ಭಾನುವಾರ, ನವೆಂಬರ್ 17, 2019
27 °C
ರಾಜ್ಯಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಾಗ್ದಾಳಿ

ಎನ್‌ಆರ್‌ಸಿ: ಕಾಂಗ್ರೆಸ್‌ಗೆ ಧೈರ್ಯ ಇರಲಿಲ್ಲ

Published:
Updated:

ನವದೆಹಲಿ: ಅಸ್ಸಾಂನಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಲು ಕಾಂಗ್ರೆಸ್‌ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರಕ್ಕೆ ಧೈರ್ಯ ಇರಲಿಲ್ಲ. ಆದರೆ, ಬಿಜೆಪಿ ಧೈರ್ಯ ತೋರಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಅಮಿತ್‌ ಶಾ ಮಂಗಳವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.

1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮಾಡಿಕೊಂಡಿದ್ದ ಅಸ್ಸಾಂ ಒಪ್ಪಂದವೂ ಸಹ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಉದ್ದೇಶವನ್ನೇ ಹೊಂದಿತ್ತು. ಆದರೆ, ಇದನ್ನು ಅನುಷ್ಠಾನಗೊಳಿಸಲು ರಾಜೀವ್‌ ಗಾಂಧಿಯವರಿಗೂ ಧೈರ್ಯ ಇರಲಿಲ್ಲ. ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ನಾವು ಅದನ್ನು ಧೈರ್ಯದಿಂದ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ರಕ್ಷಿಸಲು ಕಾಂಗ್ರೆಸ್‌ ಬಯಸುತ್ತಿದೆ ಎಂದು ಅವರು ಆರೋಪಿಸಿದರು.

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಎನ್‌ಆರ್‌ಸಿ ಕರಡು ಪಟ್ಟಿ ಸಿದ್ಧಪಡಿಸಿದೆ. 40 ಲಕ್ಷ ಜನರು ಈ ಪಟ್ಟಿಯಲ್ಲಿಲ್ಲ. ನೀವು ಯಾರನ್ನು ರಕ್ಷಿಸಲು ಬಯಸಿದ್ದೀರಿ? ನೀವು ಅಕ್ರಮ ಬಾಂಗ್ಲಾ ವಲಸಿಗರ ರಕ್ಷಿಸಲು ಬಯಸುತ್ತಿದ್ದೀರಾ’ ಎಂದು ಶಾ ಪ್ರಶ್ನಿಸಿದರು.

ಶಾ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮಾಡಿದರು. ಕಲಾಪಕ್ಕೆ ಅಡ್ಡಿಪಡಿಸಿ, ಗದ್ದಲ ಎಬ್ಬಿಸಿದರು. ಇದರಿಂದ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು. ಗೃಹ ಸಚಿವ ರಾಜನಾಥ್‌ ಸಿಂಗ್‌ ಸದನದಲ್ಲಿ ಉಪಸ್ಥಿತರಿದ್ದರೂ ವಿರೋಧ ಪಕ್ಷಗಳ ಸದಸ್ಯ ಪ್ರತಿಭಟನೆ ನಡೆಸಿದ್ದರಿಂದ ಎನ್‌ಆರ್‌ಸಿ ಕುರಿತ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಲಿಲ್ಲ.

‘ಸರ್ಕಾರದ ಬಳಿ ಡೇಟಾ ಇಲ್ಲ’

ಅಸ್ಸಾಂನಲ್ಲಿ ಅಕ್ರಮ ವಲಸಿಗರು ಎಷ್ಟಿದ್ದಾರೆ ಎನ್ನುವ ಅಂಕಿ, ಅಂಶ ಸರ್ಕಾರದ ಬಳಿ ಇಲ್ಲ ಎಂದು ಕಾಂಗ್ರೆಸ್‌ ಮಂಗಳವಾರ  ಆರೋಪ ಮಾಡಿದೆ.

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಎನ್‌ಆರ್‌ಸಿ ಕರಡು ಪಟ್ಟಿ ಬಗ್ಗೆ ಪ್ರಸ್ತಾಪಿಸಿದ ಅಸ್ಸಾಂನ ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌, ಕರಡು ಪಟ್ಟಿಯಲ್ಲಿ ಹೆಸರಿಲ್ಲದ 40 ಲಕ್ಷ ಜನರು ಅಕ್ರಮ ವಲಸಿಗರೇ ಎನ್ನವುದು ಗೊತ್ತಾಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ₹1,200 ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕಾಗಿ ಸಾವಿರಾರು ಅಧಿಕಾರಿಗಳು ಶ್ರಮಿಸಿದ್ದಾರೆ. ಕರಡು ಪಟ್ಟಿಯಿಂದ ಹಲವಾರು ಭಾರತೀಯರನ್ನು ಕೈಬಿಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಕ್ರಮ ವಲಸಿಗರ ಸಂಖ್ಯೆ ಎಷ್ಟಿದೆ ಎನ್ನುವುದು ಗೊತ್ತಿಲ್ಲ ಎಂದು ಕಿಡಿಕಾರಿದರು. ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದರು ಸಹ ಎನ್‌ಆರ್‌ಸಿ ಕರಡು ಪಟ್ಟಿ ಬಗ್ಗೆ ಧ್ವನಿ ಎತ್ತಿದರು. 

‘ಅಕ್ರಮ ವಲಸಿಗರಿಗೆ ಗುಂಡಿಕ್ಕಿ ಕೊಲ್ಲಿ’
ಹೈದರಾಬಾದ್‌ (ಪಿಟಿಐ): ‘ಅಕ್ರಮ ಬಾಂಗ್ಲಾ ವಲಸಿಗರು ಮತ್ತು ರೋಹಿಂಗ್ಯಾ ಮುಸಲ್ಮಾನರನ್ನು ಅವರ ದೇಶಗಳಿಗೆ ಸುಮ್ಮನೆ ಬಿಟ್ಟುಕಳುಹಿಸಬಾರದು. ಅವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜ ಸಿಂಗ್‌ ಲೋಧ್‌ ಹೇಳಿದ್ದಾರೆ.

‘ಪಟ್ಟಿಯಿಂದ ಹೊರಗುಳಿದವರೆಲ್ಲರೂ ಅಕ್ರಮ ಬಾಂಗ್ಲಾ ವಲಸಿಗರು ಮತ್ತು ರೋಹಿಂಗ್ಯಾಗಳು. ಅವರೆಲ್ಲರನ್ನೂ ಗೌರವಾನ್ವಿತವಾಗಿ ದೇಶಕ್ಕೆ ಮರಳಿ ಕಳಿಸುವ ಅಗತ್ಯವಿಲ್ಲ. ಅವರನ್ನೂ ಗುಂಡಿಟ್ಟು ಕೊಂದರೆ ಮಾತ್ರ ಭಾರತ ಸುರಕ್ಷಿತವಾಗಿರುತ್ತದೆ’ ಎಂದು ಹೇಳಿದ್ದಾರೆ. ಶಾಸಕರ ಈ ವಿಡಿಯೊ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಅಕ್ರಮ ಚಟುವಟಿಕೆಯಲ್ಲಿ ರೋಹಿಂಗ್ಯಾ’

ದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯಲ್ಲಿ ಕೆಲವು ರೋಹಿಂಗ್ಯಾ ಮುಸ್ಲಿಮರು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅವರಿಗೆ ನಿರಾಶ್ರಿತರ ಸ್ಥಾನ ನೀಡುವುದಿಲ್ಲ. ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ. ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜುಜು ಲೋಕಸಭೆಗೆ 
ತಿಳಿಸಿದ್ದಾರೆ.

38 ಮಂದಿ ಬಾಂಗ್ಲಾ ಅಕ್ರಮ ವಲಸಿಗರ ಗಡಿಪಾರು: ಕಳೆದ ಎರಡು ವರ್ಷಗಳಲ್ಲಿ ಅಸ್ಸಾಂಗೆ ಅಕ್ರಮವಾಗಿ ನುಸುಳಿ ಬಂದಿದ್ದ 39 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಹೆಸರು ಸೇರ್ಪಡೆಗೆ ಹೊಸ ವ್ಯವಸ್ಥೆ 

ನವದೆಹಲಿ (ಪಿಟಿಐ): ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ ಹೆಸರು ಕಾಣೆಯಾದ 40 ಲಕ್ಷ ಮಂದಿಯ ಅಹವಾಲು ಸ್ವೀಕರಿಸಲು ಪೂರಕವಾದ ಕರಡು ನಿಯಮಾವಳಿ ಅಥವಾ ಮಾದರಿ ನಿರ್ವಹಣಾ ವ್ಯವಸ್ಥೆ (ಎಸ್‌ಒಪಿ) ರೂಪಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರಕ್ಕೆ ಸೂಚಿಸಿದೆ.

ಈ ಮಾದರಿ ನಿರ್ವಹಣಾ ವ್ಯವಸ್ಥೆ ಪಾರದರ್ಶವಾಗಿರಬೇಕು ಮತ್ತು ಇದೇ 16ರ ಒಳಗಾಗಿ ನ್ಯಾಯಾಲಯಕ್ಕೆ ಕರಡು ನಿಯಮಾವಳಿ ಸಲ್ಲಿಸಿ, ಒಪ್ಪಿಗೆ ಪಡೆಯಬೇಕು ಎಂದು ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಪಟ್ಟಿಯಲ್ಲಿ ಹೆಸರು ಸೇರಿಸಲು ಜನರಿಗೆ ಎಲ್ಲ ನ್ಯಾಯಯುತವಾದ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಸ್ಥಳೀಯ ರಿಜಿಸ್ಟ್ರಾರ್‌ಗೆ ಸೂಚನೆ ನೀಡಬೇಕು ಎಂದು ಹೇಳಿದೆ.

 

***

ಇದು ಒಂದು ಜಾತಿ, ಧರ್ಮ ಹಾಗೂ ಪ್ರದೇಶಕ್ಕೆ ಸೀಮಿತವಾದ ವಿಷಯವಲ್ಲ. ಮಾನವೀಯತೆಗೆ ಸಂಬಂಧಿಸಿದ ವಿಷಯ
- ಗುಲಾಂ ನಬಿ ಆಜಾದ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ

***

ನಿಜವಾದ ಭಾರತೀಯರನ್ನು ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಟ್ಟಿಲ್ಲ. ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ವಿರೋಧ ಪಕ್ಷಗಳು ಇದನ್ನು ರಾಜಕೀಕರಣಗೊಳಿಸುತ್ತಿವೆ
- ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

***

ಎನ್‌ಆರ್‌ಸಿ ಜನತೆಯನ್ನು ವಿಭಜಿಸುವ ರಾಜಕೀಯ ಉದ್ದೇಶದಿಂದ ಕೂಡಿದೆ. ದೇಶದಲ್ಲಿ ರಕ್ತದೋಕುಳಿ ಮತ್ತು ನಾಗರಿಕ ಯುದ್ಧದ ಎಚ್ಚರಿಕೆ ಕೊಡುತ್ತಿದೆ
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)