ಶುಕ್ರವಾರ, ಫೆಬ್ರವರಿ 21, 2020
27 °C

ದೇಶದಲ್ಲಿ ಮೊದಲ ಬಾರಿ ಶ್ವಾನಕ್ಕೆ ‘ಪೇಸ್‌ಮೇಕರ್‌’ ಅಳವಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಪಶುವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಏಳೂವರೆ ವರ್ಷದ ಕಾಕರ್‌ ಸ್ಪೇನಿಯಲ್ ಜಾತಿಯ ಶ್ವಾನಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ‘ಪೇಸ್‌ಮೇಕರ್‌’ (ಹೃದಯ ಬಡಿತ ನಿಯಂತ್ರಿಸುವ ಉಪಕರಣ) ಉಪಕರಣ ಅಳವಡಿಸಲಾಗಿದೆ.  

‘ಈ ಜಾತಿಯ ಶ್ವಾನದ ಹೃದಯ ಬಡಿತ ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ 60–120 ಇರುತ್ತದೆ. ಖುಷಿ ಹೆಸರಿನ ಹೆಣ್ಣು ಶ್ವಾನದ ಹೃದಯ ಬಡಿತ ಪ್ರತಿ ನಿಮಿಷಕ್ಕೆ 20ಕ್ಕೆ ಇಳಿಕೆಯಾಗಿತ್ತು. ಈ ಕಾರಣ ಹೃದಯದಿಂದ ಸೂಕ್ತವಾಗಿ ರಕ್ತ ಸರಬರಾಜು ಆಗುತ್ತಿರಲಿಲ್ಲ. ಇದರ ಪರಿಣಾಮವಾಗಿ ಖುಷಿ ಅನಾರೋಗ್ಯಕ್ಕೆ ಒಳಗಾಗಿತ್ತು. ಇದೀಗ ಆಮದು ಮಾಡಿಕೊಂಡ ಪೀಡಿಯಾಟ್ರಿಕ್‌ ಪೇಸ್‌ಮೇಕರ್‌ ಅನ್ನು ಅಳವಡಿಸಲಾಗಿದೆ’ ಎಂದು ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿರುವ ಮ್ಯಾಕ್ಸ್‌ ವೆಟ್ಸ್‌ ಖಾಸಗಿ ಆಸ್ಪತ್ರೆಯ ಪಶುವೈದ್ಯ ಭಾನು ದೇವ್‌ ಶರ್ಮಾ ಹೇಳಿದರು. 

‘ಇಸಿಜಿ ಮುಖಾಂತರ ಹೃದಯದಲ್ಲಿ ರಕ್ತ ಸರಬರಾಜಿಗೆ ಅಡ್ಡಿ ಇರುವುದು ಪತ್ತೆಯಾಗಿತ್ತು. ಈ ಕುರಿತು ಯುರೋಪ್‌ನಲ್ಲಿರುವ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಯಿತು. ದೇಶದಲ್ಲಿ ಇದೇ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಶ್ವಾನವೊಂದಕ್ಕೆ ಪೇಸ್‌ಮೇಕರ್‌ ಅಳವಡಿಸಲಾಗಿದೆ’ ಎಂದರು.

‘ಶಸ್ತ್ರಚಿಕಿತ್ಸೆಗೂ ಮೊದಲು ಯಾವಾಗಲೂ ನಿಶ್ಯಕ್ತವಾಗಿದ್ದ ಖುಷಿ ಇದೀಗ ಲವಲವಿಕೆಯಿಂದಿದೆ’ ಎಂದು ಶ್ವಾನದ ಮಾಲೀಕ ಗುರುಗಾಂವ್‌ನ ಮನು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು