ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ತಂತ್ರ: ಬಿಜೆಪಿ ‘ಮೈತ್ರಿ’ ಮಂತ್ರ

ದಕ್ಷಿಣ ಭಾರತದ ರಾಜ್ಯಗಳತ್ತ ಕೇಸರಿ ಪಡೆಯ ಚಿತ್ತ; ಪ್ರಾದೇಶಿಕ ಪಕ್ಷಗಳತ್ತ ಚಾಚುತ್ತಿದೆ ಸ್ನೇಹದ ಹಸ್ತ
Last Updated 20 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ನವದೆಹಲಿ: ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಕಳೆದ ಚುನಾವಣೆಯಷ್ಟು ಸುಲಭ ಮಾತಲ್ಲ ಎಂಬ ಸತ್ಯ ಬಿಜೆಪಿಗೆ ಮನವರಿಕೆಯಾದಂತಾಗಿದೆ. ಹೀಗಾಗಿ ಅದು ಈ ಬಾರಿ ‘ಮೈತ್ರಿ ಮಂತ್ರ’ ಪಠಿಸಲು ಆರಂಭಿಸಿದೆ.

ಕಳೆದ ಬಾರಿ ಮೋದಿ ಅಲೆಯಲ್ಲಿ ತೇಲಿದ್ದ ಬಿಜೆಪಿಗೆ ಈ ಬಾರಿ ಮಿತ್ರ ಪಕ್ಷಗಳ ನೆರವಿಲ್ಲದೆ ಸರ್ಕಾರ ರಚಿಸುವುದು ಸಾಧ್ಯವಿಲ್ಲ ಎಂಬ ಸುಳಿವು ದೊರೆಯುತ್ತಲೇ ಹೊಸ ಮಿತ್ರಪಕ್ಷಗಳ ಹುಡುಕಾಟಕ್ಕೆ ಮುಂದಾಗಿದೆ.

ಉತ್ತರ ಭಾರತದ ಹಿಂದಿ ಭಾಷಿಕ ಪ್ರದೇಶಗಳಲ್ಲಿಯ ರಾಜಕೀಯ ಲೆಕ್ಕಾಚಾರ ಮತ್ತು ಚುನಾವಣಾ ಚಿತ್ರಣ ಈ ಬಾರಿ ಸಂಪೂರ್ಣ ಬದಲಾಗಿದೆ. ಮೇಲಾಗಿ ಬದಲಾದ ಈ ಸನ್ನಿವೇಶ ಬಿಜೆಪಿಗೆ ಪೂರಕವಾಗಿಲ್ಲ. ಇದರಿಂದ ಬಿಜೆಪಿ ಸಹಜವಾಗಿ ಹೊಸ ನಿರೀಕ್ಷೆಗಳೊಂದಿಗೆ ದಕ್ಷಿಣ ಭಾರತದತ್ತ ಚಿತ್ತ ಹರಿಸಿದೆ.

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಬಿಜೆಪಿಗೆ ಭದ್ರನೆಲೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ನೆಲೆಯೂರಲು ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸುವುದು ಅನಿವಾರ್ಯ ಎಂಬ ವಾಸ್ತವ ಬಿಜೆಪಿಗೂ ಗೊತ್ತಾಗಿದೆ.

ಎಲ್ಲ ಸಂಗತಿಗಳನ್ನು ಗಮನಿಸಿಯೇ ಬಿಜೆಪಿ ತಮಿಳುನಾಡು–ಪುದುಚೆರಿಯಲ್ಲಿ ಎಐಎಡಿಎಂಕೆ ಮತ್ತು ಪಿಎಂಕೆ ಜತೆ ಮೈತ್ರಿ ಮಾಡಿಕೊಂಡಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಣ್ಣ ರಾಜಕೀಯ ಪಕ್ಷಗಳ ಜತೆ ಚುನಾವಣಾ ಪೂರ್ವ ಮೈತ್ರಿಗಾಗಿ ಯತ್ನಿಸುತ್ತಿದೆ. ಫಲಿತಾಂಶದ ನಂತರ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ಜತೆ ಕೈಜೋಡಿಸುವ ಸುದ್ದಿ ದಟ್ಟವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಭಾರಿ ಸದ್ದು ಮಾಡಿದ ಶಬರಿಮಲೆ ವಿವಾದದ ಲಾಭ ಪಡೆಯುವ ಉಮೇದು ಬಿಜೆಪಿಯಲ್ಲಿ ಕಂಡು ಬರುತ್ತಿದೆ.

ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ತಮಿಳುನಾಡು–ಪುದುಚೆರಿ ಸೇರಿ ದಕ್ಷಿಣ ಭಾರತದಲ್ಲಿ ಒಟ್ಟು 129 ಲೋಕಸಭಾ ಕ್ಷೇತ್ರಗಳಿವೆ. ದಕ್ಷಿಣದಿಂದ ಆಯ್ಕೆಯಾಗುವ ಸಂಸದರು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಬಿಜೆಪಿಯು ತಮಿಳುನಾಡು ಮತ್ತು ಆಂಧ್ರ ಪ್ರದೇಶವನ್ನು ಗಂಭೀರವಾಗಿ ಪರಿಗಣಿಸಿದೆ.

ಆಂಧ್ರದಲ್ಲಿ ಕಳೆದ ಸಲ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಎರಡು ಲೋಕಸಭಾ ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಬಿಜೆಪಿ ಜತೆ ಸಂಬಂಧ ಹಳಸಿದ ಕಾರಣ ನಾಯ್ಡು ಈಗ ವಿರೋಧಿ ಪಾಳಿಯಲ್ಲಿ ಗುರುತಿಸಿಕೊಂಡಿದ್ದಾರೆ. ಟಿಡಿಪಿಯಿಂದ ತೆರವಾಗಿರುವ ಜಾಗವನ್ನು ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ತುಂಬಿಸುವ ಲೆಕ್ಕಾಚಾರ ಬಿಜೆಪಿಯದ್ದು.

ಹೊಸಬರಿಗಾಗಿ ಹುಡುಕಾಟ–ಹಳಬರ ಓಲೈಕೆ
ಹೊಸ ಮಿತ್ರ ಪಕ್ಷಗಳ ಸ್ನೇಹ ಸಂಪಾದಿಸುವ ಜತೆಗೆ ಹಳೆಯ ಮಿತ್ರರನ್ನೂ ಓಲೈಸುವ ಅನಿವಾರ್ಯತೆಯನ್ನು ಬಿಜೆಪಿ ಎದುರಿಸುತ್ತಿದೆ.

ಈ ಎಲ್ಲ ಮುಂದಾಲೋಚನೆ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಹಳೆಯ ಮಿತ್ರರಾದ ಜೆಡಿಯು ಮತ್ತು ಶಿವಸೇನಾ ಜತೆ ಹೆಚ್ಚಿನ ಹಗ್ಗಜಗ್ಗಾಟ ಮತ್ತು ಚೌಕಾಶಿಗೆ ಇಳಿಯಲಿಲ್ಲ. ನಿರೀಕ್ಷೆಗಿಂತ ಹೆಚ್ಚಿನ ಪಾಲು ನೀಡಿ ಸಮಾಧಾನಪಡಿಸಿದೆ.

ಮಹಾರಾಷ್ಟ್ರದಲ್ಲಿ ಮನಸ್ತಾಪ ಮರೆತು ಶಿವಸೇನಾ ಜತೆ ಮತ್ತೆ ಕೈಜೋಡಿಸಿದೆ. ಪುಲ್ವಾಮಾ ದಾಳಿ ಸೇರಿದಂತೆ ಅನೇಕ ಸಂದಿಗ್ಧ ಸಂದರ್ಭಗಳಲ್ಲಿ ಶಿವಸೇನಾ ಬಹಿರಂಗವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಎನ್‌ಡಿಎ ಅಂಗಪಕ್ಷವಾಗಿದ್ದುಕೊಂಡು ಮೋದಿ ನಿರ್ಧಾರಗಳನ್ನು ಟೀಕಿಸುವ ವಿಷಯದಲ್ಲಿ ವಿರೋಧ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇತ್ತು. ಬಿಜೆಪಿ ಮತ್ತು ಮೋದಿ ಅವರನ್ನು ಟೀಕಿಸುವ ಯಾವ ಅವಕಾಶವನ್ನೂ ಶಿವಸೇನಾ ತಪ್ಪಿಸಿಕೊಳ್ಳುತ್ತಿರಲಿಲ್ಲ

ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ ಪೈಕಿ 23 ಕ್ಷೇತ್ರಗಳನ್ನು ಶಿವಸೇನಾಕ್ಕೆ ಬಿಟ್ಟುಕೊಟ್ಟಿರುವ ಬಿಜೆಪಿ ತಾನು 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟ ಎದುರಿಸಲು ಈ ಹೊಂದಾಣಿಕೆ ಬಿಜೆಪಿಗೆ ಅನಿವಾರ್ಯವಾಗಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖುದ್ದಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಮನೆಗೆ ಭೇಟಿ ನೀಡಿ, ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸಿದರು. ಈ ಮೊದಲು ಕೂಡ ಬಿಹಾರಕ್ಕೆ ತೆರಳಿದ್ದ ಅಮಿತ್‌ ಶಾ ಸ್ಥಾನ ಹೊಂದಾಣಿಕೆ ಅಂತಿಮಗೊಳಿಸಿದ್ದರು.

ಕಳೆದ ಬಾರಿ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಯು ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎನ್‌ಡಿಎ 31 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಆ ಪೈಕಿ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು.

ಬಿಜೆಪಿ ಈ ಬಾರಿ ಜೆಡಿಯುಗೆ 17 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದೆ. ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕಜನ ಶಕ್ತಿ ಪಕ್ಷ ಮೊದಲಿನಷ್ಟು ಬಲಶಾಲಿಯಾಗಿಲ್ಲ ಎಂಬ ಸಂಗತಿ ಗೊತ್ತಿದ್ದರೂ ಆ ಪಕ್ಷಕ್ಕೆ ಆರು ಕ್ಷೇತ್ರ ಬಿಟ್ಟು ಕೊಡಲಾಗಿದೆ.

ಸಮ್ಮಿಶ್ರ ಸರ್ಕಾರದ ಸುಳಿವು
ಕಳೆದ ಚುನಾವಣೆಯಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಬಹುಮತದ ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕರು ಸಾರ್ವಜನಿಕವಾಗಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಬಿಜೆಪಿಗೆ ಆ ವಿಶ್ವಾಸ ಉಳಿದಿಲ್ಲ. ಹೀಗಾಗಿ ಅದು ಮೈತ್ರಿಕೂಟದ ಬಗ್ಗೆ ಪ್ರಸ್ತಾಪ ಮಾಡುತ್ತಿದೆ.

ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಸಮ್ಮಿಶ್ರ ಸರ್ಕಾರದ ಯಶಸ್ಸಿನ ಬಗ್ಗೆ ಮಾತನಾಡುತ್ತಿದ್ದಾರೆ. ಎನ್‌ಡಿಎ ಮೊದಲ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರದ ಮುನ್ನಡೆಸಿದ ಬಗ್ಗೆ ಪ್ರಾಸ್ತಾಪ ಮಾಡುತ್ತಿದ್ದಾರೆ.

ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಎರಡು ಪ್ರಬಲ ಮೈತ್ರಿಕೂಟಗಳ ನಡುವೆ ಹಣಾಹಣಿ ನಡೆಯುವುದಂತೂ ಬಹುತೇಕ ಖಚಿತವಾಗಿದೆ. ಈ ನಡುವೆ, ನೆಹರೂ–ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ಅವರ ಅನಿರೀಕ್ಷಿತ ರಂಗ ಪ್ರವೇಶದಿಂದಾಗಿ ಉತ್ತರ ಪ್ರದೇಶದ ರಾಜಕೀಯ ಚಿತ್ರಣ ಕೂಡ ಬದಲಾಗಿದೆ.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಜೋಡಿ ನಿದ್ದೆಗೆಡಸಿದೆ.

ಈ ಮೊದಲು ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಎಂದು ವಿಶ್ಲೇಷಿಸಲಾಗಿತ್ತು. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶದ ನಂತರ ನೇರ ಸ್ಪರ್ಧೆಯು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT