ಗುರುವಾರ , ಜೂನ್ 24, 2021
23 °C
ನೀತಿ ಸಂಹಿತೆ ಇದ್ದರೂ ಸಚಿವ ಸಂಪುಟ ಸಭೆ ಕರೆದ ಚಂದ್ರಬಾಬು ನಾಯ್ಡು

ಶಾಸಕಾಂಗ– ಕಾರ್ಯಾಂಗ ತಿಕ್ಕಾಟಕ್ಕೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೇ 14ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ನಡುವೆ ಇನ್ನೊಂದು ಸುತ್ತಿನ ತಿಕ್ಕಾಟ ನಡೆಯುವುದು ಖಚಿತ ಎಂಬಂತಾಗಿದೆ.

‘ಫೋನಿ ಚಂಡಮಾರುತದಿಂದ ಆಗಿರುವ ಹಾನಿಯ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸುವುದು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಇತರ ಅಗತ್ಯ ವಿಚಾರಗಳ ಬಗ್ಗೆ ಚರ್ಚಿಸುವುದು ಈ ಸಭೆಯ ಉದ್ದೇಶ’ ಎಂದು ನಾಯ್ಡು ಹೇಳಿದ್ದಾರೆ.

‘ಸಭೆಯಲ್ಲಿ ಪಾಲ್ಗೊಳ್ಳಲು ಚುನಾವಣಾ ಆಯೋಗದಿಂದ ಅನುಮತಿ ಕೇಳಿದ್ದೆವು. ‘ನಾವು ಚುನಾವಣಾ ಆಯೋಗದ ನಿಬಂಧನೆಗಳಿಗೆ ಒಳಪಟ್ಟವರಾಗಿದ್ದು, ನೀತಿ ಸಂಹಿತೆಗೆ ಬದ್ಧರಾಗಿರಬೇಕು’ ಎಂದು ಆಯೋಗವು ನಮಗೆ ಸೂಚನೆ ನೀಡಿದೆ’ ಎಂದು ಚುನಾವಣಾ ಆಯೋಗವೇ ನೇಮಕ ಮಾಡಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಎಲ್.ವಿ. ಸುಬ್ರಹ್ಮಣ್ಯ ಸ್ಪಷ್ಟಪಡಿಸಿದ್ದಾರೆ.

ಮಾದರಿ ನೀತಿ ಸಂಹಿತೆಯ ನಿಯಮ 19.6.1ರ ಪ್ರಕಾರ, ನೀತಿ ಸಂಹಿತೆ ಜಾರಿಯಲ್ಲಿರುವಾಗ ಮುಖ್ಯಮಂತ್ರಿಯಾಗಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಚಿವರಾಗಲಿ, ರಾಜಕೀಯ ಸಂಸ್ಥೆಗಳಾಗಲಿ ಸರ್ಕಾರಿ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮಾಡುವಂತಿಲ್ಲ. ನೀತಿ ಸಂಹಿತೆ ಇರುವ ಕಾರಣಕ್ಕೆ ಮುಖ್ಯ ಕಾರ್ಯದರ್ಶಿಯು ಸಭೆಯಿಂದ ದೂರ ಉಳಿಯಲು ತೀರ್ಮಾನಿಸಿದರೆ, 14ರಂದು ನಡೆಯಲಿರುವ ಸಂಪುಟ ಸಮಿತಿ ಸಭೆಯ ಕಾರ್ಯಸೂಚಿಯನ್ನು ತಯಾರಿಸುವವರು ಯಾರು ಎಂಬುದು ಹಿರಿಯ ಅಧಿಕಾರಿಗಳ ಪ್ರಶ್ನೆಯಾಗಿದೆ.

‘ಸಭೆಯ ಕಾರ್ಯಸೂಚಿ ತಯಾರಿಸಬೇಕಾದರೆ ಮುಖ್ಯ ಕಾರ್ಯದರ್ಶಿಯು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಸಭೆಯ ಕಾರ್ಯಸೂಚಿ ತಯಾರಿಸದಿದ್ದರೆ ಮತ್ತು ಅಧಿಕೃತ ಟಿಪ್ಪಣಿ ಸಲ್ಲಿಸದಿದ್ದರೆ ಆ ಸಭೆಯು ಅನಧಿಕೃತ ಎನಿಸುತ್ತದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಏನೇ ಆದರೂ ಸಭೆ ನಡೆಸಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿರುವ ನಾಯ್ಡು, ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಫೋನಿ ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ನಾಲ್ಕು ಜಿಲ್ಲೆಗಳ ಸ್ಥಿತಿಯ ಪರಿಶೀಲನೆಗಾಗಿ ಸಭೆ ಆಯೋಜಿಸಲು ಆಯೋಗವು ನೀತಿ ಸಂಹಿತೆಯನ್ನು ಸಡಿಲಿಸಿತ್ತು. ಹೀಗಿದ್ದರೂ ಮುಖ್ಯ ಕಾರ್ಯದರ್ಶಿ ಸಭೆಗೆ ಹಾಜರಾಗಿರಲಿಲ್ಲ.

ಸಚಿವ ಸಂಪುಟದ ಸಭೆ ನಡೆಸುವುದು ರಾಜ್ಯ ಸರ್ಕಾರದ ಹಕ್ಕು. ಅದಕ್ಕೆ ಅವಕಾಶ ನೀಡದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಕೃಷಿ ಸಚಿವ ಚಂದ್ರಮೋಹನ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ‘ತಾವು ಸಂವಿಧಾನಕ್ಕೂ ಮೇಲೆ ಎಂಬಂತೆ ಮುಖ್ಯ ಕಾರ್ಯದರ್ಶಿ ವರ್ತಿಸುತ್ತಿದ್ದಾರೆ’ ಎಂದು ಇನ್ನೊಬ್ಬ ಸಚಿವ ಪಿ. ಪುಲ್ಲ ರಾವ್‌ ಆರೋಪಿಸಿದ್ದಾರೆ. ಆಂಧ್ರದ ವಿರುದ್ಧ ತಾರತಮ್ಯ ಭಾವ ತಾಳಲಾಗುತ್ತಿದ್ದು, ಇದರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ವಕ್ತಾರ ಲಂಕಾ ದಿನಕರ್‌ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ ಅವರಿಗೆ ಪತ್ರ ಬರೆದಿರುವ ನಾಯ್ಡು ಅವರು, ‘ಆಯೋಗವು ಕೇಂದ್ರ ಹಾಗೂ  ರಾಜ್ಯಗಳಿಗೆ ಒಂದು ಹಾಗೂ ಆಂಧ್ರಪ್ರದೇಶಕ್ಕೆ ಬೇರೆಯೇ ಒಂದು ನೀತಿಯನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ‘ರಾಜ್ಯದ ಗುಪ್ತಚರ ಇಲಾಖೆಯ ಮುಖ್ಯಸ್ಥರು ನನ್ನನ್ನು ಭೇಟಿಯಾಗುವುದನ್ನು ತಡೆಯುವ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು