ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜಿಗಾಗಿ ಮೋದಿ ವಿದೇಶ ಪ್ರವಾಸ

ರಾಜಸ್ಥಾನ ಬಿಜೆಪಿ ಸರ್ಕಾರದ ‘ರಿಪೋರ್ಟ್ ಕಾರ್ಡ್‌’ ಬಿಡುಗಡೆ ಮಾಡಿದ ಕಾಂಗ್ರೆಸ್‌ನಿಂದ ಲೇವಡಿ
Last Updated 3 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಜೈಪುರ: ಅನೇಕ ವಿದೇಶ ಪ್ರವಾಸಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಂದು ನಯಾಪೈಸೆ ಕಪ್ಪುಹಣವನ್ನೂ ಭಾರತಕ್ಕೆ ಮರಳಿ ತರಲಾಗಲಿಲ್ಲ ಎಂದು ಕಾಂಗ್ರೆಸ್‌ ಟೀಕಿಸಿದೆ.

ಬ್ಯಾಂಕ್‌ಗಳಿಗೆ ವಂಚನೆ ಮಾಡಿ ವಿದೇಶಗಳಿಗೆ ಪರಾರಿಯಾದ ವಿಜಯ ಮಲ್ಯ, ನಿರವ್‌ ಮೋದಿ, ಮೆಹುಲ್‌ ಚೋಕ್ಸಿ ಅವರಂತಹ ವಂಚಕರನ್ನು ದೇಶಕ್ಕೆ ಕರೆತರಲು ಪ್ರಧಾನಿ ವಿದೇಶ ಪ್ರವಾಸಗಳು ನೆರವಾಗಲಿಲ್ಲ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಲೇವಡಿ ಮಾಡಿದ್ದಾರೆ.

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ತನಿಖೆಯಿಂದ ಪಾರಾಗಲು ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ವ್ಯಾಪಕ ಭ್ರಷ್ಟಾಚಾರ ಹಗರಣ ನಡೆದಿವೆ. ಭ್ರಷ್ಟಾಚಾರ ತಡೆಯಲು ಬಿಜೆಪಿ ವಿಫಲವಾಗಿದೆ ಎಂದು ಆಜಾದ್‌ ಆರೋಪಿಸಿದ್ದಾರೆ.

ರಾಜಸ್ಥಾನ ಬಿಜೆಪಿ ಸರ್ಕಾರದ ‘ರಿಪೋರ್ಟ್‌ ಕಾರ್ಡ್’ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕರ್ಷಕ ಘೋಷಣೆಗಳ ಮೂಲಕ ಪ್ರಚಾರ ಪಡೆಯುವುದನ್ನು ಬಿಟ್ಟು ಬಿಜೆಪಿ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ರಾಜಸ್ಥಾನ ಸರ್ಕಾರ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ ಎಂದರು.

ಅಚ್ಚರಿ ಮೂಡಿಸಿದ ಚೌಹಾಣ್‌ ಬಾಮೈದ!

ನವದೆಹಲಿ(ಪಿಟಿಐ): ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಅವರ ಬಾಮೈದ ಸಂಜಯ್‌ ಸಿಂಗ್‌ ಮಸಾನಿ ಅವರು ಕಾಂಗ್ರೆಸ್‌ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನವದೆಹಲಿಯಲ್ಲಿ ಮಧ್ಯ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮ್ಮುಖದಲ್ಲಿ ಸಂಜಯ್‌ ಸಿಂಗ್‌ ಶನಿವಾರ ಕಾಂಗ್ರೆಸ್‌ ಸೇರಿದರು.

‘ಕಮಲ್‌ ನಾಥ್‌ ಅವರಂತಹ ಧೀಮಂತ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಬೇಕೇ ಹೊರತು ಚೌಹಾಣ್ ಅವರಂತಹ ವ್ಯಕ್ತಿಗಳಲ್ಲ’ ಎಂದು ಮಸಾನಿ ಹೇಳಿದ್ದಾರೆ.ಸಂಜಯ್‌ ಸಿಂಗ್‌ ಮಸಾನಿ ಅವರು ಚೌಹಾಣ್ ಪತ್ನಿ ಸಾಧನಾ ಸಿಂಗ್‌ ಅವರ ಸಹೋದರ.

ಒವೈಸಿ ವಿರುದ್ಧ ಮುಸ್ಲಿಂ ಮಹಿಳೆ

ಹೈದರಾಬಾದ್‌ (ಪಿಟಿಐ): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಲ್‌ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ನಾಯಕ ಅಕ್ಬರುದ್ದೀನ್ ಒವೈಸಿ ವಿರುದ್ಧ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಬಿಜೆಪಿ 28 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಒವೈಸಿ ಸ್ಪರ್ಧಿಸಿರುವ ಚಂದ್ರಯಾನಗುಟ್ಟ ಕ್ಷೇತ್ರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನಾಯಕಿ ಸೈಯದ್ ಶಹಝಾದಿ ಎಂಬುವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅಸಾದುದ್ದೀನ್‌ ಸಹೋದರ ಅಕ್ಬರುದ್ದೀನ್‌ ಒವೈಸಿ, 1999, 2004, 2009 ಹಾಗೂ 2014ರಲ್ಲಿ ಸತತ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದರು.

ಪ್ರಣಾಳಿಕೆ ಬಿಡುಗಡೆ ಮುಂಡೂಡಿಕೆ

ರಾಯಪುರ: ಛತ್ತೀಸಗಡ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವನ್ನು ಬಿಜೆಪಿ ಕೊನೆಯ ಕ್ಷಣದಲ್ಲಿ ರದ್ದು ಮಾಡಿದೆ.

ಭಾನುವಾರ ರಾಯಪುರಕ್ಕೆ ಭೇಟಿ ನೀಡಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು.

ಶಾ ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣದಿಂದ ಪ್ರಣಾಳಿಕೆ ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ. ದೀಪಾವಳಿ ನಂತರ ದಿನಾಂಕ ನಿಗದಿಪಡಿಸಲಾಗುವುದು ಎಂದು ಬಿಜೆಪಿ ಹೇಳಿದೆ.

‘ಬಿಜೆಪಿಗೆ ದೇಶದ ಚಿಂತೆ, ಒಬ್ಬರಿಗೆ ಮಗನ ಚಿಂತೆ’

ನವದೆಹಲಿ: ಬಿಜೆಪಿಗೆ ದೇಶದ ಭವಿಷ್ಯದ ಚಿಂತೆಯಾದರೆ, ಇನ್ನೂ ಕೆಲವರಿಗೆ ಸದಾ ಕುಟುಂಬದ ಅಭಿವೃದ್ಧಿ, ಅಧಿಕಾರದ
ಚಿಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸದೆ ನೆಹರೂ–ಗಾಂಧಿ ಕುಟುಂಬದ ವಿರುದ್ಧ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸಗಡದ ಬಿಜೆಪಿ ಕಾರ್ಯಕರ್ತರ ಜತೆ ಶನಿವಾರ ಅವರು ಸಂವಾದ ನಡೆಸಿದರು.

‘ಹೇಗಾದರೂ ಸರಿ ಮಗನಿಗೆ ಅಧಿಕಾರ ಕೊಡಿಸಬೇಕು ಎನ್ನುವುದೇ ಕೆಲವರ ರಾಜಕೀಯ ಜೀವನದ ಪರಮೋಚ್ಛ ಗುರಿಯಾಗಿದೆ. ಅವರಿಗೆ
ದೇಶದ ಭವಿಷ್ಯದ ಬಗ್ಗೆ ಎಳ್ಳಷ್ಟೂ ಚಿಂತೆ ಇಲ್ಲ’ ಎಂದು ಮೋದಿ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT