ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತವೂ ಇಲ್ಲದಲ್ಲಿ ಪರ್ವತ ಸೃಷ್ಟಿ

ಕಂಪ್ಯೂಟರ್‌ಗೆ ಕಣ್ಗಾವಲು: ವಿರೋಧ ಪಕ್ಷಗಳಿಗೆ ಜೇಟ್ಲಿ ತಿರುಗೇಟು
Last Updated 21 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ನವದೆಹಲಿ: ಕಂಪ್ಯೂಟರ್‌ಗಳ ಮೇಲೆ ಕಣ್ಗಾವಲು ಇರಿಸಲು ಹತ್ತು ಸಂಸ್ಥೆಗಳಿಗೆ ಅಧಿಕಾರ ಕೊಟ್ಟ ಕ್ರಮಕ್ಕೆ ವ್ಯಕ್ತವಾಗಿರುವ ಆಕ್ಷೇಪವನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಹುತ್ತವೂ ಇಲ್ಲದಲ್ಲಿ ಪರ್ವತವಿದೆ ಎಂದು ಹೇಳಲುವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಸರ್ಕಾರ ಹೇಳಿದೆ.

ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಣ್ಗಾವಲು ಅವಕಾಶವನ್ನು ಹಿಂದಿನ ಯುಪಿಎ ಸರ್ಕಾರವೇ ರೂಪಿಸಿತ್ತು. ಆಗಿನ ಸರ್ಕಾರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷ ಈಗ ಅದೇ ಅವಕಾಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಜೇಟ್ಲಿ ಹೇಳಿದರು.

‘ಅಘೋಷಿತ ತುರ್ತುಪರಿಸ್ಥಿತಿ ಈಗ ಪೂರ್ಣ ರೂಪ ಪಡೆದುಕೊಂಡಿದೆ. ಕೇಂದ್ರದ ಎಲ್ಲ ಸಂಸ್ಥೆಗಳನ್ನು ಸ್ವೇಚ್ಛೆಯಿಂದಿರಲು ಅವಕಾಶ ಕೊಡಲಾಗಿದೆ’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರ ಟೀಕೆಗೆ ಜೇಟ್ಲಿ ಈ ರೀತಿ ಎದುರೇಟು ಕೊಟ್ಟಿದ್ದಾರೆ.

‘2009ರಲ್ಲಿ ಈ ನಿಯಮ ರೂಪಿಸಿದಾಗ ಯುಪಿಎ ಸರ್ಕಾರ ಇತ್ತು. ಆನಂದ್‌ ಶರ್ಮಾ ಅವರೇ ಆಗ ನೀವೇನು ಮಾಡುತ್ತಿದ್ದಿರಿ’ ಎಂದು ಜೇಟ್ಲಿ ಕೇಳಿದರು. ಶರ್ಮಾ ಅವರೂ ರಾಜ್ಯಸಭೆಯಲ್ಲಿ ಕಣ್ಗಾವಲು ವಿಚಾರ ಎತ್ತಿ ಸರ್ಕಾರವನ್ನು ಟೀಕಿಸಿದ್ದಾರೆ.

‘ವಿರೋಧ ಪಕ್ಷದ ನಾಯಕರಾಗಿರುವ ನಿಮ್ಮ ಮಾತಿಗೆ ಪಾವಿತ್ರ್ಯ ಇದೆ. ಹಾಗಾಗಿ, ನೀವೇ ಸೃಷ್ಟಿಸಿದ, ರಾಷ್ಟ್ರೀಯ ಭದ್ರತೆಯ ಪ್ರಕರಣಗಳಲ್ಲಿ ಬಳಸಬಹುದಾದ ಅಧಿಕಾರದ ಅವಕಾಶದ ವಿರುದ್ಧ ಮಾತನಾಡುವುದು ಸರಿಯಲ್ಲ’ ಎಂದು ಆಜಾದ್‌ ಅವರಿಗೆ ಜೇಟ್ಲಿ ಹೇಳಿದರು.

ಟೆಲಿಗ್ರಾಫ್‌ ಕಾಯ್ದೆಯಲ್ಲಿ ಇದ್ದ ರೀತಿಯಲ್ಲಿಯೇ ಇಡೀ ಪ್ರಕ್ರಿಯೆಯನ್ನು ಪರಿಶೀಲಿಸಲು ‘ಸದೃಢವಾದ ಪರಾಮರ್ಶೆ ವ್ಯವಸ್ಥೆ’ ಇದೆ ಎಂದು ಸರ್ಕಾರ ಹೇಳಿದೆ.

‘ಪ್ರತಿ ಪ್ರಕರಣದಲ್ಲಿಯೂ ಗೃಹ ಸಚಿವಾಲಯ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುಬೇಕು. ಕೇಂದ್ರ ಗೃಹ ಸಚಿವಾಲಯವು ತನ್ನ ಅಧಿಕಾರವನ್ನು ಯಾವುದೇ ಕಾನೂನು ಜಾರಿ ಸಂಸ್ಥೆ ಅಥವಾ ಭದ್ರತಾ ಸಂಸ್ಥೆಗೆ ಬಿಟ್ಟುಕೊಟ್ಟಿಲ್ಲ’ ಎಂದು ಗುರುವಾರ ತಡರಾತ್ರಿ ಪ್ರಕಟಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ. 2009ರಲ್ಲಿ ರೂಪಿಸಲಾದ ನಿಯಮಗಳ ಅನ್ವಯವೇ ಈ ಆದೇಶ ಹೊರಡಿಸಲಾಗಿದೆ. ಯಾವುದೇ ಹೊಸ ಅಧಿಕಾರವನ್ನು ಯಾವುದೇ ಸಂಸ್ಥೆಗೆ ಕೊಟ್ಟಿಲ್ಲ ಎಂದೂ ತಿಳಿಸಲಾಗಿದೆ.

ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡುವುದಕ್ಕಾಗಿ, ಸುರಕ್ಷತೆಗಾಗಿ, ಮಿತ್ರದೇಶದ ಹಿತಾಸಕ್ತಿಗಾಗಿ, ಸಾರ್ವಜನಿಕ ಸುರಕ್ಷತೆಗಾಗಿ ಅಥವಾ ಅಪರಾಧ, ಅಪರಾಧ ಕುಮ್ಮಕ್ಕು ತಡೆಗಾಗಿ ಇಂತಹ ಕಣ್ಗಾವಲು ಏರ್ಪಡಿಸಲು ಯಾವುದೇ ಸಂಸ್ಥೆಗೆ ನಿರ್ದೇಶನ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಈ ನಿಯಮದ ಅಡಿಯಲ್ಲಿ ಇದೆ. ಆದರೆ, ಈ ಯಾವುದೇ ವಿಚಾರ ಅಧಿಸೂಚನೆಯಲ್ಲಿ ಇಲ್ಲ, ಸಂಸ್ಥೆಗಳಿಗೆ ಮುಕ್ತ ಅವಕಾಶ ಕೊಡಲಾಗಿದೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ಆಕ್ಷೇಪವಾಗಿದೆ.

ಪರಾಮರ್ಶೆ ವ್ಯವಸ್ಥೆ: ಕಣ್ಗಾವಲಿನ ಪ್ರತಿ ಪ್ರಕರಣವನ್ನು ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿ ಮುಂದೆ ಇರಿಸಬೇಕು. ಪ‍್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರುವ ಈ ಸಮಿತಿಯು ಪ್ರತಿ ಪ್ರಕರಣವನ್ನು ವಿಮರ್ಶೆಗೆ ಒಳಪಡಿಸುತ್ತದೆ. ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಈ ಕೆಲಸ ಮಾಡುತ್ತದೆ.

**

ಚುನಾವಣೆ ಸೋತಿರುವ ಮೋದಿ ಸರ್ಕಾರ ಈಗ ನಿಮ್ಮ ಕಂಪ್ಯೂಟರ್‌ಗಳ ಮೇಲೆ ನಿಗಾ ಇರಿಸಲು, ಇಣುಕಿ ನೋಡಲು ಬಯಸಿದೆ. ದೊಡ್ಡಣ್ಣ ರೋಗ ಲಕ್ಷಣಗಳು ಎನ್‌ಡಿಎಯ ಡಿಎನ್‌ಎಯಲ್ಲಿಯೇ ಇವೆ.

-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

**

2014ರಿಂದಲೇ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ಇದೆ. ಪ್ರತಿ ಪ್ರಜೆಯ ಕಂಪ್ಯೂಟರ್‌ನ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವ ಮೋದಿ ಸರ್ಕಾರವು ಕೊನೆಯ ತಿಂಗಳುಗಳಲ್ಲಿ ಎಲ್ಲ ಎಲ್ಲೆಗಳನ್ನೂ ಮೀರುತ್ತಿದೆ.

-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**

ಪ್ರತಿ ಪ್ರಜೆಯನ್ನು ಇಣುಕಿ ನೋಡಲು ಬಯಸುವ ಸರ್ಕಾರದ ಈ ಆದೇಶ ದೂರವಾಣಿ ಆಲಿಕೆ ಮಾರ್ಗದರ್ಶಿ, ಖಾಸಗಿತನದ ತೀರ್ಪು ಮತ್ತು ಆಧಾರ್‌ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ.

-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

**

ರಾಷ್ಟ್ರೀಯ ಭದ್ರತೆಯೇ ಇದರ ಉದ್ದೇಶವಾಗಿದ್ದರೆ ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೇ ಕೇಂದ್ರ ಹೊಂದಿದೆಯಲ್ಲ? ಈಗ ಈ ವಿಚಾರದಲ್ಲಿ ಜನರಿಗೆ ತೊಂದರೆ ಕೊಡುವುದು ಯಾಕೆ?

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

**

ಯುಪಿಎ ಸರ್ಕಾರ ಈ ನಿಯಮ ರೂಪಿಸಿತ್ತು. ಯಾವ ಸಂಸ್ಥೆಗಳು ಕಣ್ಗಾವಲು ನಡೆಸಬಹುದು ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಕಣ್ಗಾವಲು ಪ್ರಕ್ರಿಯೆಯನ್ನು ಹೆಚ್ಚು ಉತ್ತರದಾಯಿಯನ್ನಾಗಿ ಮಾಡಲಾಗಿದೆ.

ರವಿಶಂಕರ್‌ ಪ್ರಸಾದ್‌, ಕಾನೂನು ಸಚಿವ

**

ಘರ್‌ ಘರ್‌ ಮೋದಿ (ಮನೆ ಮನೆಯಲ್ಲೂ ಮೋದಿ) ಎಂದು ಅವರು ಹೇಳಿದಾಗ ಅದರ ಅರ್ಥ ಹೀಗೆ ಎಂದು ಅಂದು ಯಾರಿಗೆ ಗೊತ್ತಿತ್ತು.

-ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT