ಮೋದಿ ತವರಿನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ

7

ಮೋದಿ ತವರಿನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲೇ 2019ರ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳಿಗೆ ಚಾಲನೆ ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಈ ತಿಂಗಳ ಒಳಗೇ ಗುಜರಾತ್‌ನಲ್ಲಿ ಪಕ್ಷದ ಕಾರ್ಯಕಾರಿಣಿಯನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಇದೇ ಗುರುವಾರ ರಾಜ್ಯದ ವಲ್ಸಾದ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರು ರ‍್ಯಾಲಿಯನ್ನು ನಡೆಸಲಿದ್ದಾರೆ. ಅಂದೇ ಕಾರ್ಯಕಾರಿಣಿ ಸಭೆಯೂ ನಡೆಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ನಂತರ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆ ಇದು. ನರೇಂದ್ರ ಮೋದಿಯನ್ನು ಅವರ ತವರಿನಲ್ಲೇ ಎದುರಿಸುತ್ತೇವೆ ಎಂಬ ಸಂದೇಶವನ್ನು ಈ ಸಭೆಯ ಮೂಲಕ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ರಾಹುಲ್ ಗಾಂಧಿ ಅವರ ‘ಕನಿಷ್ಠ ವೇತನ’ ಭರವಸೆಯ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೆ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಿಯಾಂಕ ಸ್ವಾಗತಕ್ಕೆ ಭಾರಿ ಸಿದ್ಧತೆ

ಲಖನೌ (ಪಿಟಿಐ): ಉತ್ತರಪ್ರದೇಶದಲ್ಲಿ ‘ಇದು ಬದಲಾವಣೆಯ ಪರ್ವ’ ಎಂಬ ಘೋಷಣೆ ಅಡಿ 2019ರ ಲೋಕಸಭಾ ಚುನಾವಣೆಯ ಕಣಕ್ಕೆ ಕಾಂಗ್ರೆಸ್ ಇಳಿಯುತ್ತಿದೆ. 

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿ ನೇಮಕವಾದ ನಂತರ ಇದೇ ಮೊದಲ ಭಾರಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸ್ವಾಗತಕ್ಕೆ ಪಕ್ಷದ ರಾಜ್ಯ ಘಟಕವು ಭಾರಿ ಸಿದ್ಧತೆ ನಡೆಸಿದೆ.

ಉತ್ತರಪ್ರದೇಶದ ಪಶ್ಚಿಮ ಭಾಗದ ಉಸ್ತುವಾರಿಯಾಗಿ ನೇಮಕವಾದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಹ ಸೋಮವಾರ ಪ್ರಿಯಾಂಕ ಜತೆ ಲಖನೌಗೆ ಭೇಟಿ ನೀಡಲಿದ್ದಾರೆ.

‘ಈ ಮೂವರು ಯುವನಾಯಕರ ತಂಡವು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಇದರಿಂದ ಉತ್ತರಪ್ರದೇಶದ ರಾಜಕಾರಣದಲ್ಲಿ ಹೊಸ ಶಕೆಯ ಆರಂಭಕ್ಕೆ ಕಾರಣವಾಗಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದ್ದಾರೆ. 

ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯಲಿರುವ ಮೂವರು ನಾಯಕರೂ, ನೇರವಾಗಿ ಹಜರತ್‌ಗಂಜ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ಪಟೇಲರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಆನಂತರ ಪಕ್ಷದ ಕಚೇರಿಯತ್ತ ತೆರಳಲಿದ್ದಾರೆ. ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಗೆ ಅವರು ತೆರಳಿರುವ ಮಾರ್ಗದಲ್ಲಿ 37 ಕಡೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ.

ವಾಕ್‌ ಚಾತುರ್ಯ

ಮೋದಿಯೇ ಮತ್ತೆ ಪ್ರಧಾನಿ ಅಭ್ಯರ್ಥಿ

ನರೇಂದ್ರ ಮೋದಿಯ ನಾಯಕತ್ವ ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ. ಜನರಿಗೆ ಮೋದಿಯನ್ನು ಬಿಟ್ಟರೆ ಬೇರೆ ಯಾವ ನಾಯಕರ ಮೇಲೂ ನಂಬಿಕೆ ಇಲ್ಲ. ಮುಂದಿನ ಚುನಾವಣೆಯಲ್ಲಿ ನಮಗೆ ಬಹುಮತ ಬರುವುದಿಲ್ಲ ಎಂದಿದ್ದರೂ ಮೋದಿಯೇ ಎನ್‌ಡಿಎಯ ಪ್ರಧಾನಿ ಅಭ್ಯರ್ಥಿ. ಆದರೆ ಪರಿಸ್ಥಿತಿ ಹಾಗೆ ಇಲ್ಲ. ಈ ಬಾರಿ ಬಿಜೆಪಿಯೇ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ

ಕೇಶವ್ ಪ್ರಸಾದ್ ಮೌರ್ಯ, ಉತ್ತರಪ್ರದೇಶ ಉಪಮುಖ್ಯಮಂತ್ರಿ

***

ನೈತಿಕ ದಿವಾಳಿತನ

‘ಓಲಾ/ಉಬರ್ 20 ಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ನೀತಿ ಆಯೋಗ ಹೇಳಿರುವುದು ಸುಳ್ಳು. ನಾನು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಉಬರ್‌ನಲ್ಲಿ ಚಾಲಕನಾಗಿದ್ದೇನೆ’ ಎಂದು ಚಾಲಕನೊಬ್ಬ ಹೇಳಿಕೆ ನೀಡಿದ್ದಾನೆ. ಅದಕ್ಷತೆಯ ಜತೆಗೆ ಸೊಕ್ಕು ತುಂಬಿರುವ ಈ ಸರ್ಕಾರ ನೈತಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಜನಸಾಮಾನ್ಯರ ಈ ಹೇಳಿಕೆ ಸಾಬೀತು ಮಾಡಿದೆ

ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

***

ರಾಹುಲ್ ಫೇಲ್‌ ವಿದ್ಯಾರ್ಥಿ

ರಫೇಲ್‌ ಸಂಬಂಧ ರಾಹುಲ್ ಸಂಸತ್ತಿನಲ್ಲಿ ಮಾಡಿದ ಎರಡು ಭಾಷಣಗಳನ್ನು ಅವಲೋಕಿಸಿದ್ದೇನೆ. ಪ್ರಧಾನಿ ಮೋದಿ ಮೇಲೆ ರಾಹುಲ್‌ಗೆ ಇರುವ ವೈಯಕ್ತಿಕ ದ್ವೇಷವನ್ನು ಆ ಭಾಷಣಗಳು ಬಿಂಬಿಸುತ್ತಿದ್ದವು. ಫೇಲ್‌ ಆಗಿರುವ ವಿದ್ಯಾರ್ಥಿ, ತರಗತಿಯ ಪ್ರಥಮ ರ‍್ಯಾಂಕ್ ವಿದ್ಯಾರ್ಥಿಯನ್ನು ದ್ವೇಷಿಸುವುದು ಮಾಮೂಲು. ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಮಾಡಿದ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ. ಭಾರತದ ಸಂಸತ್ತನ್ನು ಜವಾಹರ ಲಾಲ್ ನೆಹರೂ ಅವರ ಮರಿಮೊಮ್ಮಗ (ರಾಹುಲ್ ಗಾಂಧಿ) ಹಾಳು ಮಾಡಿದಷ್ಟು, ಮತ್ಯಾರೂ ಹಾಳು ಮಾಡಿಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ

ಅರುಣ್ ಜೇಟ್ಲಿ, ಕೇಂದ್ರ ಸಚಿವ

***

ಡಿಎಂಕೆಗೆ ಬೈದರೆ ಬಿಜೆಪಿಗೆ ನೆರವು

ದ್ರಾವಿಡ ಸಿದ್ಧಾಂತದ ಅಡಿ ರಾಜಕೀಯ ಪ್ರವೇಶಿಸಿರುವ ಕಮಲ್ ಹಾಸನ್ ಅವರು ಡಿಎಂಕೆಯನ್ನು ಟೀಕಿಸುತ್ತಿದ್ದಾರೆ. ಇಂತಹ ಬೈಗುಳ/ಟೀಕೆಯಿಂದ ಕಮಲ್ ಅವರ ಸಿದ್ಧಾಂತಕ್ಕೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಈ ಟೀಕೆ ಬಿಜೆಪಿ ವಿರುದ್ಧದ ಮತಗಳನ್ನು ಒಡೆಯುತ್ತದೆ. ಅಂತಿಮವಾಗಿ ಬಿಜೆಪಿಗೆ ನೆರವಾಗುತ್ತದೆ ಅಷ್ಟೆ

ಕೆ.ಎಸ್‌.ಅಳಗಿರಿ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ

***

ರಾಹುಲ್–ಪ್ರಿಯಾಂಕಾ ‘ಗೇಮ್‌ ಚೇಂಜರ್’

ರಾಹುಲ್ ಗಾಂಧಿ–ಪ್ರಿಯಾಂಕಾ ಗಾಂಧಿ ಜೋಡಿಯು ‘ಗೇಮ್‌ ಚೇಂಜರ್’ ಆಗಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರಿವರ್ತನೆಗೆ ಕಾರಣವಾಗಲಿದೆ. ಈ ಇಬ್ಬರ ಜತೆಗೆ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವ್ರಾ ಅವರಂತಹ ಯುವಕರ ತಂಡವು ಪಕ್ಷಕ್ಕೆ ನವಚೈತನ್ಯ ತಂದಿದೆ. ದೇಶವನ್ನು ಹೊಸ ಭವಿಷ್ಯದತ್ತ ಕೊಂಡೊಯ್ಯುವ ಸಾಮರ್ಥ್ಯ ಈ ಯುವತಂಡಕ್ಕಿದೆ

ಸ್ಯಾಮ್ ಪಿತ್ರೊಡಾ, ಇಂಡಿಯನ್ ಓವರ್‌ಸೀಸ್ 
ಕಾಂಗ್ರೆಸ್ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !