ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ನೀತಿ- ನ್ಯಾಯ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

–ವಿದ್ಯಾಧರ ರೈ ಎಮ್.ಆರ್.  ಐವನ್ ಏಫ್. ಲೋಬೊ

‘ಅಭಿವೃದ್ಧಿ, ವೇಗದ ಅಭಿವೃದ್ಧಿ ಮತ್ತು ಸಮಗ್ರ ಅಭಿವೃದ್ಧಿ ಎಂಬ ಮೂರು ಮಂತ್ರಗಳಿಂದ ಜನರ ಮನಸ್ಸನ್ನು ಗೆಲ್ಲೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ವಿಧಾನಸಭೆಯ ಚುನಾವಣೆಯ ಏರು ಸಮಯದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ (ಪ್ರ.ವಾ., ಏ.27).

ಅಭಿವೃದ್ಧಿಯೇ ಮೂಲ ಮಂತ್ರ ಹಾಗೂ ಅದುವೇ ದೇಶ ಭವಿಷ್ಯದಲ್ಲಿ ಕ್ರಮಿಸಲು ಅನಿವಾರ್ಯವಾಗಿರುವ ಏಕಮಾತ್ರ ತಾರಕಮಂತ್ರವೆಂದು ವಿವಿಧ ರೂಪಗಳಲ್ಲಿ ಸಾರುತ್ತಿರುವ ಯುಗದಲ್ಲಿ ನಾವಿದ್ದೇವೆ. ಅಭಿವೃದ್ಧಿ ಎನ್ನುವುದು, ಚುನಾವಣೆಯ ಹೊಸ್ತಿಲಲ್ಲಿರುವಾಗ ಜನಮನ್ನಣೆ ಗಳಿಸುವ, ಅಧಿಕಾರ
ಹಿಡಿಯಲು ಬಯಸುವವರ ತಂತ್ರಗಾರಿಕೆಯೇ? ಜನರ ಮನಸ್ಸನ್ನು ಸೆಳೆಯಲು ಸೃಷ್ಟಿಸುವ ಭ್ರಮಾಲೋಕವೇ ಎನ್ನುವುದನ್ನು ಸಮಚಿತ್ತದಲ್ಲಿ ವಿಶ್ಲೇಷಿಸುವುದು ಅಗತ್ಯ. ಜತೆಗೆ ನಮ್ಮ ಸಾಮಾಜಿಕ ಬದುಕಿನ ವಿವಿಧ ಪ್ರಕ್ರಿಯೆಗಳ ಚಾಲಕ ಸ್ಥಾನದಲ್ಲಿರುವ ಪ್ರಭುತ್ವವು ಅಭಿವೃದ್ಧಿಯ ನೀತಿ ಮತ್ತು ನ್ಯಾಯಗಳನ್ನು ಹೇಗೆ ನಿಭಾಯಿಸುತ್ತದೆ? ಅಭಿವೃದ್ಧಿಯ ಹೊಣೆಗಾರಿಕೆಯನ್ನು ಎಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತದೆ ಎಂಬುದರ ಮೇಲೂ ಬೆಳಕು ಚೆಲ್ಲಬೇಕಾಗುತ್ತದೆ.

ವಸಾಹತುಶಾಹಿ ಪರಾಧೀನತೆಯಿಂದ ರಾಜಕೀಯವಾಗಿ ಮುಕ್ತಗೊಂಡ ಭಾರತ, ತನ್ನ ಅಸಮಾನತೆಗಳನ್ನು ತೊಡೆದುಮುನ್ನಡೆಯಲು ಸಾಂವಿಧಾನಿಕ ಪ್ರಭುತ್ವದ ದಾರಿಯನ್ನು ಸ್ವೀಕರಿಸಿದೆ. ಮಾನವ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಎಲ್ಲಾ ರಂಗಗಳಲ್ಲಿ ವಿಸ್ತರಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿದೆ. ಇದನ್ನೇ ಅಭಿವೃದ್ಧಿಯ ಅರ್ಥವೆಂದು ಪರಿಗಣಿಸಿದರೆ, ಭಾರತದಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿಯ ಕಥನವು ಸಾಧನೆಯ ಶಿಖರಾರೋಹಣವಲ್ಲ, ಎಲ್ಲರ ಏಕಕಾಲದ ಭ್ರಮನಿರಸನವೂ ಅಲ್ಲ. ಇದು ಜನಸಮುದಾಯಗಳು ನಿರಂತರ ಕಣ್ಣುಮುಚ್ಚಿ ಜಯಘೋಷ ಕೂಗುವ ಅಥವಾ ಎಲ್ಲರೂ ತಿರಸ್ಕರಿಸಬೇಕಾದ ಪ್ರವೃತ್ತಿಯೂ ಅಲ್ಲ.

ಅಸಮಾನತೆಯನ್ನು ವಿಸ್ತರಿಸುವ ಜೊತೆಯಲ್ಲಿಯೇ ಬಡತನವನ್ನು ನಿಯಂತ್ರಿಸಲು ಪ್ರಯತ್ನಿಸಿದ ನಮ್ಮ ಅಭಿವೃದ್ಧಿಯ ಮಾದರಿಯು ಎಚ್ಚರಿಕೆಯಿಂದ ನಿಭಾಯಿಸಬೇಕಾದ ಸಂಗತಿ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಒಡೆದುಹಾಕದೆ, ಆಧುನಿಕ ಸಮತೆಯ ಜತೆಯಲ್ಲಿ ಅದನ್ನು ಅನುಸಂಧಾನಿಸುವ ನಮ್ಮ ಅಭಿವೃದ್ಧಿಯ ಪರಿ ಸಮಾಜ ವಿಜ್ಞಾನಿಗಳ ಗ್ರಹಿಕೆಗೂ ಸವಾಲೇ ಸರಿ. ವಿವಿಧ ಮಾದರಿಗಳ ಅಭಿವೃದ್ಧಿಯು ರಾಜಕೀಯ ಪಕ್ಷಗಳ ಉದ್ದೇಶವಾಗಿರಬಹುದು. ಅವು ಭಗವದ್ಗೀತೆಯ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ನಿಲುವನ್ನು ಆಂತರ್ಯದಲ್ಲಿ ಮೈಗೂಡಿಸಿಕೊಂಡಿರಬಹುದು. ಆದರೆ ನಾಡು ಜನಮತವನ್ನು ನವೀಕರಿಸುವ ಸಂದರ್ಭವು ಕೇವಲ ಉದ್ದೇಶಗಳನ್ನು ಆಲಿಸುವ ಸಮಯವಲ್ಲ. ಪರಿಣಾಮಗಳನ್ನು ವಿಶ್ಲೇಷಿಸುವ ಮತ್ತು ಮುಂಗಾಣುವ ನಿರ್ಣಾಯಕ ಕಾಲವೂ ಆಗಿದೆ. ಎಂತಹ ಅಭಿವೃದ್ಧಿಯ ಮಾದರಿ ಜನಹಿತದ್ದಾಗಿದೆ ಅಥವಾ ಜನವಿರೋಧಿಯಾಗಿದೆ ಎನ್ನುವುದನ್ನು ಕುರಿತು ಚಿಂತಿಸುವ ಸಂದರ್ಭವಾಗಿದೆ.

ಭಾರತದಲ್ಲಿ ಪ್ರಜಾತಂತ್ರದ ಸಾಫಲ್ಯ– ವೈಫಲ್ಯಗಳ ಮೌಲ್ಯಮಾಪನವು ಅಭಿವೃದ್ಧಿ ಪ್ರಕ್ರಿಯೆಗಳ ಮೌಲ್ಯಮಾಪನದೊಂದಿಗೆ ಕರುಳಬಳ್ಳಿಯ ಸಂಬಂಧವನ್ನು ಹೊಂದಿದೆ. ಕೆಲವರು ಭಾರತದ ಅಭಿವೃದ್ಧಿಯನ್ನು ಅನಭಿವೃದ್ಧಿಯ ಅಭಿವೃದ್ಧಿಯೆಂದು ಕರೆಯುತ್ತಾರೆ. ಇನ್ನು ಕೆಲವರಿಗೆ ಅದು ವೈರುಧ್ಯಗಳಿಂದ ತುಂಬಿರುವ ಖಚಿತವಾಗಿ ತಿಳಿಯದ ಮಹಿಮೆ. ಹಲವರಿಗೆ ಅರೆಸಾಫಲ್ಯ, ಅರೆವೈಫಲ್ಯಗಳ ಮಿಶ್ರ ಬೆಳವಣಿಗೆ. ಅಭಿವೃದ್ಧಿಯ ಇಂಥ ವಾದಗಳ ನಡುವೆ ಜನರ ಬದುಕಿಗೆ ಬಲ ತುಂಬಿದ ಹಾಗೂ ಅವರ ಗೋಳನ್ನು ವಿಸ್ತರಿಸಿದ ಅಭಿವೃದ್ಧಿಯ ಕೆಲವು ವೈರುಧ್ಯ ಕಥನಗಳನ್ನು ಚುನಾವಣಾ ಸಮಯದಲ್ಲಿ ಅಭಿವೃದ್ಧಿಯ ನೀತಿ– ನ್ಯಾಯದ ಆಳ ಅಗಲಗಳನ್ನು ಅರಿಯಲು ಉದಾಹರಿಸಬೇಕಾಗುತ್ತದೆ.

ಭಾರತದಲ್ಲಿ, ಭೂ ಸುಧಾರಣಾ ಪ್ರಕ್ರಿಯೆಯನ್ನು ಪರಿಚಯಿಸಿದ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ ಅಭಿವೃದ್ಧಿ, ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಳಿಸಿದ ಅಭಿವೃದ್ಧಿ, ಉದ್ಯೋಗ ಖಾತರಿಯ ಭರವಸೆಯ ಅಭಿವೃದ್ಧಿ, ಜಾತಿ ಹಾಗೂ ಲಿಂಗ ಅಸಮತೆಗಳನ್ನು ನಿವಾರಿಸಲು ಕೈಗೊಂಡ ಕ್ರಮಗಳ ಅಭಿವೃದ್ಧಿ, ಅಂತರ್ ಸಾಮುದಾಯಿಕ ವಿಮರ್ಶೆಯಿಂದ ಸಮಾಜ ಸುಧಾರಣೆಗಳಿಗೆ ಕಾರಣವಾದ ಅಭಿವೃದ್ಧಿ ... ಇವು, ಅಭಿವೃದ್ಧಿಯ ಸಾಧನೆ
ಗಳಲ್ಲಿ ಮೈಲುಗಲ್ಲುಗಳೆಂದು ಗುರುತಿಸಬಹುದು.

ಮತ್ತೊಂದು ಬದಿಯಲ್ಲಿ, ತಲತಲಾಂತರದಿಂದ ಬದುಕು ರೂಪಿಸಿಕೊಂಡಿದ್ದ ನೆಲವನ್ನು ಅಣೆಕಟ್ಟುಗಳಿಗಾಗಿ ಕಳೆದುಕೊಂಡ ನಿರಾಶ್ರಿತರು, ಇಂದು ಕೂಡ ನ್ಯಾಯಕ್ಕಾಗಿ ರೋದಿಸುತ್ತಿದ್ದಾರೆ. ಪರ್ಯಾಯ ಬದುಕಿನ ಮಾರ್ಗ ಕಲ್ಪಿಸದೆ ಅವರ ಬದುಕನ್ನು ಅತಂತ್ರರಾಗಿಸಿದ ಅಭಿವೃದ್ಧಿಯು ಮಾತು ಸೋತ
ಭಾರತದ ಭಾಗವಾಗುತ್ತಿದೆ. ಪಾರಂಪರಿಕ ಭೂಮಾಲಿಕತ್ವ ಹಾಗೂ ಪ್ರಭುತ್ವದ ಆಲಿಂಗನದಲ್ಲಿ ನಲುಗಿದ ಪರಿಣಾಮವಾಗಿ, ಪ್ರತಿರೋಧದ ನೆಲೆಯಲ್ಲಿ ಬೆಳೆಯುತ್ತಿರುವ ನಕ್ಸಲ್ ಮಾದರಿಯ ಹಿಂಸೆಯ ಅಭಿವೃದ್ಧಿಯು ಆನೆಗಳ ನಡುವೆ ಇರುವೆಗಳಂತೆ ಬದುಕುವ ಜನಸಮುದಾಯಗಳನ್ನು ಸೃಷ್ಟಿಸಿದೆ. ಸಾಮಾಜಿಕ ಘನತೆ, ಸ್ವ-ಗೌರವ ಗಳಿಸಲು ಹಲವಾರು ಕಾರಣಗಳಿಂದ ವಿಫಲರಾಗಿ, ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವ, ಅವಕಾಶಗಳ ವ್ಯವಸ್ಥಿತ ವಂಚನೆಗಳಿಂದ ದಿಕ್ಕೆಟ್ಟು ಕೋಮು ರಾಜಕಾರಣದ ಪ್ರಾಯೋಜಕ ಸಂಫಟನೆಗಳ ಆಮಿಷಗಳಿಗೆ ಬಲಿಯಾಗಿ, ಸಾಮಾಜಿಕ ಘನತೆ, ಸ್ವ-ಗೌರವಗಳನ್ನು
ಸಂಪಾದಿಸಿಯೇ ಸಿದ್ಧವೆಂಬ ಭ್ರಮೆಯಲ್ಲಿ ತೇಲುತ್ತಿರುವ ಅರೆಉದ್ಯೋಗಿ ಯುವ ಜಂಗುಳಿಯನ್ನು ಉತ್ಪಾದಿಸುವ ಅಭಿವೃದ್ಧಿ ನೇಪಥ್ಯದಲ್ಲಿ ಗೋಚರಿಸುತ್ತಿದೆ. ಪುರುಷ ಪ್ರಾಧಾನ್ಯ ಕೃಪಾಪೋಷಿತ ಮಹಿಳಾ ದೌರ್ಜನ್ಯಗಳ ಅಭಿವೃದ್ಧಿ ಸಮಾಜೋ-ಮನೋವೈಜ್ಞಾನಿಕ ವಿಮರ್ಶೆಗಾಗಿ ಹಾತೊರೆಯುತ್ತಿದೆ. ಅಗ್ರಸ್ಥಾನ ವಿಜೇತರು ಅವಕಾಶಗಳನ್ನು ಪಡೆದು ಮುನ್ನುಗ್ಗುವಾಗ ಕೊನೆಯ ಸ್ಥಾನ ಪಡೆದವರು ಆಟಕ್ಕೂ ಇಲ್ಲದ, ಲೆಕ್ಕಕ್ಕೂ ಸಿಗದ ಅಭಿವೃದ್ಧಿಯ ಮಾಯಾದರ್ಪಣದಲ್ಲಿ ಕಾಣದಾಗುತ್ತಾರೆ. ಈ ತೆರನಾದ ಅಭಿವೃದ್ಧಿ ಮಾದರಿಗಳು ‘ಇಂತಹ ಅಭಿವೃದ್ಧಿ ನಮಗೆ ಅವಶ್ಯಕವೇ’ ಎಂದು ತಮ್ಮ ಹಣೆಬರಹವನ್ನು ತಾವೇ ಹಳಿಯಬೇಕಾದ ದುಃಸ್ಥಿತಿಯನ್ನು ಸೃಷ್ಟಿಸುತ್ತಿವೆ.

ಅಭಿವೃದ್ಧಿ ನೀತಿಯ ಹಿಂದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳಿನ ಉದ್ದೇಶಗಳಿರಬಹುದು. ಆದರೆ ಅಭಿವೃದ್ಧಿಯ ನ್ಯಾಯದ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಪರಿಣಾಮಗಳನ್ನು ಅವಲೋಕಿಸಬೇಕಾಗುತ್ತದೆ. ಅಭಿವೃದ್ಧಿಯ ಕಲ್ಪನೆಗಳು ಕಟ್ಟಕಡೆಯ ವ್ಯಕ್ತಿಯ ಮತ್ತು ಸಮುದಾಯಗಳ ಕಣ್ಣೀರನ್ನು ಒರೆಸುವ ಪ್ರಾಮಾಣಿಕ ಪ್ರಯತ್ನಗಳಾಗಬೇಕೇ ಹೊರತು ಕಣ್ಣೀರ ಕಟ್ಟೆಯೊಡೆಯುವ ದುಸ್ಸಾಹಸವಾಗಬಾರದು. ಸಾಮಾಜಿಕ ಅಸಮತೆಗಳು ಹಾಗೂ ಪರಿಸರ ವಿನಾಶದ ಭಾರಗಳನ್ನು ಗಣಿಸದ ಅಭಿವೃದ್ಧಿ, ಪರಿಣಾಮಗಳ ಕುರಿತು ಆಲೋಚಿಸದೆ ಕರ್ಮವನ್ನು ಸಾಧಿಸಿಯೇ ಸಾಧಿಸುತ್ತೇವೆ ಎಂಬ ಛಲ, ಗೀತೆಯ ಧ್ಯೇಯವನ್ನು ಆವಾಹಿಸಿಕೊಂಡಿದ್ದರೂ, ಗೌತಮ ಬುದ್ಧನ ಕಾರಣ- ಪರಿಣಾಮಗಳ ನಿಜವನ್ನು ಅರಿತು ಮುನ್ನಡೆಯುವ ಸಂತುಲಿತ ಮಾದರಿಯನ್ನು ಅಳವಡಿಸಿಕೊಳ್ಳದಿದ್ದರೆ, ನಮ್ಮ ನಾಡಿನ ಬಹುಜನರ ಸೋಲಿಗೆ ಮುನ್ನುಡಿಯನ್ನು ಅಧಿಕೃತಗೊಳಿಸಿದಂತಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT