೇ ಸ್ವಾತಂತ್ರ್ಯ ದಿನಾಚರಣೆ: ಅಖಂಡ ಕರ್ನಾಟಕ ಅಸ್ಮಿತೆ ಮಂತ್ರ ಜಪಿಸಿದ ಸಿ.ಎಂ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಖಂಡ ಕರ್ನಾಟಕ ಅಸ್ಮಿತೆಯ ಮಂತ್ರವನ್ನು ಜಪಿಸಿದರು.

ಇಲ್ಲಿನ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನೂರು ವರ್ಷಗಳ ಇತಿಹಾಸ ಹೊಂದಿರುವ ಏಕೀಕರಣ ಚಳವಳಿಯ ಮೂಸೆಯಲ್ಲಿ ಮೂಡಿದ ಅಖಂಡ ಕರ್ನಾಟಕ ಕೋಟ್ಯಾಂತರ ಕನ್ನಡಿಗದ ಕನಸನ್ನು ನನಸು ಮಾಡಿತ್ತು. ಪ್ರತಿ ಕನ್ನಡಿಗರ ಎದೆಯಲ್ಲೂ ಅಭಿಮಾನದ ಅಲೆಯನ್ನು ಉಕ್ಕಿಸಿತ್ತು. ರಾಜ್ಯದ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವ ಕ್ಷೀಣ ಸ್ವರಗಳು ಆಗಾಗ ಕೇಳಿ ಬರುತ್ತಲೇ ಇವೆ. ಮೊಳಕೆ ಒಡೆಯುವ ಮುನ್ನವೇ ಅವುಗಳನ್ನು ಹೊಸಕಿ ಹಾಕುವ ಆತ್ಮಪ್ರಜ್ಞೆ ಕನ್ನಡಿಗರ ಸಂಕಲ್ಪ ಶಕ್ತಿಯ ಪ್ರತೀಕ. ಏಕೀಕೃತ ಕನ್ನಡ ಮನಸುಗಳಿಗೆ ಸಾವಿರ ಶರಣು’ ಎಂದು ಅವರು ಧನ್ಯವಾದ ಸಲ್ಲಿಸಿದರು.

‘ಕಾಲನ ತುಳಿತಕ್ಕೆ ಸಿಲುಕಿ ಮುಂಬೈ ಕರ್ನಾಟಕ, ಹೈದರಾಬಾದ್‌ ಪ್ರಾಂತ್ಯ, ಮದ್ರಾಸ್‌ ಪ್ರಾಂತ್ಯ, ಮೈಸೂರು ರಾಜ್ಯ, ಕೊಡಗು, ಸವಣೂರು– ಜಮಖಂಡಿ ಮುಧೋಳಗಳಂತಹ ಸಣ್ಣ ಪುಟ್ಟ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರ್ನಾಟಕಕ್ಕೆ ಏಕೀಕರಣ ಚಳವಳಿಯಿಂದ ಒಂದು ಅಸ್ಮಿತೆ ದೊರಕಿದೆ. ಈ ಸಶಕ್ತ ಚಳವಳಿ ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕದ ಗಟ್ಟಿನೆಲದಲ್ಲಿ. ಈ ಚಳವಳಿ ಸಮಗ್ರ ರಾಜ್ಯಕ್ಕೆ ಪಸರಿಸಿದ ಇತಿಹಾಸ ಮೈನವಿರೇಳಿಸುವಂತಹದ್ದು’ ಎಂದು ನೆನಪಿಸಿದರು.

ಬಂಕಿಮಚಂದ್ರರ ‘ವಂದೇ ಮಾತರಂ’ನಷ್ಟೇ ಪ್ರಭಾವಶಾಲಿಯಾದ ‘ಸಿರಿಗನ್ನಡಂ ಗೆಲ್ಗೆ’ ಘೋಷವಾಕ್ಯ ಸಮಸ್ತ ಕನ್ನಡಿಗರ ಆತ್ಮಾಭಿಮಾನ ಕೆರಳಿಸಿದೆ. ಈ ಉಕ್ತಿಯನ್ನು ನೀಡಿದ ಹಣಮಂತರಾವ್‌ ದೇಶಪಾಂಡೆ ಅವರ ಕರ್ಮಭೂಮಿ ಧಾರವಾಡ. ಅವರು ಕಟ್ಟಿಬೆಳೆಸಿದ ವಿದ್ಯಾವರ್ಧಕ ಸಂಘ ಏಕೀಕರಣ ಚಳವಳಿಯಲ್ಲಿ ನಿರ್ವಹಿಸಿದ ಪಾತ್ರ ಅಜರಾಮರ ಎಂದು ಶ್ಲಾಘಿಸಿದರು

‘ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗವಾಗದಂತೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ. ಹಿಂದಿನ ಸರ್ಕಾರ ಹಾಗೂ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್‌ಗಳು ಇದಕ್ಕೆ ಪೂರಕವಾಗಿವೆ. ಇವೆರಡರ ಅನುಷ್ಠಾನಕ್ಕೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಿಸಿದ ಹಾಗೂ ಸುವರ್ಣಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ನನಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದೂ ಬೆಳಗಾವಿಯಿಂದಲೇ. ನನ್ನ 47 ಗ್ರಾಮ ವಾಸ್ತವ್ಯಗಳಲ್ಲಿ 27 ಉತ್ತರ ಕರ್ನಾಟಕದಲ್ಲೇ ನಡೆದಿವೆ. ನನ್ನ ಅಭಿಮಾನದ ಬೆಳಗಾವಿಗೆ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆ. ಗಡಿಭಾಗದ ಕನ್ನಡಿಗರ ಹಿತರಕ್ಷಣೆಗಾಗಿ ನೆರೆರಾಜ್ಯದ ಸರ್ಕಾರಗಳ ಜೊತೆ ಸೌಹಾರ್ದಯುತ ಚರ್ಚೆ ನಡೆಸುತ್ತೇನೆ’ ಎಂದರು.

‘ರಾಷ್ಟ್ರದ ಪ್ರಗತಿಯ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆ. ಜೊತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಎಲ್ಲ ಜಿಲ್ಲೆಗಳು ಅತ್ಯುತ್ತಮ ಸ್ಥಾನ ಪಡೆಯಬೇಕು. ಅಭಿವೃದ್ಧಿ ಎಂದರೆ ಕೇವಲ ರಸ್ತೆ ಕಟ್ಟಡ, ಮೂಲಸೌಕರ್ಯ, ವೃದ್ಧಿ ಮಾತ್ರವಲ್ಲ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ನಮ್ಮ ಸರ್ಕಾರದ ಮಾನದಂಡಗಳು’ ಎಂದು ತಿಳಿಸಿದರು.

––––––

ರೈತರ ಸಂಕಷ್ಟಗಳಿಗೆ ದೂರದೃಷ್ಟಿಯ ಪರಿಹಾರ, ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಗೆ ನಮ್ಮ ಆದ್ಯತೆ. ಸಾಮಾನ್ಯ ಜನರ ಮೊಗದಲ್ಲಿ ಸಂತೃಪ್ತಿಯ ನಗೆ ಕಾಣುವ ಆಶಯ ನನ್ನದು
–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

–––––

ಮುಖ್ಯಮಂತ್ರಿ ಭಾಷಣದ ಮುಖ್ಯಾಂಶಗಳು

* ಕೃಷಿಕರ ಬದುಕು ಹಸನುಗೊಳಿಸಲು ಎಲ್ಲ ಜಿಲ್ಲೆಗಳಲ್ಲಿ ‘ರೈತ ಸ್ಪಂದನ’ ಯೋಜನೆ ಜಾರಿ. ಆಧುನಿಕ ಕೃಷಿ ಪದ್ಧತಿ ಬಗ್ಗೆ ತಿಂಗಳಿಗೊಮ್ಮೆ ಮಾಹಿತಿ ನೀಡುವುದು ಈ ಯೋಜನೆ ಪ್ರಮುಖ ಉದ್ದೇಶ

* ‘ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಪರಿಕಲ್ಪನೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪನೆ

* ಕಲಬುರ್ಗಿಯಲ್ಲಿ ಸೌರ ಉಪಕರಣಗಳ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆ ಉದ್ಯಮ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಹಾಸನದಲ್ಲಿ ಟೈಲ್ಸ್‌ ಮತ್ತು ಸ್ಯಾನಿಟರಿ ಉಪಕರಣ ಉದ್ಯಮ, ಚಿತ್ರದುರ್ಗದಲ್ಲಿ ಗೃಹೋಪಯೋಗಿ ಎಲ್‌ಇಡಿ ಲೈಟ್‌ ತಯಾರಿಸುವ ಉದ್ಯಮ, ಮೈಸೂರು ಜಿಲ್ಲೆಯಲ್ಲಿ ಐಸಿಬಿ ಚಿಪ್‌ ತಯಾರಿ ಉದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್‌ ಬಿಡಿಭಾಗಗಳ ಘಟಕ ಹಾಗೂ ತುಮಕೂರಿನಲ್ಲಿ ಕ್ರೀಡಾಸಾಮಗ್ರಿ ಉದ್ಯಮ ಸ್ಥಾಪನೆ. ಈ ಜಿಲ್ಲೆಗಳಲ್ಲಿ ತಲಾ 1 ಲಕ್ಷ ಉದ್ಯೋಗ ಸೃಷ್ಟಿ

* ಎಲ್ಲ ಮನೆಗೂ ವಿದ್ಯುತ್‌ ಸಂಪರ್ಕ. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ  ಹಗಲು ವೇಳೆ 7 ಗಂಟೆ ವಿದ್ಯುತ್‌

* ಮಹಾತ್ಮ ಗಾಂಧಿ 150ನೇ ವರ್ಷದ ಆಚರಣೆ ಪ್ರಯುಕ್ತ 'ಗಾಂಧಿ 150 ಒಂದು ರಂಗ ಪಯಣ'. ಶೀರ್ಷಿಕೆಯಡಿ ರಾಜ್ಯದಾದ್ಯಂತ 1000 ರಂಗ ಪ್ರದರ್ಶನ

*ಸ್ವಾಮಿ ವಿವೇಕಾನಂದರು ಷಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ 125ನೇ ವರ್ಷಾಚರಣೆ

* ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಡಾ. ಎಚ್. ನರಸಿಂಹಯ್ಯ ಹೆಸರಿನಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ
 * ಸರ್ಕಾರಿ ಶಾಲೆಗಳ ಆಧುನೀಕರಣ
* ಗ್ರಾಮೀಣ ವಿದ್ಯಾರ್ಥಿನಿಯರಿಗೆ ನೆರವಾಗಲು ಪ್ರತ್ಯೇಕ ವಸತಿ ಕಾಲೇಜು ಸ್ಥಾಪನೆ
* ಹಳೆ ವಿದ್ಯಾರ್ಥಿಗಳು ಕಲಿತ ಶಾಲೆಯ ಅಭಿವೃದ್ಧಿಗೆ ನೆರವಾಗಲು ಪೋರ್ಟಲ್ ಸ್ಥಾಪನೆ
* ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಏಕೀಕೃತ ಭೂಸಾರಿಗೆ ಪ್ರಾಧಿಕಾರ ಸ್ಥಾಪನೆ
* ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಮೂರನೆ ಹಂತದಲ್ಲಿ 3831 ಕಿಮೀ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಳಿಸುವ ಗುರಿ
* 2,722 ಕಿ.ಮೀ ಹೆದ್ದಾರಿಯನ್ನು ರೂ 3480 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
* ಮಲೆನಾಡು ಮತ್ತು ಕರಾವಳಿ ಯಲ್ಲಿ 451 ಸಣ್ಣ ಸಂಪರ್ಕ ಸೇತುವೆ ನಿರ್ಮಾಣ

* ಇದೇ ನವೆಂಬರ್‌ 29ರಿಂದ ಮೂರು ದಿನ ‘ಬೆಂಗಳೂರು ಟೆಕ್‌ ಸಮಿಟ್‌’
* ರಾಜ್ಯದಾದ್ಯಂತ ಫ್ಲೆಕ್ಸ್‌ ನಿಷೇಧ ಜಾರಿ

* ಬೆಂಗಳೂರನ್ನು ಫ್ಲೆಕ್ಸ್ ಮುಕ್ತಗೊಳಿಸಲು ಸಹಕಾರ ಕೋರಿದ ಮುಖ್ಯಮಂತ್ರಿ

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !