ವಸುಂಧರಾ ರಾಜೆ ‘ಗೌರವ ಯಾತ್ರೆ’ ನಿಷೇಧಿಸಲು ಕಾಂಗ್ರೆಸ್ ಒತ್ತಾಯ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆಯವರು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಗೌರವ ಯಾತ್ರೆಯನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಯಾತ್ರೆಗಾಗಿ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಕ್ಷದ ಕಾರ್ಯಕ್ರಮ ಸಿದ್ಧತೆಗೆ ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯೂಡಿ) ಟೆಂಡರ್ ಕರೆದು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ರಾಜಸ್ಥಾನದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಆರೋಪಿಸಿದ್ದಾರೆ.
ವಸುಂಧರಾ ರಾಜೆಯವರ ಕಾರ್ಯ ನ್ಯಾಯಾಂಗ ನಿಂದನೆಯಾಗಿದೆ. ಸಾರ್ವಜನಿಕರ ತೆರಿಗೆ ಹಣಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಗೌರವ ಸೂಚಿಸುತ್ತಿದೆ ಎಂಬುದು ಇವರ ಕಾರ್ಯದಿಂದ ತಿಳಿಯುತ್ತದೆ ಎಂದರು.
ಯಾತ್ರೆಯ ಸಿದ್ಧತೆಗಾಗಿ ಆ. 18 ರಂದು ಪಿಡಬ್ಲ್ಯೂಡಿ ಟೆಂಡರ್ ಕರೆದಿರುವುದನ್ನು ಗಮನಿಸಿದ ರಾಜಸ್ಥಾನ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದಾಖಲಿಸಿದೆ.
ರಾಜ್ಯ ಸರ್ಕಾರ ಆಡಳಿತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಯಾತ್ರೆಯನ್ನು ಕೈಗೊಂಡಿರುವುದು ಸರಿಯಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.ಜೊತೆಗೆ ಈ ರೀತಿಯ ಪಕ್ಷದ ಕಾರ್ಯಕ್ರಮಗಳಿಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಭಾಗಿಯಾಗದಂತೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಬೇಕೆಂದು ತಿಳಿಸಿದ್ದಾರೆ.
ರಾಜಸ್ಥಾನ ಹೈಕೋರ್ಟ್ ಬಿಜೆಪಿಯ ಗೌರವ ಯಾತ್ರೆಯ ಸಿದ್ಧತೆಗೆ ಮಾಡಿದ ಖರ್ಚು ವೆಚ್ಚದ ಪ್ರಮಾಣಪತ್ರವನ್ನು ನೀಡಬೇಕೆಂದು ಶನಿವಾರ ಆದೇಶಿಸಿದೆ.
ಆ. 21 ರಂದು ನ್ಯಾಯಾಲಯದ ವಿಚಾರಣೆಯಿದ್ದು ಯಾತ್ರೆಯ ದಾಖಲೆಗಳನ್ನು ನೀಡಬೇಕೆಂದು ಪಕ್ಷಕ್ಕೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.