ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರದಲ್ಲಿ ಪ್ರತಿಭಟನೆ, ಮತ್ತೆ ನಿರ್ಬಂಧ

Last Updated 11 ಆಗಸ್ಟ್ 2019, 19:27 IST
ಅಕ್ಷರ ಗಾತ್ರ

ಶ್ರೀನಗರ: ಶುಕ್ರವಾರದ ಪ್ರಾರ್ಥನೆ ನಂತರ ಶ್ರೀನಗರದ ಸೌರಾ ಎಂಬ ಪ್ರದೇಶದಲ್ಲಿ 10,000ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುದರ ವಿರುದ್ಧ ಈ ಪ್ರತಿಭಟನೆ ನಡೆದಿದೆ. ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು ಷೆಲ್‌ ಸಿಡಿಸಲಾಗಿದೆ ಮತ್ತು ಪೆಲೆಟ್‌ ಬಂದೂಕುಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.

‘ನಮಗೆ ಸ್ವಾತಂತ್ರ್ಯ ಬೇಕು’, ‘370ನೇ ವಿಧಿಯ ರದ್ದತಿಗೆ ನಮ್ಮ ಒಪ್ಪಿಗೆ ಇಲ್ಲ’ ಎಂಬ ಕೈಬರಹಗಳಿದ್ದ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನಕಾರರು ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ ಸರ್ಕಾರ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಪ್ರತಿಭಟನೆಯ ದೃಶ್ಯಗಳಿರುವ ವರದಿಯನ್ನು ‘ಬಿಬಿಸಿ ಉರ್ದು’ ವಾಹಿನಿ ಪ್ರಸಾರ ಮಾಡಿದೆ. ಪ್ರತಿಭಟನಕಾರರು ಕಲ್ಲುತೂರುತ್ತಿರುವುದು, ಭದ್ರತಾ ಸಿಬ್ಬಂದಿ ಅಶ್ರುವಾಯು ಷೆಲ್‌ ಮತ್ತು ಪೆಲೆಟ್‌ಗಳನ್ನು ಸಿಡಿಸುತ್ತಿರುವುದು ಈ ದೃಶ್ಯಗಳಲ್ಲಿ ಸೆರೆಯಾಗಿದೆ.

ಅವಕಾಶ ಸಿಕ್ಕಾಗಲೆಲ್ಲಾ ಪ್ರತಿಭಟನೆ:‘ಕಾಶ್ಮೀರಿಗಳು ಸಮಯ ಸಿಕ್ಕಾಗಲೆಲ್ಲಾ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿಯೋಜಿತವಾಗಿರುವ ಸೈನಿಕ ರವಿ ಕಾಂತ್‌ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

‘ಇಲ್ಲಿ ಪರಿಸ್ಥಿತಿ ತಿಳಿಯಾಗೇನೂ ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಹಗಲು ರಾತ್ರಿ ಎನ್ನದೆ ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೊಮ್ಮೆ 10 ಜನರು, ಕೆಲವೊಮ್ಮೆ 20ಕ್ಕೂ ಹೆಚ್ಚು ಜನ ಗುಂಪುಗೂಡುತ್ತಾರೆ. ಆ ಗುಂಪುಗಳಲ್ಲಿ ಮಹಿಳೆಯರೂ ಇದ್ದಾರೆ. ಜನರು ತುಂಬಾ ಕೋಪಗೊಂಡಿದ್ದಾರೆ’ ಎಂದು ರವಿ ಕಾಂತ್ ಹೇಳಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮನೆಗೊಬ್ಬ ಸಿಬ್ಬಂದಿ:ಕಾಶ್ಮೀರ ಕಣಿವೆಯ ಪ್ರತಿ ಹಳ್ಳಿ ಮತ್ತು ಕುಗ್ರಾಮದಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿ
ಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿರುವ ಹಳ್ಳಿಗಳಲ್ಲಿ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸಿಬ್ಬಂದಿಯನ್ನು ಕಾವಲಿಗೆ ಇರಿಸಲಾಗಿದೆ.

ಸುದ್ದಿಗಾಗಿ ಹಂಬಲ: ಮೊಬೈಲ್, ದೂರವಾಣಿ, ಕೇಬಲ್ ಟಿ.ವಿ. ಮತ್ತು ಅಂತರ್ಜಾಲ ಸಂಪರ್ಕ ಕಡಿತಗೊಳಿಸಿರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅಲ್ಲಿನ ಜನರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಇಂತಹ ಸ್ಥಿತಿಯಲ್ಲೂ ಕೆಲವು ದಿನಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಕೆಲವೇ ಸಾವಿರ ಪ್ರತಿಗಳ ಪ್ರಸಾರ ಇರುವ ಈ ಪತ್ರಿಕೆಗಳ ಸಾಮಾನ್ಯ ಬೆಲೆ ₹ 3 ಅಥವಾ ₹ 4. ಆದರೆ ಈಗ ಆ ಪತ್ರಿಕೆಗಳು ಪ್ರತೀ ಪ್ರತಿಗೆ ₹ 50ರಂತೆ ಮಾರಾಟವಾಗುತ್ತಿವೆ. ಈ ಪತ್ರಿಕೆಗಳನ್ನು ಗೋಪ್ಯವಾಗಿ ಓದುಗರಿಗೆ
ತಲುಪಿಸಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರತಿಭಟನೆ ಕಟ್ಟುಕತೆ

ಶ್ರೀನಗರದಲ್ಲಿ ಶುಕ್ರವಾರ ತೀವ್ರ ಪ್ರತಿಭಟನೆ ಮತ್ತು ಪ್ರತಿಭಟನಕಾರರ ಮೇಲೆ ಭದ್ರತಾ ಸಿಬ್ಬಂದಿಯಿಂದ ದಾಳಿ ನಡೆದಿದೆ ಎಂಬ ಮಾಧ್ಯಮಗಳ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ನಿರಾಕರಿಸಿವೆ. ಈ ಸಂಬಂಧ ಪ್ರಕಟಣೆ ಹೊರಡಿಸಿವೆ.

‘ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟನೆ ನೀಡಬೇಕು’ ಎಂದು ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿಶನಿವಾರ ತಡರಾತ್ರಿ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಈ ಸ್ಪಷ್ಟನೆ ಪ್ರಕಟವಾಗಿವೆ.

‘ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ತಿಳಿಯಾಗೇ ಇದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೆಲವೊಂದು ಸ್ಥಳಗಳಲ್ಲಿ ಸಣ್ಣ–ಪುಟ್ಟ ಪ್ರತಿಭಟನೆಗಳು ನಡೆದಿವೆ. ಕಲ್ಲುತೂರಾಟವೂ ನಡೆದಿದೆ. ಆದರೆ ಅವನ್ನು ಅಲ್ಲಿಯೇ ಹತ್ತಿಕ್ಕಲಾಗಿದೆ. ಒಂದು ವಾರದಲ್ಲಿ ಕಾಶ್ಮೀರದಲ್ಲಿ ಒಂದು ಗುಂಡನ್ನೂ ಹಾರಿಸಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್‌. ಸುಬ್ರಹ್ಮಣ್ಯಂ ಸಹ ಇದೇ ಮಾಹಿತಿ ನೀಡಿದ್ದಾರೆ.

‘ಶ್ರೀನಗರವೂ ಸೇರಿದಂತೆ ಕಾಶ್ಮೀರ ಕಣಿವೆಯ ಹಲವೆಡೆ ಜನರು ಬಕ್ರೀದ್ ಹಬ್ಬಕ್ಕಾಗಿ ಖರೀದಿ ನಡೆಸಿದ್ದಾರೆ. ಪರಿಸ್ಥಿತಿ ಶಾಂತವಾಗಿದೆ. ಶ್ರೀನಗರದಲ್ಲಿ 10,000ಕ್ಕೂ ಹೆಚ್ಚು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ ಎಂಬುದು ಕಟ್ಟುಕತೆ. ಕೆಲವು ಮಾಧ್ಯಮಗಳು ಇಂತಹ ವದಂತಿಯನ್ನು ಪ್ರಸಾರ ಮಾಡುತ್ತಿವೆ’ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಎರಡು ನಿಮಿಷದ ಕರೆ

ಶ್ರೀನಗರ (ಎಎಫ್‌ಪಿ):ಶ್ರೀನಗರ ಪೊಲೀಸರು ಇಲ್ಲಿನ ಜನರಿಗೆ ಫೋನ್‌ ಕರೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎರಡು ಮೊಬೈಲ್‌ ಫೋನ್‌ಗಳನ್ನು ಇರಿಸಲಾಗಿದೆ. ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಇರುವ ಸಂಬಂಧಿಕರಿಗೆ ಕರೆ ಮಾಡಲಷ್ಟೇ ಅವಕಾಶ ನೀಡಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಆಡಳಿತವು 300 ಕಡೆಗಳಲ್ಲಿ ಸಾರ್ವಜನಿಕ ದೂರವಾಣಿ ಬೂತ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ.

ಗೋರ್ಖಾಗಳ ಸ್ವಾಗತ

ಜಮ್ಮು ಮತ್ತು ಕಾಶ್ಮೀರಕ್ಕೆನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ಗೋರ್ಖಾ ಸಮುದಾಯವು ಸ್ವಾಗತಿಸಿದೆ.

ರಾಜಾ ಹರಿಸಿಂಗ್‌ನ ಆಳ್ವಿಕೆಯ ಕಾಲದಲ್ಲಿ, ಆತನ ನೆರವಿಗಾಗಿ ನೇಪಾಳದಿಂದ ಗೋರ್ಖಾ ಸಮುದಾಯದ ಸೇನಾ ತುಕಡಿಯು ಇಲ್ಲಿಗೆ ಬಂದಿತ್ತು. ಯುದ್ಧಾನಂತರವೂ ಸೇನಾ ತುಕಡಿಯು ಇಲ್ಲಿಯೇ ನೆಲೆಸಿತು. ಇಂದಿಗೂ ಆ ಸಮುದಾಯದ ಜನ ಇಲ್ಲಿ ನೆಲೆಸಿದ್ದಾರೆ. ಆದರೆ ಅವರಿಗೆ ಜಮ್ಮು–ಕಾಶ್ಮೀರದ ಕಾಯಂ ಪೌರತ್ವ ದೊರೆತಿಲ್ಲ.

ಸಾವಿರ ಕೋಟಿ ನಷ್ಟ

ಒಂದು ವಾರದಲ್ಲಿ ಶ್ರೀನಗರದ ವ್ಯಾಪಾರಿಗಳು ₹ 1,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು ಮಾಹಿತಿ ನೀಡಿದೆ.

ಒಂದು ವಾರದಿಂದ ಶ್ರೀನಗರದಲ್ಲಿ ನಿರ್ಬಂಧವಿದೆ. ಹೀಗಾಗಿ ಅಂಗಡಿಗಳು ಮುಚ್ಚಿದ್ದು, ವ್ಯಾಪಾರ ನಡೆಯುತ್ತಿಲ್ಲ. ಇಲ್ಲಿನ ವ್ಯಾಪಾರಿಗಳು ಪ್ರತಿದಿನ ಸರಾಸರಿ ₹ 170 ಕೋಟಿ ನಷ್ಟ ಅನುಭವಿಸಿದ್ದಾರೆ. ಬೇಕರಿ ವ್ಯಾಪಾರಿಗಳೇ ₹ 200ರಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT