ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ದುರ್ಬಲಗೊಳಿಸಲು ಕಾಂಗ್ರೆಸ್‌ ಯತ್ನ: ನರೇಂದ್ರ ಮೋದಿ ಆರೋಪ

Last Updated 16 ಡಿಸೆಂಬರ್ 2018, 20:14 IST
ಅಕ್ಷರ ಗಾತ್ರ

ರಾಯ್‌ ಬರೇಲಿ (ಉತ್ತರ ಪ್ರದೇಶ): ಭಾರತೀಯ ಸೇನೆ ಬಲಿಷ್ಠವಾಗುವುದು ಕಾಂಗ್ರೆಸ್‌ಗೆ ಬೇಕಾಗಿಲ್ಲ. ಹೀಗಾಗಿಯೇ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಕಾಂಗ್ರೆಸ್‌ ಅಪಸ್ವರ ಎತ್ತುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ರಫೇಲ್‌ ಒಪ್ಪಂದದಲ್ಲಿ ಕೇಂದ್ರ ಸರ್ಕಾರಕ್ಕೆಸುಪ್ರೀಂ ಕೋರ್ಟ್ ಕ್ಲೀನ್‌ ಚಿಟ್‌ ನೀಡಿದ ನಂತರಕಾಂಗ್ರೆಸ್‌ ಹತಾಶಗೊಂಡಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟು ಹಾಕುವ ಯತ್ನ ನಡೆಸಿದೆ ಎಂದು ಹರಿಹಾಯ್ದರು.

ರಕ್ಷಣಾ ಸಚಿವರು, ಭಾರತೀಯ ವಾಯುಪಡೆ ಅಧಿಕಾರಿಗಳು ಮತ್ತು ಫ್ರಾನ್ಸ್‌ ಸರ್ಕಾರದ ವಿರುದ್ಧ ಬೊಬ್ಬೆ ಹೊಡೆಯುತ್ತಿದ್ದ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ ಕೂಡ ಸುಳ್ಳುಗಾರನಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ ರಾಯ್‌ ಬರೇಲಿಯಲ್ಲಿ ಭಾನುವಾರ ಮಾಡರ್ನ್‌ ರೈಲ್‌ ಕೋಚ್‌ ಕಾರ್ಖಾನೆಯಲ್ಲಿ ತಯಾರಾದ 900ನೇ ರೈಲು ಬೋಗಿ ಲೋಕಾರ್ಪಣೆ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

50 ನಿಮಿಷಗಳ ಭಾಷಣದಲ್ಲಿ ಅರ್ಧಗಂಟೆಯನ್ನು ರಫೇಲ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗೆ ಮೀಸಲಿಟ್ಟರು. ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪ್ರಧಾನಿ ಭಾಗವಹಿಸಿದ ಮೊದಲ ಸಾರ್ವಜನಿಕ ಸಮಾರಂಭ ಇದಾಗಿದೆ.

ಹತ್ತು ವರ್ಷದ ಆಡಳಿತದಲ್ಲಿ ಸೇನೆಯನ್ನು ಬಲಿಷ್ಠಗೊಳಿಸುವ ಯಾವ ಕೆಲಸವನ್ನೂ ಕಾಂಗ್ರೆಸ್‌ ಮಾಡಲಿಲ್ಲ. ಬದಲಾಗಿ ಭಾರತೀಯ ಸೇನೆ ಮತ್ತು ಸೇನಾಧಿಕಾರಿಗಳನ್ನು ಮೂದಲಿಸಿದ ನಾಯಕರಿಗೆ ಮಣೆ ಹಾಕಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಅನೇಕ ಕರ್ಮಕಾಂಡಗಳನ್ನು ಬಹಿರಂಗಗೊಳಿಸುವೆ. ಇದಕ್ಕೆ ಇನ್ನೂ ಕೆಲವು ವಾರ ಬೇಕಾಗುತ್ತದೆ ಎಂದರು.

ಕ್ವಟ್ರೋಚಿ ಮಾಮಾ ಮಿಷೆಲ್‌ ಚಾಚಾ
ಶಸ್ತ್ರಾಸ್ತ್ರ ದಲ್ಲಾಳಿಗಳಾದ ಒಟ್ಟಾವಿಯೊ ಕ್ವಟ್ರೋಚಿ ಮತ್ತು ಕ್ರಿಶ್ಚಿಯನ್‌ ಮಿಷೆಲ್‌ ಅಂಥವರನ್ನು ಕೇಂದ್ರ ಸರ್ಕಾರ ರಕ್ಷಣಾ ಒಪ್ಪಂದದಿಂದ ದೂರವಿಟ್ಟಿರುವುದು ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಎಲ್ಲ ರಕ್ಷಣಾ ಒಪ್ಪಂದಗಳಲ್ಲಿ ‘ಕ್ವಟ್ರೋಚಿ ಮಾಮಾ’ ಮತ್ತು ‘ಮಿಷೆಲ್‌ ಚಾಚಾ’ ಶಾಮೀಲಾಗಿದ್ದಾರೆ ಎಂದರು.

ದುಬೈನಿಂದ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿ ಕರೆತಂದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದದ ದಲ್ಲಾಳಿ ಕ್ರಿಶ್ಚಿಯನ್‌ ಮಿಷೆಲ್‌ ಕುರಿತು ಪ್ರಸ್ತಾಪಿಸಿದ ಮೋದಿ, ‘ನಾವು ಈಗಾಗಲೇ ಒಬ್ಬ ಅಂಕಲ್‌ನನ್ನು ಹಿಡಿದು ಭಾರತಕ್ಕೆ ಕರೆ ತಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT