ಸೋಮವಾರ, ಅಕ್ಟೋಬರ್ 21, 2019
22 °C

ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು

Published:
Updated:

ನವದೆಹಲಿ: ಬಿಜೆಪಿ ಕಡೆಯಿಂದ ಬಲಿಷ್ಠ ಸವಾಲು ಇದ್ದರೂ, ಮಹಾರಾಷ್ಟ್ರ ವಿಧಾನಸಭಾ ಚುಣಾವಣೆಯಲ್ಲಿ ಗೆಲುವು ಸಾಧಿಸಲು ತಾನು ಸಾಂಪ್ರದಾಯಿಕವಾಗಿ ನೆಚ್ಚಿಕೊಂಡಿರುವ ಸಮುದಾಯಗಳ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಸಮುದಾಯಗಳನ್ನು ಒಲಿಸಿಕೊಳ್ಳಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ. 

ಮರಾಠಾವಾಡದ ಭೀಕರ ಬರಗಾಲ ಮತ್ತು ರಾಜ್ಯದ ಪಶ್ಚಿಮ ಭಾಗದಲ್ಲಿ ಉಂಟಾದ ಪ್ರವಾಹ ನಿರ್ವಹಣೆ ವಿಚಾರಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಜನರಿಗೆ ಒಂದಿಷ್ಟು ಅಸಮಾಧಾನ ಇದೆ ಎಂದು ಕಾಂಗ್ರೆಸ್ ಭಾವಿಸಿದೆ. 

‘ಬಿಜೆಪಿ–ಶಿವಸೇನಾ ಸರ್ಕಾರದ ಮೇಲೆ ಪರಿಶಿಷ್ಟ ಜಾತಿ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬೇಸರವಿದ್ದು, ನಾವು ಈ ಎಲ್ಲ ಸಮುದಾಯಗಳನ್ನು ತಲುಪಲಿದ್ದೇವೆ’ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಅಧ್ಯಕ್ಷ ನಾನಾ ಪಟೋಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಫಡಣವೀಸ್ ಹಮ್ಮಿಕೊಂಡಿರುವ ‘ಮಹಾಜನಾದೇಶ ಯಾತ್ರೆ’ಗೆ ಪರ್ಯಾಯವಾಗಿ ‘ಪೋಲ್ ಖೋಲ್ ಯಾತ್ರೆ’ ಆರಂಭಿಸಿರುವ ಪಟೋಲೆ ಅವರು ಸರ್ಕಾರದ ತಪ್ಪುಗಳನ್ನು ಜನರ ಮುಂದಿಡಲು ಯತ್ನಿಸುತ್ತಿದ್ದಾರೆ. 

ಈ ಮಧ್ಯೆ ಮಹಾರಾಷ್ಟ್ರದ ಕಾಂಗ್ರೆಸ್ ಘಟಕ ಎರಡು ಸಂಕಷ್ಟಗಳನ್ನು ಎದುರಿಸುತ್ತಿದೆ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಸ್ಥೈರ್ಯ ಕಳೆದುಕೊಂಡಿರುವ ಕಾರ್ಯಕರ್ತರನ್ನು ಹುರಿದುಂಬಿಸುವುದು ಹಾಗೂ ‍ಪಕ್ಷದ ಒಂದು ವರ್ಗ ಶುರು ಮಾಡಿರುವ ಬಣ ರಾಜಕೀಯವನ್ನು ಹತ್ತಿಕ್ಕುವುದು ದೊಡ್ಡ ಸವಾಲುಗಳು. 

ಪರಿಶಿಷ್ಟ ಜಾತಿ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಸೆಳೆಯುವುದು ಕಾಂಗ್ರೆಸ್‌ಗೆ ಅಂದುಕೊಂಡಷ್ಟು ಸುಲಭವಿಲ್ಲ. ಡಾ. ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ‘ವಂಚಿತ ಬಹುಜನ ಅಘಾಡಿ’ (ವಿಬಿಎ), ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ವಿವೇಕ್ ಪಂಡಿತ್ ನೇತೃತ್ವದ ‘ಶ್ರಮಜೀವಿ ಸಂಘಟನೆ’ ಮತ್ತು ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷಗಳಿಂದ ಕಾಂಗ್ರೆಸ್ ಸ್ಪರ್ಧೆ ಎದುರಿಸಬೇಕಿದೆ.  

ವಿಬಿಎ–ಎಐಎಂಐಎಂ ಮೈತ್ರಿಯ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 9 ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ದಶಕಗಳ ಕಾಲ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿದ್ದ ಪಕ್ಷ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)