ರಫೇಲ್‌: ಮತ್ತೆ ಸಿಎಜಿ ಭೇಟಿಯಾದ ಕಾಂಗ್ರೆಸ್‌ ನಿಯೋಗ

7

ರಫೇಲ್‌: ಮತ್ತೆ ಸಿಎಜಿ ಭೇಟಿಯಾದ ಕಾಂಗ್ರೆಸ್‌ ನಿಯೋಗ

Published:
Updated:

ನವದೆಹಲಿ (‍ಪಿಟಿಐ): ₹60,150 ಕೋಟಿ ವೆಚ್ಚದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಸಮಗ್ರ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಮಹಾಲೇಖಪಾಲರನ್ನು (ಸಿಎಜಿ) ಕಾಂಗ್ರೆಸ್‌ ಪಕ್ಷ ಒತ್ತಾಯಿಸಿದೆ. ಎಲ್ಲ ‘ಸತ್ಯಗಳನ್ನು’ ಹೊರಗೆ ತಂದು ಸಂಸತ್ತಿನ ಮುಂದೆ ಇರಿಸಿದರೆ ಹಗರಣದ ಹೊಣೆಗಾರಿಕೆ ನಿರ್ಧರಿಸುವುದು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. 

ಕಾಂಗ್ರೆಸ್‌ ಪಕ್ಷದ ನಿಯೋಗವು ಕೆಲವೇ ದಿನಗಳ ಅಂತರದಲ್ಲಿ ಎರಡನೇ ಬಾರಿ ಸಿಎಜಿ ಅವರನ್ನು ಭೇಟಿ ಮಾಡಿದೆ. ಹಗರಣಕ್ಕೆ ಸಂಬಂಧಿಸಿ ಹೊಸ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ನಿಯೋಗವು ಹೇಳಿದೆ. 

ಕಾಂಗ್ರೆಸ್‌ ನಿಯೋಗವು ಸೆ.19ರಂದು ಸಿಎಜಿ ಅವರನ್ನು ಮತ್ತು ಸೆ. 24ರಂದು ಜಾಗೃತ ಆಯುಕ್ತರನ್ನು ಭೇಟಿ ಮಾಡಿ ರಫೇಲ್‌ ಹಗರಣದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿತ್ತು. 

‘ಭಾರತದ ಅತ್ಯಂತ ದೊಡ್ಡ ರಕ್ಷಣಾ ಹಗರಣವಾಗಿ ರಫೇಲ್‌ ಹೊರಹೊಮ್ಮಿದೆ. ಪ್ರತಿ ದಿನವೂ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ರಕ್ಷಣಾ ಸಚಿವಾಲಯದಿಂದ ಯಾವುದೇ ಉತ್ತರ ಬರುತ್ತಿಲ್ಲ. ಈ ಸರ್ಕಾರದ ಬಗೆಗಿನ ಒಂದೇ ಸತ್ಯ ಏನೆಂದರೆ ನುಣುಚಿಕೊಳ್ಳುವಿಕೆ. ರಫೇಲ್‌ ಒಪ್ಪಂದದಲ್ಲಿನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದುರ್ವಾಸನೆ ವಾಕರಿಕೆ ತರುವಂತಿದೆ. ತಕ್ಷಣವೇ ತನಿಖೆ ಆಗಬೇಕಿದೆ’ ಎಂದು ಕಾಂಗ್ರೆಸ್‌ ಮನವಿ ಮಾಡಿದೆ. 

ಹಿರಿಯ ಮುಖಂಡರಾದ ಅಹ್ಮದ್‌ ಪಟೇಲ್‌, ಆನಂದ್‌ ಶರ್ಮಾ, ಜೈರಾಮ್‌ ರಮೇಶ್‌, ರಣದೀಪ್‌ ಸುರ್ಜೇವಾಲಾ ಮುಂತಾದವರು ನಿಯೋಗದಲ್ಲಿದ್ದರು. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !