ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆ ಎಲ್ಲಿ ನಡೆದರೂ ಖಂಡನೀಯ: ನರೇಂದ್ರ ಮೋದಿ

ಜಾರ್ಖಂಡ್‌ ಗುಂಪುದಾಳಿ ಪ್ರಕರಣ: ಮೌನ ಮುರಿದ ಪ್ರಧಾನಿ ಮೋದಿ
Last Updated 26 ಜೂನ್ 2019, 19:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾರ್ಖಂಡ್‌ನಲ್ಲಿ ನಡೆದಿದ್ದ ಗುಂಪು ದಾಳಿ ಪ್ರಕರಣ ಕುರಿತಂತೆ ಬುಧವಾರ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಘಟನೆಯಿಂದ ತುಂಬ ನೋವಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷಯಾಗಬೇಕು’ ಎಂದರು.

‘ಇದೊಂದೇ ಅಲ್ಲ, ಜಾರ್ಖಂಡ್‌, ಕೇರಳ, ಪಶ್ಚಿಮ ಬಂಗಾಳ ಹೀಗೆ ಎಲ್ಲಿ ಎಂಥ ಹಿಂಸಾಚಾರ ನಡೆದರೂ ಅದನ್ನು ಖಂಡಿಸಬೇಕು. ಎಲ್ಲವನ್ನೂ ಒಂದೇ ರೀತಿಯಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದರು.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ‘ಗುಂಪು ದಾಳಿ ಘಟನೆಯು ಎಲ್ಲರಂತೆ ನನಗೂ ತುಂಬ ನೋವು ಉಂಟುಮಾಡಿದೆ. ಆದರೆ ಇದನ್ನು ಮುಂದಿಟ್ಟುಕೊಂಡು ಇಡೀ ರಾಜ್ಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು. ರಾಜ್ಯಸಭೆಯ ಕೆಲವು ಸದಸ್ಯರು ಈ ಘಟನೆಯ ನಂತರ ಜಾರ್ಖಂಡ್‌ ರಾಜ್ಯವನ್ನು ‘ಗುಂಪು ಹಲ್ಲೆಯ ಕೇಂದ್ರ’ ಎಂದು ಬಣ್ಣಿಸಿದ್ದಾರೆ. ಇದು ಸರಿಯಲ್ಲ, ರಾಜ್ಯವೊಂದನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ’ ಎಂದರು.

ಬಿಹಾರದಲ್ಲಿ ಮಿದುಳಿನ ಉರಿಯೂತದಿಂದ 130 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ನೋವು ವ್ಯಕ್ತಪಡಿಸಿ, ‘ಸ್ವಾತಂತ್ರ್ಯ ಬಂದು ಏಳು ದಶಕಗಳ ಬಳಿಕವೂ ಮಕ್ಕಳು ಇಂಥ ರೋಗಕ್ಕೆ ತುತ್ತಾಗುತ್ತಾರೆ ಎಂಬುದು ನಾಚಿಕೆಗೇಡಿನ ವಿಚಾರ. ಬಿಹಾರದಲ್ಲಿ ಜೆಡಿಯು ಆಡಳಿತ ಇದೆ. ಸಮಸ್ಯೆಯನ್ನು ಪರಿಹರಿಸಲು ಕೇಂದ್ರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ನೆರವು ನೀಡುವುದು’ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ರಾಜ್ಯಸಭೆಯಲ್ಲೂ ಕಾಂಗ್ರೆಸ್‌ ಪಕ್ಷವನ್ನು ಟೀಕೆಗೆ ಒಳಪಡಿಸಿದ ಮೋದಿ, ‘ಮತಯಂತ್ರಗಳ ವಿಶ್ವಾಸಾರ್ಹತೆ ಮತ್ತು ಬಿಜೆಪಿಯ ಅಭೂತಪೂರ್ವ ಗೆಲುವನ್ನು ಪ್ರಶ್ನಿಸುವ ಮೂಲಕ ದೇಶದ ಮತದಾರರನ್ನು ಕಾಂಗ್ರೆಸ್‌ ಅವಮಾನಿಸಿದೆ’ ಎಂದು ಆರೋಪಿಸಿದರು. ಲೋಕಸಭೆಯಲ್ಲಿಯೂ ಅವರು ಕಾಂಗ್ರೆಸ್‌ ವಿರುದ್ಧ ಮಂಗಳವಾರ ಹರಿಹಾಯ್ದಿದ್ದರು.

‘ವಿರೋಧಪಕ್ಷಗಳ ದುರಹಂಕಾರಕ್ಕೂ ಒಂದು ಮಿತಿ ಇದೆ. ಕಾಂಗ್ರೆಸ್‌ ಪಕ್ಷವು ಜನರ ತೀರ್ಪನ್ನು ಪ್ರಶ್ನಿಸುವ ಮೂಲಕ ಅವರಿಗೆ ಅಗೌರವ ತೋರಿದೆ. ಕಾಂಗ್ರೆಸ್‌ ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಗೆಲುವನ್ನು ಜೀರ್ಣಿಸಿಕೊಳ್ಳಲೂ ಅದಕ್ಕೆ ಆಗುವುದಿಲ್ಲ. ಬಿಜೆಪಿ ಇಷ್ಟೊಂದು ದೊಡ್ಡ ಅಂತರದ ಗೆಲುವು ಸಾಧಿಸಿದ ನಂತರವೂ ಕಾಂಗ್ರೆಸ್‌ನವರು ‘ನೀವು (ಬಿಜೆಪಿ) ಗೆದ್ದಿರಬಹುದು, ಆದರೆ ದೇಶ ಮತ್ತು ಪ್ರಜಾತಂತ್ರ ಸೋತಿದೆ’ ಎಂದಿದ್ದಾರೆ.

‘ಕಾಂಗ್ರೆಸ್‌ ಸೋತರೆ ದೇಶವೇ ಸೋತಿತು ಎಂದು ಅರ್ಥವೇ? ಕಾಂಗ್ರೆಸ್‌ ಎಂದರೆ ದೇಶ, ದೇಶ ಎಂದರೆ ಕಾಂಗ್ರೆಸ್‌ ಎಂಬುದು ಈ ಹೇಳಿಕೆಯ ಅರ್ಥವೇ? ವಯನಾಡ್‌ ಹಾಗೂ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ಗೆ ಆಗಿರುವ ಗೆಲುವು ಸಹ ದೇಶಕ್ಕೆ ಆಗಿರುವ ಸೋಲೇ? ಮತದಾರರ ತೀರ್ಪನ್ನು ಪ್ರಶ್ನಿಸುವಂಥ ಇಂಥ ಹೇಳಿಕೆ ಅತ್ಯಂತ ದುರ್ಭಾಗ್ಯಪೂರ್ಣವಾದುದು’ ಎಂದು ಮೋದಿ ಹೇಳಿದರು.

ಮೋದಿ ಟೀಕಾ ಪ್ರಹಾರ

l ‘ನವ ಭಾರತ’ದ (ನ್ಯೂ ಇಂಡಿಯಾ) ಚಿಂತನೆಯನ್ನು ವಿರೋಧಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ದೇಶವನ್ನು ಋಣಾತ್ಮಕ ಚಿಂತನೆಗಳತ್ತ ಒಯ್ಯಬೇಡಿ, ಅದು ಪಾಪ

l ಸಚಿವ ಸಂಪುಟದ ತೀರ್ಮಾನಗಳನ್ನು ಮಾಧ್ಯಮಗೋಷ್ಠಿಯಲ್ಲಿ ಹರಿದುಹಾಕುವ, ಹಗರಣಗಳನ್ನು ಸೃಷ್ಟಿಸುವ, ‘ಟುಕಡೆ ಟುಕಡೆ ಗ್ಯಾಂಗ್‌’ ಅನ್ನು ಬೆಂಬಲಿಸುವ ಹಳೆಯ ಭಾರತ ನಮಗೆ ಬೇಕೇ?

l ಮತಯಂತ್ರಗಳನ್ನು ವಿರೋಧಿಸುವವರು ಅಷ್ಟಕ್ಕೇ ಸೀಮಿತರಲ್ಲ. ತಂತ್ರಜ್ಞಾನ, ಡಿಜಿಟಲೀಕರಣ, ಆಧಾರ್‌, ಜಿಎಸ್‌ಟಿ, ಭೀಮ್‌ ಆ್ಯಪ್‌ ಎಲ್ಲವೂ ಅವರಿಗೆ ಸಮಸ್ಯೆಗಳಾಗಿ ಕಾಣಿಸುತ್ತಿವೆ

l ಒಂದು ಕಾಲದಲ್ಲಿ ಲೋಕಸಭೆಯಲ್ಲಿ ಬಿಜೆಪಿಯ ಕೇವಲ ಇಬ್ಬರು ಸದಸ್ಯರಿದ್ದರು. ನಾವು ಕಠಿಣ ಪರಿಶ್ರಮದಿಂದ ಜನರ ವಿಶ್ವಾಸವನ್ನು ಗಳಿಸಿದ್ದೇವೆ. ಚುನಾವಣಾ ವ್ಯವಸ್ಥೆಯನ್ನಾಗಲಿ ಮತಯಂತ್ರಗಳನ್ನಾಗಲಿ ದೂಷಿಸಿಲ್ಲ

l ಕೆಲವು ಪಕ್ಷಗಳು ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಲು ಋಣಾತ್ಮಕ ಚಿಂತನೆಯೇ ಕಾರಣ. ಪಕ್ಷಗಳು ಇಷ್ಟೊಂದು ಋಣಾತ್ಮಕವಾಗಿರುವುದೇಕೆ?

l ‘ಒಂದು ದೇಶ ಒಂದು ಚುನಾವಣೆ’ ಚಿಂತನೆ ಇಷ್ಟವಾಗದಿರಬಹುದು. ಅಥವಾ ಸಲಹೆ ನೀಡಲು ಇಚ್ಛಿಸಬಹುದು. ಆದರೆ ಆ ಬಗ್ಗೆ ಚರ್ಚೆ ನಡೆಸುವುದು ಅಗತ್ಯ

l ಮಾಧ್ಯಮಗಳು ತಮ್ಮನ್ನು ಮಾರಿಕೊಂಡಿವೆ ಎನ್ನುವುದಾದರೆ, ತಮಿಳುನಾಡು ಮತ್ತು ಕೇರಳದಲ್ಲೂ ಮಾಧ್ಯಮಗಳು
ಮಾರಾಟವಾಗಿದ್ದವೇ?

l ಎಲ್ಲದರ ಶ್ರೇಯಸ್ಸು ತನಗೇ ಸೇರಿದ್ದು ಎನ್ನುವ ಕಾಂಗ್ರೆಸ್‌, ‘ರಾಷ್ಟ್ರೀಯ ಪೌರತ್ವ ನೋಂದಣಿ’ಯ ಶ್ರೇಯಸ್ಸನ್ನು ಯಾಕೆ ತೆಗೆದುಕೊಳ್ಳುವುದಿಲ್ಲ? ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಮೊದಲು ಅದನ್ನುಒಪ್ಪಿಕೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT