ಪರಿಹಾರ ನಿಧಿಗೆ ಕಾಂಗ್ರೆಸ್‌ ಶಾಸಕರು, ಸಂಸದರ ಸಂಬಳ

7
ಕೇರಳ, ಕೊಡಗು ಪ್ರವಾಹ ಪರಿಹಾರ ನಿಧಿಗೆ

ಪರಿಹಾರ ನಿಧಿಗೆ ಕಾಂಗ್ರೆಸ್‌ ಶಾಸಕರು, ಸಂಸದರ ಸಂಬಳ

Published:
Updated:

ನವದೆಹಲಿ: ದೇಶದಾದ್ಯಂತ ಇರುವ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರ ಒಂದು ತಿಂಗಳ ಸಂಬಳವನ್ನು ಕೇರಳದ ವಿವಿಧ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ತಲೆದೋರಿರುವ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ ದೇಣಿಗೆ ನೀಡಲು ಎಐಸಿಸಿ ನಿರ್ಧರಿಸಿದೆ.

ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸುದ್ದಿಗಾರರಿಗೆ ತಿಳಿಸಿದರು.

ಕೇರಳ ಮತ್ತು ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಪಕ್ಷದಿಂದ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ನೆರವು ನೀಡುವಂತೆ ಪಕ್ಷದ ಎಲ್ಲ ಜನಪ್ರತಿನಿಧಿಗಳಿಗೆ ಸೂಚಿಸಲಾಗಿದೆ. ಈ ಪ್ರವಾಹ ಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಕೇಂದ್ರ ಸರ್ಕಾರ ಕೂಡಲೇ ಘೋಷಿಸಬೇಕು ಎಂದು ರಾಹುಲ್ ಗಾಂಧಿ ಅವರು ಪಕ್ಷದ ವತಿಯಿಂದ ಆಗ್ರಹಿಸಿದ್ದಾರೆ ಎಂದು ಅವರು ಹೇಳಿದರು.

ರಾಜ್ಯಸಭೆ ಸದಸ್ಯ, ಕರ್ನಾಟಕದ ಕೆ.ಸಿ.ರಾಮಮೂರ್ತಿ ಅವರ ನೇತೃತ್ವದಲ್ಲಿ ಪರಿಹಾರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಮಳೆಯಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಸಂತ್ರಸ್ತರ ಸ್ಥಿತಿಗತಿ ಅಧ್ಯಯನ ಮಾಡಿ, ನೆರವು ನೀಡಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ವಿರೋಧಿಸಿ ದೇಶದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದಲೇ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಗರಣದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಅಂದಾಜು ₹ 40,000 ಕೋಟಿ ನಷ್ಟ ಉಂಟಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.

ಸಂಪುಟ ವಿಸ್ತರಣೆ ವಿಳಂಬ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಕೊಡಗು ಪ್ರವಾಹ ಸ್ಥಿತಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿದೇಶ ಪ್ರವಾಸದ ಕಾರಣ ಸಚಿವ ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕಲಾಗಿದೆ. ಬಹುಶಃ ಸೆಪ್ಟೆಂಬರ್‌ ಅಂತ್ಯಕ್ಕೆ ಸಂಪುಟ ವಿಸ್ತರಣೆ ಆಗಲಿದ್ದು, ನಿಗಮ, ಮಂಡಳಿಗಳಿಗೂ ನೇಮಕ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !