ಬುಧವಾರ, ಅಕ್ಟೋಬರ್ 16, 2019
28 °C

ಹರಿಯಾಣ: ಹೂಡ ಹಾದಿ ಸುಲಭವಲ್ಲ

Published:
Updated:
Prajavani

ರೋಹ್ಟಕ್‌: ಹರಿಯಾಣದ ಕಾಂಗ್ರೆಸ್‌ ಮುಖಂಡ ಭೂಪಿಂದರ್‌ ಸಿಂಗ್‌ ಹೂಡ ಅವರು 8 ಚುನಾವಣೆಗಳನ್ನು ಗೆದ್ದಿರುವ ಹಿರಿಯ ನಾಯಕ. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆ ಈ ನಾಯಕನಿಗೆ ಅಷ್ಟು ಸುಲಭದ್ದಲ್ಲ.

ಚುನಾವಣೆಗೆ ಮುನ್ನವೇ ಹೈಕಮಾಂಡ್‌ ಮೇಲೆ ಒತ್ತಡ ಹೇರಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಅಶೋಕ್‌ ತನ್ವರ್‌ ಅವರಿಂದ ಕಸಿದುಕೊಂಡು ಕುಮಾರಿ ಶೆಲ್ಜಾ ಅವರಿಗೆ ಕೊಡಿಸುವಲ್ಲಿ ಹೂಡ ಯಶಸ್ವಿಯಾದರು. ಆದರೆ, ಕಾಂಗ್ರೆಸ್‌ಗೆ ಇದರಿಂದ ಲಾಭವೇನೂ ಆಗಲಾರದು ಎಂದು ಕಾಂಗ್ರೆಸ್‌ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಇಂಥ ಕಾರ್ಯಕರ್ತರು ಮತ್ತು ನಾಯಕರು, ‘ಹೂಡ ಅವರೇ ರಾಜ್ಯದಲ್ಲಿ ಕಾಂಗ್ರೆಸ್‌ನ ಮುಖ’ ಎಂದು ವಾದಿಸುತ್ತಾರೆ.

ಎರಡು ಬಾರಿ ಮುಖ್ಯಮಂತ್ರಿ, ನಾಲ್ಕು  ಬಾರಿ ಸಂಸದರಾಗಿರುವ 72 ವರ್ಷ ವಯಸ್ಸಿನ ಹೂಡ, ಈ ಬಾರಿಯೂ ಕಿಲೊಯೀ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇಂಡಿಯನ್‌ ನ್ಯಾಷನಲ್‌ ಲೋಕ ದಳದ (ಐಎನ್ಎಲ್‌ಡಿ) ಮಾಜಿ ಅಧ್ಯಕ್ಷ, ಇತ್ತೀಚೆಗಷ್ಟೇ  ಬಿಜೆಪಿಗೆ ಸೇರ್ಪಡೆಯಾಗಿರುವ ಸತೀಶ್‌ ನಾಂದಲ್‌ ಅವರನ್ನು ಬಿಜೆಪಿಯು ಹೂಡ ವಿರುದ್ಧ  ಕಣಕ್ಕಿಳಿಸಿದೆ.

ಕಿಲೊಯೀ ಕ್ಷೇತ್ರದಿಂದ ಹೂಡ ಎರಡು ಬಾರಿ ಚುನಾವಣೆಯನ್ನು ಗೆದ್ದಿದ್ದಾರೆ. 2005ರಲ್ಲಿ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಹೂಡ ಅವರನ್ನು ಕಣಕ್ಕೆ ಇಳಿಸಿತ್ತು (ಆಗ ಅವರು ಸಂಸದರಾಗಿದ್ದರು).
ಆ ಚುನಾವಣೆಯಲ್ಲಿ ಗೆದ್ದ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಬಿಜೆಪಿ ಈ ಬಾರಿ ರಾಷ್ಟ್ರೀಯ ಭದ್ರತೆ, ಕಾಶ್ಮೀರದ ವಿಶೇಷಾಧಿಕಾರ ರದ್ದತಿ, ಭ್ರಷ್ಟಾಚಾರ ಮುಕ್ತ ಆಡಳಿತವನ್ನೇ
ಮುನ್ನೆಲೆಯಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ, ‘ಇವುಗಳು ಚುನಾವಣಾ ವಿಷಯಗಳೇ ಅಲ್ಲ. ಬದ
ಲಿಗೆ ನೀರು, ವಿದ್ಯುತ್‌ ಹಾಗೂ ಆರೋಗ್ಯ ಸೇವೆಗಳೇ ನಿಜವಾದ ವಿಷಯಗಳು’ ಎಂದು ಮತದಾರರು ಹೇಳುತ್ತಿದ್ದಾರೆ.

ಕೆಲವೇ ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 10 ಕ್ಷೇತ್ರಗಳಲ್ಲಿ ಸೋಲಾಗಿತ್ತು ಎಂಬುದು ಕಾಂಗ್ರೆಸ್‌ನ  ಚಿಂತೆಯಾಗಿದೆ. ಆದರೆ ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ವ್ಯತ್ಯಾಸವಿದೆ ಎಂದು ಕಾಂಗ್ರೆಸ್‌ ನಾಯಕರು ವಾದಿಸುತ್ತಾರೆ.

ಮಹಿಳೆಯರಿಗೆ ಭರಪೂರ ಭರವಸೆ

ಚಂಡೀಗಡ: ಹರಿಯಾಣದಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್‌, ಅದಕ್ಕಾಗಿ ಮಹಿಳೆಯರ ಮನವೊಲಿಕೆಗೆ ಮುಂದಾಗಿದೆ. ಶುಕ್ರವಾರ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆ ‘ಸಂಕಲ್ಪ ಪತ್ರ’ದಲ್ಲಿ  ಮಹಿಳೆಯರಿಗೆ ಅನೇಕ ಭರವಸೆಗಳನ್ನು ನೀಡಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದಲ್ಲದೆ ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವುದಾಗಿ ಹೇಳಿದೆ. ಪಂಚಾಯತಿರಾಜ್‌ ಸಂಸ್ಥೆಗಳು, ನಗರಸಭೆ ಹಾಗೂ ಮಹಾನಗರಪಾಲಿಕೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿಯೂ ‘ಸಂಕಲ್ಪ ಪತ್ರ’ದಲ್ಲಿ ತಿಳಿಸಲಾಗಿದೆ.

ಇತರ ಭರವಸೆಗಳು

* ರೈತರ ಸಾಲ ಮನ್ನಾ

* ಪರಿಶಿಷ್ಟ ಜಾತಿ ಮತ್ತು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ₹12,000 ಮತ್ತು 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 15,000 ವಿದ್ಯಾರ್ಥಿವೇತನ

* ಪರಿಶಿಷ್ಟ ಜಾತಿ ಆಯೋಗ ರಚನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳ ತನಿಖೆಗೆ ವಿಶೇಷ ತನಿಖಾ ದಳ ರಚನೆ

* ಮಾದಕವಸ್ತು ದಂಧೆ ತಡೆಗೆ ವಿಶೇಷ ಕಾರ್ಯಪಡೆ ರಚನೆ

ಮೋದಿ: ನಾಲ್ಕು ದಿನ, ಒಂಬತ್ತು ರ್‍ಯಾಲಿ

ಮುಂಬೈ: ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಒಂಬತ್ತು ರ್‍ಯಾಲಿಗಳನ್ನು ನಡೆಸಲಿದ್ದಾರೆ. ಅವುಗಳಲ್ಲಿ ಒಂದು ಮುಂಬೈಯಲ್ಲಿ ನಡೆಯಲಿದೆ’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ಅಕ್ಟೋಬರ್‌ 13ರಂದು ಎರಡು, ಅ.16 ಮತ್ತು 17ರಂದು ತಲಾ ಮೂರು ರ್‍ಯಾಲಿಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮೋದಿ ಅವರು ಮತ ಯಾಚಿಸುವರು. ಅ. 18ರಂದು ಮುಂಬೈಯಲ್ಲಿ ರ್‍ಯಾಲಿ ನಡೆಯಲಿದೆ ಎಂದು ಸ್ಮೃತಿ ತಿಳಿಸಿದರು.

***

ನಾವು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಿದ್ದೇವೆ. ಆದ್ದರಿಂದ ಈ ಬಾರಿ ಕನಿಷ್ಠ 85 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ
–ಸತೀಶ್‌ ನಾಂದಲ್‌, ಬಿಜೆಪಿ ಅಭ್ಯರ್ಥಿ

ಬಿಜೆಪಿಯವರು ಏನೇ ಹೇಳಬಹುದು, ಜನರು ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರ ಮಾಡಿದ್ದಾರೆ
–ಭೂಪಿಂದರ್‌ಸಿಂಗ್‌ ಹೂಡ, ಕಾಂಗ್ರೆಸ್‌ ಮುಖಂಡ

Post Comments (+)