ಬಿಜೆಪಿ–ಕಾಂಗ್ರೆಸ್‌ ನಡುವೆ ಮತ್ತೆ ವಾಕ್ಸಮರ

7
ನಿರ್ದಿಷ್ಟ ದಾಳಿ ವಿಡಿಯೊ ಬಿಡುಗಡೆ l 2016ರಿಂದ 146 ಯೋಧರು ಹುತಾತ್ಮ: ಕಾಂಗ್ರೆಸ್‌

ಬಿಜೆಪಿ–ಕಾಂಗ್ರೆಸ್‌ ನಡುವೆ ಮತ್ತೆ ವಾಕ್ಸಮರ

Published:
Updated:
ಸರ್ಜಿಕಲ್ ಸ್ಟ್ರೈಕ್

ನವದೆಹಲಿ: ಸೇನೆಯು 2016ರಲ್ಲಿ ನಡೆಸಿದ ನಿರ್ದಿಷ್ಟ ದಾಳಿಯ ವಿಡಿಯೊ ಬಿಡುಗಡೆಯು ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ನಿರ್ದಿಷ್ಟ ದಾಳಿಯನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಸಶಸ್ತ್ರ ಪಡೆಗಳ ಬದ್ಧತೆ ಮತ್ತು ದಿಟ್ಟತನವನ್ನೇ ಕಾಂಗ್ರೆಸ್‌ ಪ್ರಶ್ನಿಸಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. 

ಸೇನಾ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರವು ನಿರ್ಲಜ್ಜೆಯಿಂದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಅದನ್ನು ಮತಗಳಿಕೆಯ ಸಾಧನವಾಗಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. 2016ರ ನಿರ್ದಿಷ್ಟ ದಾಳಿಯ ವಿಡಿಯೊ ಬಿಡುಗಡೆಯ ಮರುದಿನ ಈ ಪ್ರತಿಕ್ರಿಯೆ ನೀಡಲಾಗಿದೆ.

ಯೋಧರ ತ್ಯಾಗದ ಕೀರ್ತಿಯನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೆ, ಪಾಕಿಸ್ತಾನವನ್ನು ಹೇಗೆ ನಿಭಾಯಿಸಬೇಕು ಎಂಬ ಬಗೆಗಿನ ಸ್ಪಷ್ಟ ದಿಕ್ಕು, ದೃಷ್ಟಿಕೋನ ಹಾಗೂ ನೀತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ತಡೆಯುವಲ್ಲಿಯೂ ಸರ್ಕಾರ ಯಶಸ್ವಿಯಾಗಿಲ್ಲ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. 

ನಿರ್ದಿಷ್ಟ ದಾಳಿಯ ವಿಡಿಯೊ ಬಿಡುಗಡೆಯ ಮೂಲಕ ದೇಶದ ಭದ್ರತಾ ಮೂಲಸೌಕರ್ಯವನ್ನು ಅಪಾಯಕ್ಕೆ ಒಡ್ಡುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಉದ್ದೇಶವೇ ಎಂಬುದನ್ನು ‌ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

‘ನಮ್ಮ ಸೈನಿಕರನ್ನು ಅಪಾಯಕ್ಕೆ ದೂಡಿದ ಬಗ್ಗೆ ಮೋದಿ ನೇತೃತ್ವದ ಸರ್ಕಾರಕ್ಕೆ ತಪ್ಪಿತಸ್ಥ ಭಾವ ಇದೆಯೇ’ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. 

2000ದ ಬಳಿಕ ವಿವಿಧ ಸರ್ಕಾರಗಳ ಅಡಿಯಲ್ಲಿ ಎಂಟು ಬಾರಿ ನಿರ್ದಿಷ್ಟ ದಾಳಿ ನಡೆಸಲಾಗಿದೆ ಎಂದಿರುವ ಸುರ್ಜೇವಾಲಾ, ಈ ದಾಳಿಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ. 

ಸಶಸ್ತ್ರ ಪಡೆಗಳ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತಿಲ್ಲ ಮತ್ತು ರಕ್ಷಣಾ ಪಡೆಗಳ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ. 

ಕೇಂದ್ರ ಸರ್ಕಾರದ ಅಸಡ್ಡೆ ಮತ್ತು ದೌರ್ಬಲ್ಯದಿಂದಾಗಿ 2016ರ ಸೆಪ್ಟೆಂಬರ್‌ ಬಳಿಕ 146 ಯೋಧರು ಜೀವ ಕಳೆದುಕೊಂಡಿದ್ದಾರೆ. ಪಾಕಿಸ್ತಾನವು 1,600 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಉಗ್ರರು 79 ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. 

ಪಾಕಿಸ್ತಾನದ ನೆಲದಲ್ಲಿ ಉಗ್ರರ ವಿರುದ್ಧ ನಡೆಸಿದ ನಿರ್ದಿಷ್ಟ ದಾಳಿಗೆ ಕಾಂಗ್ರೆಸ್‌ ಪಕ್ಷವು ಅನುಮಾನಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಬೆಂಬಲ ಸೂಚಿಸಿದೆ. ದೇಶದ ವಿರುದ್ಧದ ಭಯೋತ್ಪಾದನೆ ಮೂಲಸೌಕರ್ಯವನ್ನು ನಿರ್ನಾಮ ಮಾಡಲು ಕೈಗೊಂಡ ಕ್ರಮಗಳಿಗೂ ಇದೇ ರೀತಿಯ ಬೆಂಬಲ ವ್ಯಕ್ತಪಡಿಸಲಾಗಿದೆ ಎಂದೂ ಅವರು ತಿಳಿಸಿದರು. 

ಕಾಂಗ್ರೆಸ್‌ನ ಹತಾಶೆ: ಬಿಜೆಪಿ

ನಿರ್ದಿಷ್ಟ ದಾಳಿಯಿಂದ ರಾಜಕೀಯ ಲಾಭ ಪಡೆಯಲು ಬಿಜೆಪಿ ಬಯಸಿದ್ದರೆ ವಿಡಿಯೊಗಳನ್ನು ಉತ್ತರ ಪ್ರದೇಶ, ಗುಜರಾತ್‌ ಅಥವಾ ಕರ್ನಾಟಕ ಚುನಾವಣೆ ಸಂದರ್ಭಗಳಲ್ಲಿ ಬಿಡುಗಡೆ ಮಾಡಬಹುದಿತ್ತು ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ನಿರ್ದಿಷ್ಟ ದಾಳಿಯಲ್ಲಿ ಭಾಗಿಯಾದ ಅಧಿಕಾರಿಗಳೇ ವಿಡಿಯೊ ಅಸಲಿ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಡಿಯೊವನ್ನು ಈಗ ಯಾಕೆ ಬಿಡುಗಡೆ ಮಾಡಲಾಗಿದೆ ಮತ್ತು ವಿಡಿಯೊ ಎಲ್ಲಿಂದ ಬಂತು ಎಂಬ ಪ್ರಶ್ನೆಗಳು ಪ್ರಸ್ತುತವೇ ಅಲ್ಲ. ಆದರೆ, ವಿಡಿಯೊ ಅಸಲಿಯೇ ಮತ್ತು ನಿರ್ದಿಷ್ಟ ದಾಳಿಯನ್ನು ವಿರೋಧ ಪಕ್ಷ ಅನುಮೋದಿಸುತ್ತದೆಯೇ ಎಂಬುದಕ್ಕೆ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪದೇ ಪದೇ ಸೋತ ಕಾರಣ ಕಾಂಗ್ರೆಸ್‌ ಹತಾಶವಾಗಿದೆ. ಹಾಗಾಗಿ, ಸಶಸ್ತ್ರ ಪಡೆಗಳ ಬದ್ಧತೆಯನ್ನು ಆ ಪಕ್ಷ ಪ್ರಶ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

**

ನಿರ್ದಿಷ್ಟ ದಾಳಿಯ ವಿಡಿಯೊ ಬಹಿರಂಗಪಡಿಸುವ ಮೂಲಕ ಅದರಲ್ಲಿ ಭಾಗಿಯಾದ ಯೋಧರು, ನಿಯಂತ್ರಣ ರೇಖೆ ಸಮೀಪ ನೆಲೆಸಿರುವ ಜನರನ್ನು ಸರ್ಕಾರ ಅಪಾಯಕ್ಕೆ ತಳ್ಳಿದೆ
- ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕಾಂಗ್ರೆಸ್‌ ಮುಖ್ಯ ವಕ್ತಾರ

**

ಕಾಂಗ್ರೆಸ್‌ ಪಕ್ಷವು ಭಯೋತ್ಪಾದಕರ ನೈತಿಕತೆಯನ್ನು ಹೆಚ್ಚಿಸುತ್ತಿದೆ. ಮತಕ್ಕಾಗಿ ಕಾಂಗ್ರೆಸ್‌ ಯಾವ ಮಟ್ಟಕ್ಕೆ ಇಳಿಯಬಹುದು?
ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

**

ನಿರ್ದಿಷ್ಟ ದಾಳಿ ಆಗಿದೆಯೇ ಇಲ್ಲವೇ ಎಂಬ ಚರ್ಚೆ ಅರ್ಥಹೀನ. ಆದರೆ, ದಾಳಿಯಿಂದಾಗಿ ವಾಸ್ತವದಲ್ಲಿ ಆಗಿರುವ ಬದಲಾವಣೆ ಏನು ಎಂಬುದನ್ನು ಚರ್ಚಿಸಬೇಕು
- ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !