ಗುರುವಾರ , ಸೆಪ್ಟೆಂಬರ್ 19, 2019
26 °C

ಗುಲಾಂ ನಬಿ ಆಜಾದ್‌ಗೆ ಜಮ್ಮು ಪ್ರವೇಶ ನಿರಾಕರಣೆ, ವಿಮಾನ ನಿಲ್ದಾಣದಿಂದಲೇ ವಾಪಸ್

Published:
Updated:

ಜಮ್ಮು: ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ ಅವರು ಜಮ್ಮುವಿಗೆ ಭೇಟಿ ನೀಡುವುದನ್ನು ಮಂಗಳವಾರ ತಡೆಯಾಗಲಿದೆ. ಜಮ್ಮು ವಿಮಾನ ನಿಲ್ದಾಣದಿಂದಲೇ ಅವರನ್ನು ವಾಪಸ್ ಕಳುಹಿಸಲಾಗಿದೆ.

‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಜಯಂತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಜಮ್ಮು–ಕಾಶ್ಮೀರವೂ ಸೇರಿದಂತೆ ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಜಾದ್ ಅವರು ಜಮ್ಮುವಿಗೆ ಬಂದಿದ್ದರು’ ಎಂದು ಪಕ್ಷದ ವಕ್ತಾರ ರಶೀದ್ ಚೌಧರಿ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀನಗರಕ್ಕೆ ಬಂದ ಗುಲಾಂ ನಬಿ ಆಜಾದ್‌ಗೆ ವಿಮಾನ ನಿಲ್ದಾಣದಲ್ಲಿ ತಡೆ

ಆಜಾದ್ ಅವರು ‘ವಿಸ್ತಾರ’ ವಿಮಾನದ ಮೂಲಕ ಮಧ್ಯಾಹ್ನ 2.45ಕ್ಕೆ ಜಮ್ಮು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ತಕ್ಷಣವೇ ಅವರನ್ನು ವಿಐಪಿ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಮ್ಮು ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂಬುದಾಗಿ ಆಜಾದ್ ಅವರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬಳಿಕ ಸಂಜೆ 4.30ಕ್ಕೆ ಗೋಏರ್ ವಿಮಾನದ ಮೂಲಕ ಅವರನ್ನು ದೆಹಲಿಗೆ ವಾಪಸ್ ಕಳುಹಿಸಲಾಯಿತು.

ಜಮ್ಮು–ಕಾಶ್ಮೀರ ವಿಶೇಷಾಧಿಕಾರ ರದ್ದತಿ ಬಳಿಕ ಆಜಾದ್ ಅವರಿಗೆ ರಾಜ್ಯ ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವುದು ಇದು ಎರಡನೇ ಬಾರಿಯಾಗಿದೆ. ಆಗಸ್ಟ್‌ 8ರಂದು ಶ್ರೀನಗರ ವಿಮಾನ ನಿಲ್ದಾಣದಿಂದಲೂ ಅವರನ್ನು ವಾಪಸ್ ಕಳುಹಿಸಲಾಗಿತ್ತು.

Post Comments (+)