ಶುಕ್ರವಾರ, ಫೆಬ್ರವರಿ 21, 2020
21 °C

Analysis | ದೆಹಲಿಯಲ್ಲಿ ಸೊನ್ನೆಯಿಂದ ಸೊನ್ನೆಯತ್ತ ಕಾಂಗ್ರೆಸ್‌ ಪಯಣ

ಸಾಗರ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

ನವದೆಹಲಿ: ಮಂಗಳವಾರ ಬೆಳಿಗ್ಗೆ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್‌ ವಕ್ತಾರ ಮುಕೇಶ್‌ ಶರ್ಮಾ ಸೋಲೊಪ್ಪಿಕೊಂಡರು. ಶರ್ಮಾ ಅವರ ಹೇಳಿಕೆಯು ವಿಕಾಸ್‌ಪುರಿ ಕ್ಷೇತ್ರದಲ್ಲಿ ಅವರ ಸ್ಪರ್ಧೆಗೆ ಸೀಮಿತವಾಗಿತ್ತು. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿಗೆ ಈ ಸೋಲೊಪ್ಪಿಗೆ ರೂಪಕದಂತಿತ್ತು. 

2013ರಲ್ಲಿ ದೆಹಲಿಯ ಅಧಿಕಾರದಿಂದ ಉಚ್ಚಾಟನೆಗೊಂಡ ಬಳಿಕ ಕಾಂಗ್ರೆಸ್‌ ಪಕ್ಷವು ಅವನತಿಯತ್ತಲೇ ಸಾಗುತ್ತಿದೆ. ಮೂರು ಪೂರ್ಣಾವಧಿಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರಿಗೆ 2013ರ ಆ ಚುನಾವಣೆಯಲ್ಲಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಸೋಲುಣಿಸಿದ್ದರು. 

ಆ ಸಂದರ್ಭದಲ್ಲಿ, ಊಹಿಸಲು ಸಾಧ್ಯವಿಲ್ಲದ ನಿರ್ಧಾರವನ್ನು ಕಾಂಗ್ರೆಸ್‌ ತೆಗೆದುಕೊಂಡಿತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕಾಗಿ ಎಎಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿತು. ತನ್ನ ಪ್ರತಿಸ್ಪರ್ಧಿಗೆ ಬೆಂಬಲ ನೀಡುವ ಮೂಲಕ ದೆಹಲಿಯ ರಾಜಕಾರಣದಿಂದ ಪಕ್ಷವು ಇನ್ನಷ್ಟು ದೂರ ಸರಿಯಿತು. 2015ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಇದರ ಪರಿಣಾಮ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿತು. 70 ಕ್ಷೇತ್ರಗಳ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 67 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತು. 

2015ರಿಂದ 2020ರವರೆಗೆ, ಸೊನ್ನೆಯಿಂದ ಸೊನ್ನೆಯತ್ತ ಸಾಗುವುದೇ ಕಾಂಗ್ರೆಸ್‌ನ ರಾಜಕೀಯ ಪಯಣ. ಈ ಬಾರಿ, 66 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿದ್ದರು. ಅವರಲ್ಲಿ 63 ಮಂದಿ ಠೇವಣಿ ಕಳೆದುಕೊಂಡ ದುಃಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆ. 

ರಾಷ್ಟ್ರ ಮಟ್ಟದಲ್ಲಿ ತನ್ನ ಎದುರಾಳಿಯಾಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದು ಕಾಂಗ್ರೆಸ್‌ನ ಉದ್ದೇಶವಾಗಿತ್ತು. ಹಾಗಾಗಿ, ಈ ಬಾರಿ ದೆಹಲಿಯಲ್ಲಿನ ಸೋಲು ಉದ್ದೇಶಪೂರ್ವಕ ಎಂದು ಕಾಂಗ್ರೆಸ್‌ನ ಸೊನ್ನೆ ಸಾಧನೆಯನ್ನು ಬಣ್ಣಿಸುವ ಯತ್ನ ನಡೆಯುತ್ತಿದೆ. ತಾನು ತಲುಪಿರುವ ದಯನೀಯ ಸ್ಥಿತಿಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ ಎಂಬುದನ್ನಷ್ಟೇ ಇದು ಸೂಚಿಸುತ್ತದೆ. 

2013ರ ಸೋಲಿನ ಬಳಿಕ, ಶೀಲಾ ದೀಕ್ಷಿತ್‌ ಅವರು ನೇಪಥ್ಯಕ್ಕೆ ಸರಿದರು. ಅವರಷ್ಟು ವರ್ಚಸ್ಸಿನ ಬೇರೊಬ್ಬ ನಾಯಕನನ್ನು ರೂಪಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಶೀಲಾ ಅವರಿಗೆ ಸಮರ್ಥ ಉತ್ತರಾಧಿಕಾರಿ ಎಂದು ತಮ್ಮನ್ನು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದ ಅಜಯ್‌ ಮಾಕೆನ್‌ ಅವರು ಚುನಾವಣೆ ಹೊಸ್ತಿಲಲ್ಲಿ ವಿದೇಶಕ್ಕೆ ಹಾರಿಬಿಟ್ಟರು. 

ಹಿರಿಯ ಮುಖಂಡರಾದ ಶೋಯಬ್‌ ಇಕ್ಬಾಲ್‌, ಪ್ರಹ್ಲಾದ್‌ ಸಾಹ್ನಿ ಮತ್ತು ಮಹಾಬಲ ಮಿಶ್ರಾ ಮುಂತಾದವರು ಎಎಪಿ ವಿರುದ್ಧ ಹೋರಾಡುವ ಛಲವನ್ನೇ ತೋರಲಿಲ್ಲ. ಪಕ್ಷದಲ್ಲಿನ ಒಳಜಗಳ ಪರಾಕಾಷ್ಠೆ ತಲುಪಿತ್ತು. ಕಾಂಗ್ರೆಸ್‌ ಪಕ್ಷವು ಎಎಪಿಯ ಪ್ರತಿಸ್ಪರ್ಧಿ ಎಂದು ಯಾರೂ ಭಾವಿಸಲೇ ಇಲ್ಲ. ಹಾಗಾಗಿಯೇ ಕಾಂಗ್ರೆಸ್‌ ಪಡೆದ ಮತ ಪ್ರಮಾಣ ಶೇ 5ರಷ್ಟನ್ನೂ ತಲುಪಲಿಲ್ಲ. 

ಈ ಬಾರಿಯ ಚುನಾವಣೆಯಲ್ಲಿ ಹೊಸ ಚಿಂತನೆಗಳನ್ನು ಜನರ ಮುಂದೆ ಇರಿಸುವುದಕ್ಕೂ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ದೆಹಲಿಯನ್ನು ‘ಆಧುನಿಕ ರಾಜಧಾನಿ’ಯಾಗಿ ಪರಿವರ್ತಿಸಿದ ಶೀಲಾ ಅವರ 15 ವರ್ಷಗಳ ಆಳ್ವಿಕೆಯನ್ನು ದೆಹಲಿಯ ಮತದಾರರಿಗೆ ನೆನಪಿಸುವ ಕೆಲಸವನ್ನಷ್ಟೇ ಪಕ್ಷವು ಮಾಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು