ಗುರುವಾರ , ಫೆಬ್ರವರಿ 20, 2020
18 °C

ಕಾಂಗ್ರೆಸ್‌ ಕೇಂದ್ರ ಸಮಿತಿಗಳಲ್ಲಿ ಕಳೆಗುಂದಿತೇಕೆ ಮುಸ್ಲಿಂ ಪ್ರಾತಿನಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಈಗ ನಮ್ಮ ದೇಶದಲ್ಲಿ ರಾಜಕೀಯದ ಬಗ್ಗೆ ಏನು ಮಾತನಾಡಿದರೂ ಅದು ಮುಂಬರುವ ಲೋಕಸಭಾ ಚುನಾವಣೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಪ್ರಧಾನಿ ಗಾದಿಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಕೇಂದ್ರ ಸಮಿತಿಗಳಲ್ಲಿರುವವರ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಈಚೆಗಷ್ಟೇ ‘ದಿ ಪ್ರಿಂಟ್’ ಸುದ್ದಿತಾಣ ಬಿಜೆಪಿಯ ಪಕ್ಷದ ವಿವಿಧ ಉನ್ನತ ಸಮಿತಿಗಳಲ್ಲಿರುವವರ ಜಾತಿಯ ಹಿನ್ನೆಲೆ ವಿಶ್ಲೇಷಿಸಿ ವರದಿ ಪ್ರಕಟಿಸಿತ್ತು. ಇದೀಗ ‘ಲೈವ್‌ಮಿಂಟ್’ ದಿನಪತ್ರಿಕೆಯು ಕಾಂಗ್ರೆಸ್‌ ಪಕ್ಷದ ಉನ್ನತ ಸ್ಥಾನದಲ್ಲಿ ಕುಗ್ಗುತ್ತಿರುವ ಮುಸ್ಲಿಮರ ಪ್ರಾತಿನಿಧ್ಯದ ಕುರಿತು ವಿಶ್ಲೇಷಣೆ ಪ್ರಕಟಿಸಿ ಗಮನ ಸೆಳೆದಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷವು ಪ್ರಚಾರ ತಂತ್ರ ಮತ್ತು ಸಂಘಟನೆ ಬಲಪಡಿಸುವ ನಿರ್ಧಾರಗಳಲ್ಲಿ ಬಿಜೆಪಿಯ ಹೆಜ್ಜೆಜಾಡನ್ನೇ ಅನುಸರಿಸುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲಿದೆ. ಕಾಂಗ್ರೆಸ್‌ನ ನೀತಿ ನಿರೂಪಣಾ ಅಧಿಕಾರ ಹೊಂದಿರುವ ಕೇಂದ್ರ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ (ಎಐಸಿಸಿ) ಮುಸ್ಲಿಮರ ಪ್ರಾತಿನಿಧ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ.

‘ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ14ರಷ್ಟಿದ್ದಾರೆ. 2014ರ ಮೇ ತಿಂಗಳಲ್ಲಿ ಎಐಸಿಸಿಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ 88. ಇದರಲ್ಲಿ ಮುಸ್ಲಿಮರ ಪಾಲು ಶೇ12 ಇತ್ತು. ಆದರೆ 2018ರಲ್ಲಿ ಮುಸ್ಲಿಂ ಪ್ರಾತಿನಿಧ್ಯ ಶೇ8ಕ್ಕೆ ಕುಸಿದಿದೆ’ ಎಂದು ವರದಿ ಉಲ್ಲೇಖಿಸಿದೆ.

ಕಾಂಗ್ರೆಸ್‌ನಲ್ಲಿ ಕನಿಷ್ಠ ಮುಸ್ಲಿಂ ಪ್ರಾತಿನಿಧ್ಯ

ಪ್ರಸ್ತುತ ಸಿಡಬ್ಲ್ಯುಸಿ ಮತ್ತು ಎಐಸಿಸಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಸಿಡಬ್ಲ್ಯುಸಿಯ 45 ಸದಸ್ಯರ ಪೈಕಿ ಮೂವರು ಮಾತ್ರ ಮುಸ್ಲಿಮರು, ಎಐಸಿಸಿಯ 88 ಸದಸ್ಯರ ಪೈಕಿ ಏಳು ಮಂದಿ ಮಾತ್ರ ಮುಸ್ಲಿಮರು.

ಇನ್ನು ಬಿಜೆಪಿಯಲ್ಲಿ, ಅದರ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ (ಎನ್ಇ) ಕೇವಲ ಶೇ3ರಷ್ಟು ಹಿಂದೂಗಳಲ್ಲದವರಿದ್ದಾರೆ. ಸಂಸದೀಯ ಮಂಡಳಿಯ ಎಲ್ಲ ಸದಸ್ಯರು ಹಿಂದೂಗಳೇ ಆಗಿದ್ದಾರೆ. ಬಿಜೆಪಿ ತನ್ನ ಹಿಂದುತ್ವದ ಹೆಗ್ಗುರುತನ್ನು ಮರೆಮಾಚಲು ಯತ್ನಿಸುತ್ತಿಲ್ಲ. ಆದರೆ ಬಿಜೆಪಿಯಿಂದ ಪದೇಪದೇ ‘ಮುಸ್ಲಿಮರನ್ನು ಓಲೈಸುವ ಪಕ್ಷ’ ಎಂಬ ಟೀಕೆಗೆ ಗುರಿಯಾಗುವ ಕಾಂಗ್ರೆಸ್‌ನ ಅಧಿಕಾರ ಕೇಂದ್ರದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆಯಾಗಿರುವುದು ವಿಶೇಷ.

ಮಾರ್ಚ್‌ ತಿಂಗಳಿನಲ್ಲಿ ‘ಇಂಡಿಯಾ ಟುಡೆ‘ ವಾರಪತ್ರಿಕೆಯ ಸಂಪಾದಕ ಅರುಣ್ ಪುರಿ ಅವರಿಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ‘ನಮಗೆ ಬಿಜೆಪಿಯು ಮುಸ್ಲಿಮರ ಪಕ್ಷ ಎಂಬ ಹಣೆಪಟ್ಟಿ ಕಟ್ಟಿದೆ’ ಎಂದು ಸೋನಿಯಾ ಗಾಂಧಿ ಒಪ್ಪಿಕೊಂಡಿದ್ದರು. ‘ನಮ್ಮ ಪಕ್ಷದ ಬಹುತೇಕ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳೇ ಇದ್ದಾರೆ. ನಾನು ರಾಜೀವ್‌ ಗಾಂಧಿ ಜೊತೆಗೆ ಅನೇಕ ಬಾರಿ ದೇಗುಲಗಳಿಗೆ ಹೋಗಿದ್ದೇನೆ. ರಾಹುಲ್‌ಗಾಂಧಿ ಸಹ ದೇಗುಲಗಳಿಗೆ ಹೋಗುತ್ತಿದ್ದರು. ಈ ಮೊದಲು ನಮ್ಮಪಾಡಿಗೆ ನಾವು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆವು. ಅದರೆ ಬಿಜೆಪಿಯವರು ನಮ್ಮ ಬಗ್ಗೆ ವ್ಯಾಪಕ ಅಪಪ್ರಚಾರ ಮಾಡುತ್ತಿರುವುದರಿಂದ ಈಗ ನಮ್ಮ ದೇಗುಲ ಭೇಟಿಯನ್ನು ಸಾಕಷ್ಟು ಸುದ್ದಿಯಾಗುವಂತೆ ಎಚ್ಚರ ವಹಿಸುತ್ತೇವೆ’ ಎಂದು ಅಲವತ್ತುಕೊಂಡಿದ್ದರು.

ಎರಡೂ ಪಕ್ಷಗಳಲ್ಲೂ ಪುರುಷರದೇ ದರ್ಬಾರು

ಕಾಂಗ್ರೆಸ್‌ನ ಸಿಡಬ್ಲ್ಯುಸಿ, ಎಐಸಿಸಿ ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಸಂಸದೀಯ ಮಂಡಳಿಗಳ ಹತ್ತು ವರ್ಷಗಳ ಅಂಕಿಅಂಶಗಳನ್ನು ‘ಲೈವ್‌ಮಿಂಟ್’ ವಿಶ್ಲೇಷಿಸಿದೆ. ಈ ಸಂದರ್ಭ ಎರಡೂ ಪುರುಷ ಕೇಂದ್ರಿತವಾಗಿರುವುದು ಸಾಬೀತಾಗಿದೆ. ಎರಡೂ ಪಕ್ಷಗಳ ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರು ಇಲ್ಲ. ಪ್ರತಿ ವರ್ಷ ಮೇ ತಿಂಗಳಲ್ಲಿ ಇದ್ದಂತೆ 2017ರ ವರೆಗಿನ ಅಂಕಿ ಸಂಖ್ಯೆಗಳನ್ನು ವಿಶ್ಲೇಷಣೆಗೆ ಪರಿಗಣಿಸಲಾಗಿದೆ. 2018ರಲ್ಲಿ ಪಕ್ಷಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿನ ಇತ್ತೀಚಿನ ಅಂಕಿ ಅಂಶಗಳನ್ನು ಪರಿಗಣಿಸಲಾಗಿದೆ. ಎನ್‌ಇ ಮತ್ತು ಸಿಡಬ್ಲ್ಯುಸಿಗಳು ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎರಡು ಪ್ರಮುಖವಾದ ಅಂಗಗಳಾಗಿವೆ. ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯ ಬಲ 45. ಎನ್‌ಇ ಸದಸ್ಯ ಬಲ 186. ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ (ಎನ್‌ಇ) ಒಟ್ಟು 11 ಸದಸ್ಯರಿದ್ದಾರೆ. ಇದರಲ್ಲಿರುವ ಏಕೈಕ ಮಹಿಳೆ ಸುಷ್ಮಾ ಸ್ವರಾಜ್. ಅವರು 10 ವರ್ಷಗಳಿಂದ ಇದ್ದಾರೆ. 186 ಸದಸ್ಯ ಬಲದ ಎನ್‌ಇಯಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಬಿಜೆಪಿಯ ನಿಯಮಾನುಸಾರ ಎನ್‌ಇಯಲ್ಲಿ ಮೂರನೇ ಒಂದು ಭಾಗ ಮಹಿಳೆಯರಿರಬೇಕು.

ಕಾಂಗ್ರೆಸ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚೇನೂ ಉತ್ತಮವಾಗಿಲ್ಲ. ಕಳೆದ ಐದು ವರ್ಷಗಳಿಂದ ಸಿಡಬ್ಲ್ಯುಸಿ ಮತ್ತು ಎಐಸಿಸಿಯಲ್ಲಿ ಮಹಿಳೆಯರ ಪಾಲು ಶೇ 12ರಿಂದ 15ರ ವ್ಯಾಪ್ತಿಯಲ್ಲಿದೆ. ರಾಜ್ಯವಾರು ವಿಶ್ಲೇಷಣೆ ಪ್ರಕಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಕೆಲವು ದೊಡ್ಡ ರಾಜ್ಯಗಳ ನಾಯಕರು ಬಿಜೆಪಿಯ ಎನ್‌ಇ ಮತ್ತು ಕಾಂಗ್ರೆಸ್‌ನ ಸಿಡಬ್ಲ್ಯುಸಿಯಲ್ಲಿ ಸಿಂಹ ಪಾಲು ಹೊಂದಿವೆ. ಪಕ್ಷದ ಚುನಾಯಿತ ಶಾಸಕರನ್ನು (ಅಥವಾ ಮಾಜಿ ಶಾಸಕರು) ಮಾತ್ರ ರಾಜ್ಯವಾರು ಲೆಕ್ಕಹಾಕಲು ಪರಿಗಣಿಸಲಾಗಿದೆ. ರಾಜ್ಯವಾರು ವಿಶ್ಲೇಷಣೆಯಲ್ಲಿ ಶಾಸಕರಲ್ಲದ ಸದಸ್ಯರನ್ನು ಹೊರಗಿಡಲಾಗಿದೆ. ಪ್ರಸ್ತುತ ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಆಂಧ್ರಪ್ರದೇಶ, ಬಿಹಾರ, ಛತ್ತೀಸಗಡ, ಗೋವಾ, ಮೇಘಾಲಯ, ಮಿಜೋರಾಂ, ತೆಲಂಗಾಣ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಾತಿನಿಧ್ಯವೇ ಇಲ್ಲ.

‘ಎರಡೂ ಪಕ್ಷಗಳ ಎರಡೂ ಅಂಗಳಗಳ ವ್ಯತ್ಯಾಸದ ಕಾರಣದಿಂದಾಗಿ ಇದು ಎರಡರಲ್ಲೂ ಬದಲಾವಣೆ ಮತ್ತು ಮಹಾತ್ವಾಕಾಂಕ್ಷೆಗಳನ್ನು ಭಾಗಶಃ ಬಿಂಬಿಸುತ್ತವೆ. ವಾಯವ್ಯ ಭಾರತದಲ್ಲಿ ತನ್ನ ಸಾಂಪ್ರದಾಯಿಕ ಭದ್ರಕೋಟೆಯೊಂದಿಗೆ ಬೆಳೆದಿರುವ ಬಿಜೆಪಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಚಿತ್ತ ಹರಿಸಿದೆ. ಆದರೆ, ಕಾಂಗ್ರೆಸ್‌ ಮತ್ತೆ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿಯ ಎನ್‌ಇ ಸಂರಚನೆಯು ಮತ ಹಂಚಿಕೆಯನ್ನು ಸರಿದೂಗಿಸುತ್ತದೆ. ಆದರೆ, ಕಾಂಗ್ರೆಸ್‌ನ ಸಂದರ್ಭದಲ್ಲಿ ಈ ಅನುಪಾತ ದುರ್ಬಲವಾಗಿದೆ’ ಎಂದು ‘ಲೈವ್‌ಮಿಂಟ್’ ವಿಶ್ಲೇಷಿಸುತ್ತದೆ.

* ಕಾಂಗ್ರೆಸ್‌ನ ಹೊಸ ತಂತ್ರ

ಹರಿಯಾಣ, ಅಸ್ಸಾಂ, ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಕಾಂಗ್ರೆಸ್‌ನ ಸಿಡಬ್ಲ್ಯುಸಿಯಲ್ಲಿ ಅತಿ ಹೆಚ್ಚು ಪ್ರತಿನಿಧಿಸಲ್ಪಟ್ಟಿವೆ. ಇದರ ಅರ್ಥ 2019ರ ಲೋಕಸಭೆ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲ ಹೋರಾಟವ ಮಾಡಲಿದೆ. ಬಿಹಾರ ಮತ್ತು ಜಾರ್ಖಂಡ್‌ಗಳಂತ ರಾಜ್ಯಗಳು ಸಿಡಬ್ಲ್ಯುಸಿಯಲ್ಲಿ ಕಡಿಮೆ ಪ್ರತಿನಿಧಿತ್ವ ಹೊಂದಿವೆ. ಈ ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲು ಮುಂದಾಗಿರಬಹುದು. ಕೇಂದ್ರ ಕಾರ್ಯಕಾರಿ ಸಮಿತಿಯ ಈ ಬೆಳವಣಿಗೆಯು ಎಂಥ ಪ್ರತಿಫಲ ನೀಡಬಲ್ಲುದು ಎಂಬುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಉತ್ತರಿಸುತ್ತದೆ. 

‘ತಾನು ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳತ್ತ ಹೆಚ್ಚು ಗಮನ ನೀಡುವ ಮೂಲಕ ಇಚ್ಛಿತ ಫಲಿತಾಂಶ ಪಡೆದುಕೊಳ್ಳುವ ಬಿಜೆಪಿಯ ಕಾರ್ಯತಂತ್ರವನ್ನೇ ಇದೀಗ ಕಾಂಗ್ರೆಸ್ ಸಹ ಅನುಸರಿಸಲು ಮುಂದಾಗಿರಬಹುದು. 2019ರ ಚುನಾವಣೆಯ ತೀರ್ಪು ಭಾರತದ ಅತಿ ದೊಡ್ಡ, ಹಳೆಯ ಪಕ್ಷದಲ್ಲಾದ ಬದಲಾವಣೆಗಳ ಪರಿಣಾಮಗಳನ್ನು ತಿಳಿಸಲಿದೆ’ ಎಂದು ‘ವೈಲ್‌ಮಿಂಟ್’ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು