ಎನ್‌ಆರ್‌ಸಿ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರು!

6
ಲೋಪದೋಷ ಸರಿಪಡಿಸುವ ಭರವಸೆ ನೀಡಿದ ಅಧಿಕಾರಿಗಳು

ಎನ್‌ಆರ್‌ಸಿ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರು!

Published:
Updated:

ಗುವಾಹಟಿ: ವಿದೇಶಿಯರ ವ್ಯಾಜ್ಯ ಇತ್ಯರ್ಥ ನ್ಯಾಯಮಂಡಳಿಯಲ್ಲಿ ಪ್ರಕರಣ ಬಾಕಿ ಇರುವ ನಾಗರಿಕರ ಹೆಸರನ್ನು ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಂತಿಮ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಎನ್‌ಆರ್‌ಸಿ ಸಮಿತಿ ಹೇಳಿದೆ.

ನ್ಯಾಯಮಂಡಳಿಯಲ್ಲಿ ಪ್ರಕರಣ ಬಾಕಿ ಇರುವ ಹಲವು ಅಕ್ರಮ ವಲಸಿಗರ ಹೆಸರು ಎನ್‌ಆರ್‌ಸಿ ಪರಿಷ್ಕೃತ ಕರಡು ಪಟ್ಟಿಯಲ್ಲಿ ಸೇರಿಕೊಂಡಿವೆ. ಅಂತಹವರ ಹೆಸರನ್ನು ಪತ್ತೆ ಹಚ್ಚಿ, ಪಟ್ಟಿಯಿಂದ ಕೈಬಿಡಲಾಗುವುದು ಎಂದು ಎನ್‌ಆರ್‌ಸಿ ರಾಜ್ಯ ಸಂಯೋಜಕ ಪ್ರತೀಕ್‌ ಹಜೇಲಾ ಶನಿವಾರ ತಿಳಿಸಿದ್ದಾರೆ.

ಕೆಲವು ವಲಸಿಗರು ಹೆಸರು, ವಿಳಾಸ ಹಾಗೂ ಗುರುತು ಬದಲಾಯಿಸಿ ಪಟ್ಟಿಯಲ್ಲಿ ಹೆಸರು ಸೇರಿಸಿರುವುದು ಗಮನಕ್ಕೆ ಬಂದಿದೆ. ಅಂಥವರನ್ನು ಪತ್ತೆ ಹಚ್ಚಲಾಗುವುದು. ಅಂಥವರ ಹೆಸರು ಕೈಬಿಟ್ಟು, ಕೈಬಿಟ್ಟು ಹೋಗಿರುವ ಮೂಲ ನಾಗರಿಕರ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಪೌರತ್ವ ನೋಂದಣಿ ಬೃಹತ್‌ ಕಾರ್ಯ. ಒಂದೇ ಬಾರಿಗೆ ಎಲ್ಲವೂ ನೂರಕ್ಕೆ ನೂರರಷ್ಟು ಸರಿಯಾಗಿರಲು ಸಾಧ್ಯವಿಲ್ಲ. ಅಂತಿಮ ಪಟ್ಟಿಯಲ್ಲಿ ಎಲ್ಲ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಹಜೇಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ ಹೆಸರು ಕಾಣೆಯಾದ 40 ಲಕ್ಷ ಮಂದಿಯ ಅಹವಾಲು ಸ್ವೀಕರಿಸಲು ಮಾದರಿ ನಿರ್ವಹಣಾ ವ್ಯವಸ್ಥೆ (ಎಸ್‌ಒಪಿ) ರೂಪಿಸುವ ಕಾರ್ಯ ಭರದಿಂದಸಾಗಿದೆ.

ಆಗಸ್ಟ್‌ 16ರ ಒಳಗಾಗಿ ಕರಡು ನಿಯಮಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎನ್‌ಆರ್‌ಸಿಯಲ್ಲಿ ಹೆಸರು ಸೇರ್ಪಡೆಗೆ ಇದೇ 30ರಿಂದ ಸೆಪ್ಟೆಂಬರ್‌ 28ರವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ಹಜೇಲಾ ತಿಳಿಸಿದ್ದಾರೆ.

ಟಿಎಂಸಿಯಿಂದ ಕರಾಳ ದಿನ ಆಚರಣೆ (ಕೋಲ್ಕತ್ತ ವರದಿ): ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ವರದಿ ಪ್ರಕಟವಾದ ನಂತರ, ಅಸ್ಸಾಂನಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ತೆರಳಿದ್ದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ನ ಎಂಟು ಸಂಸದರ ತಂಡದ ಮೇಲೆ ನಡೆದ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಶನಿವಾರ ಕರಾಳ ದಿನ ಆಚರಿಸಿ, ಪ್ರತಿಭಟಿಸಲಾಯಿತು.

ಕಪ್ಪು ಪಟ್ಟಿ ಧರಿಸಿದ ಟಿಎಂಸಿ ಕಾರ್ಯಕರ್ತರು, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

***

ಎನ್‌ಆರ್‌ಸಿ ಪರಿಷ್ಕೃತ ಕರಡು ಪಟ್ಟಿಯಲ್ಲಿ ಸೇರಿಕೊಂಡಿರುವ ಅಕ್ರಮ ವಲಸಿಗರ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗುವುದು
– ಪ್ರತೀಕ್‌ ಹಜೇಲಾ, ಎನ್‌ಆರ್‌ಸಿ ರಾಜ್ಯ ಸಂಯೋಜಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !