ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ದಿನವನ್ನು ಕುಟುಂಬಕ್ಕೆ ಮೀಸಲಿಟ್ಟ ಕೆ.ಬಿ. ಕೋಳಿವಾಡ

ಬೆಂಗಲಿರೊಂದಿಗೆ ಉದಾಸಿ ಚರ್ಚೆ, ಮದುವೆಯಲ್ಲಿ ಮಾನೆ ಭಾಗಿ
Last Updated 14 ಮೇ 2018, 11:06 IST
ಅಕ್ಷರ ಗಾತ್ರ

ಹಾನಗಲ್: ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಮತದಾನ ಪೂರ್ಣಗೊಂಡ ಬಳಿಕ, ಭಾನುವಾರ ನಿರಾಳ ಭಾವದಲ್ಲಿದ್ದರು.

ಬಿಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಬೆಳಿಗ್ಗೆ ಹಾನಗಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಗೆಲುವಿನ ಲೆಕ್ಕಾಚಾರ ಹಾಕಿದರು. ವಿವಿಧ ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಳಿಕ ಕಾರ್ಯಕ್ರಮ ನಿಮಿತ್ತ ಬ್ಯಾಡಗಿಗೆ ಹೋಗಿ ಬಂದರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಉದಾಸಿ, ‘ಗೆಲುವಿನ ವಿಶ್ವಾಸವಿದೆ. ನಮ್ಮೆಲ್ಲರ ಶ್ರಮ ಫಲ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮದುವೆಯಲ್ಲಿ ಭಾಗಿ: ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಬೆಳಿಗ್ಗೆ ಬೆಳಗಾಲಪೇಟೆ ಗ್ರಾಮದಲ್ಲಿ ನಡೆದ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದರು. ನಂತರ ಗಿರಿಸಿನಕೊಪ್ಪದಲ್ಲಿರುವ ತಮ್ಮ ನಿವಾಸದಲ್ಲಿ ಇಡೀ ದಿನ ಕಾಲ ಕಳೆದರು.

ಈ ಮಧ್ಯೆ ಸ್ಥಳೀಯ ಹಾಗೂ ಹಾನಗಲ್‌ನ ಕಾಂಗ್ರೆಸ್ ಮುಖಂಡರ ಭೇಟಿ ನಿರಂತರವಾಗಿತ್ತು. ಅವರೊಂದಿಗೆ ಗೆಲುವಿನ ಲೆಕ್ಕಾಚಾರದ ಬಗ್ಗೆ ಮಾನೆ ಚರ್ಚಿಸಿದರು.

‘ಹಾನಗಲ್‌ ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷದ ನೆಲೆ. ಕ್ಷೇತ್ರದಲ್ಲಿ ಉತ್ತಮವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದೇವೆ. ಹೀಗಾಗಿ ಗೆಲ್ಲುವ ವಿಶ್ವಾಸ ಇದೆ’ ಎಂದು ಮಾನೆ ಹೇಳಿದರು.

ರಾಣೆಬೆನ್ನೂರು: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಅವರು ಭಾನುವಾರ ಇಡೀ ದಿನವನ್ನು ಕುಟುಂಬ ಸದಸ್ಯರೊಂದಿಗೆ ಕಳೆದರು.

ಪುತ್ರ ಪ್ರಕಾಶ ಕೋಳಿವಾಡ, ಸೊಸೆ ಪೂರ್ಣಿಮಾ ಹಾಗೂ ಹೆಣ್ಣು ಮಕ್ಕಳಾದ ಪ್ರತಿಭಾ ಶರತ್‌ಚಂದ್ರ, ಸುನೀತಾ ವೆಂಕಟೇಶ, ಸ್ವಪ್ನಾ ಡಾ. ಶಿವಾನಂದ, ಸುಷ್ಮಾ, ಅಳಿಯಂದಿರು ಹಾಗೂ ಮೊಮ್ಮಕ್ಕಳಿಂದ ಇಡೀ ಮನೆ ತುಂಬಿತ್ತು. ಕೋಳಿವಾಡ ಅವರು ಎಲ್ಲರೊಟ್ಟಿಗೆ ಉಪಾಹಾರ, ಚಹಾ ಹಾಗೂ ಊಟ ಸೇವಿಸಿದರು.

ಅಂದಿನ ಪ್ರಮುಖ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಅವರು, ಮನೆಯವರೊಂದಿಗೆ ಕೆಲ ರಾಜಕೀಯ ವಿಷಯಗಳನ್ನು ಚರ್ಚಿಸಿದರು. ತಮ್ಮ ಕ್ಷೇತ್ರದ ಮತದಾನದ ವಿವರಗಳ ಜತೆಗೆ, ಕುತೂಹಲ ಇರುವ ಕ್ಷೇತ್ರಗಳ ಬಗ್ಗೆ ಮಾಹಿತಿ ಮಾಹಿತಿ ಕಲೆ ಹಾಕಿದರು.

ಮತ್ತೆ ಅಧಿಕಾರಕ್ಕೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಳಿವಾಡ, ‘ಐದು ವರ್ಷಗಳಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಯಾವುದೇ ಹಗರಣರಹಿತ ಜನಪರ ಆಡಳಿತ ನಡೆಸಿದ್ದೇವೆ. ಹಾಗಾಗಿ, ನೂರಕ್ಕೆ ನೂರಷ್ಟು ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘2013ರಲ್ಲಿ 122 ಸ್ಥಾನಗಳಲ್ಲಿ ಪಡೆದಿದ್ದ ಪಕ್ಷ ಸರ್ಕಾರ ರಚಿಸಿತ್ತು. ಈ ಬಾರಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ, ಮತ್ತೆ ಸರ್ಕಾರ ರಚನೆ ಮಾಡುತ್ತೇವೆ. ಯಾರ ಜತೆಗೂ ಮೈತ್ರಿ ಮಾಡಿಕೊಳ್ಳದೇ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸಲಿದ್ದೇವೆ’ ಎಂದು ಹೇಳಿದರು.

ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ನಗರದ ಘಟಕದ ಮಹಿಳಾ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷೆ ಚಂದ್ರಕಲಾ ಬಿಷ್ಟಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT