ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಾಜಧಾನಿಯಲ್ಲಿ ‘ಶೀಲಾ’ ವರ್ಚಸ್ಸೇ ಕಾಂಗ್ರೆಸ್‌ಗೆ ರಕ್ಷೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದು ಹೋದ ಅಸ್ತಿತ್ವದ ಮರು ಸ್ಥಾಪನೆಗೆ ಹೋರಾಟ
Last Updated 9 ಮೇ 2019, 17:30 IST
ಅಕ್ಷರ ಗಾತ್ರ

ನವದೆಹಲಿ: ಐದು ವರ್ಷಗಳ ಹಿಂದೆ ದೇಶದ ರಾಜಧಾನಿಯಿಂದ ಮೂಲೋತ್ಪಾಟನೆಗೊಂಡು, ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ ಈ ಲೋಕಸಭಾ ಚುನಾವಣೆಯು ಆಶಾಭಾವನೆ ಮೂಡಿಸಿದೆ. 15 ವರ್ಷ ದೆಹಲಿಯಲ್ಲಿ ಅಧಿಕಾರ ನಡೆಸಿದ್ದ ಶೀಲಾ ದೀಕ್ಷಿತ್‌ ಅವರನ್ನು ಪುನಃ ಹೋರಾಟದ ಮುಂಚೂಣಿಯಲ್ಲಿ ನಿಲ್ಲಿಸಿರುವ ಕಾಂಗ್ರೆಸ್‌, ಈ ಬಾರಿ ಸಮಬಲದ ಹೋರಾಟ ನಡೆಸುವ ಹುಮ್ಮಸ್ಸಿನಲ್ಲಿದೆ.

ದೆಹಲಿಯ ಬಿಜೆಪಿ ನಾಯಕರು ನರೇಂದ್ರ ಮೋದಿ ಹೆಸರನ್ನು ಜಪಿಸುತ್ತಲೇ ಜನರ ಮುಂದೆ ಹೋಗುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಶೀಲಾ ದೀಕ್ಷಿತ್‌ ಅವರ 15 ವರ್ಷಗಳ ಆಡಳಿತವನ್ನು ಜನರಿಗೆ ನೆನಪಿಸಿಕೊಡುವ ಮತ್ತು ಅದನ್ನು ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರದ ಆಡಳಿತಕ್ಕೆ ಹೋಲಿಸುವ ಕೆಲಸ ಮಾಡುತ್ತಿದೆ.

81ನೇ ವಯಸ್ಸಿನಲ್ಲಿ ದೆಹಲಿ ಈಶಾನ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಶೀಲಾ ದೀಕ್ಷಿತ್‌ ಒಮ್ಮೆಲೇ ರಾಷ್ಟ್ರದ ಗಮನ ಸೆಳೆದಿದ್ದಾರೆ. ಅವರು ಮತ್ತು ಅವರ ಬೆಂಬಲಿಗರಿಗೆ ಇದು ಮಾಡು ಇಲ್ಲವೇ ಮಡಿ ಎಂಬಂಥ ಹೋರಾಟ. ದೆಹಲಿಯಲ್ಲಿ ಈ ಬಾರಿ ಎಎಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಇಂಗಿತವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತ್ತು. ಆದರೆ ಈ ಮೈತ್ರಿ ಕಾರ್ಯರೂಪಕ್ಕೆ ಬರಬಾರದು ಎಂದು ಶೀಲಾ ದೀಕ್ಷಿತ್‌ ಎಲ್ಲ ರೀತಿಯ ಪ್ರಯತ್ನ ಮಾಡಿ, ಯಶಸ್ವಿಯೂ ಆದರು.

ದೆಹಲಿಯಲ್ಲಿ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿರುವ ಪಿ.ಸಿ. ಚಾಕೊ ಅವರೂ ದೀಕ್ಷಿತ್‌ ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಚಾಕೊ, ‘ನೀವು ನೋಡುತ್ತಿರುವ ಇಂದಿನ ದೆಹಲಿಯು ಕಾಂಗ್ರೆಸ್‌ ಆಡಳಿತದಲ್ಲಿ ನಿರ್ಮಾಣವಾದದ್ದು. ಇದರ ಶ್ರೇಯಸ್ಸು ಶೀಲಾ ಅವರಿಗೆ ಸಲ್ಲುತ್ತದೆ. ಅವರು ಸುಭದ್ರ ಸರ್ಕಾರ ಕೊಟ್ಟಿದ್ದರು. ಆದರೆ ಈಗ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್‌ ಪ್ರತಿನಿತ್ಯವೂ ಮೋದಿ ಜೊತೆ ಜಗಳಕ್ಕಿಳಿಯುತ್ತಾರೆ. ಲೆಫ್ಟಿನೆಂಟ್‌ ಗವರ್ನರ್‌ ಮನೆ ಮುಂದೆ ಧರಣಿ ಕೂರುತ್ತಾರೆ. ಆಡಳಿತ ನಡೆಸಲು ಅವರಿಗೆ ಸಮಯವೇ ಸಿಗುವುದಿಲ್ಲ’ ಎಂದರು.

2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್‌ನ ಮತ ಪ್ರಮಾಣ ಶೇ 10ಕ್ಕೆ ಕುಸಿದಿತ್ತು. ನಂತರ ನಡೆದ ನಗರ ಪಾಲಿಕೆಯ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮತಗಳಿಕೆಯ ಪ್ರಮಾಣ ಶೇ 22ಕ್ಕೆ ಏರಿಕೆಯಾಗಿತ್ತು. ಜೊತೆಗೆ ಶೇ 54ರಷ್ಟಿದ್ದ ಎಎಪಿಯ ಮತಗಳಿಕೆ ಪ್ರಮಾಣ ನಗರಪಾಲಿಕೆ ಚುನಾವಣೆಯಲ್ಲಿ ಶೇ 26ಕ್ಕೆ ಇಳಿದಿತ್ತು. ಕಾಂಗ್ರೆಸ್‌ನಲ್ಲಿ ಮತ್ತೆ ಉತ್ಸಾಹ ಮೂಡಲು ಇದು ಕಾರಣವಾಯಿತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಂತೆ ಕಾಣಿಸುತ್ತಿಲ್ಲ. ಪಕ್ಷದ ಒಂದಿಬ್ಬರು ನಾಯಕರನ್ನು ಗೆಲ್ಲಿಸುವ ಮೂಲಕ ತಾನು ಎರಡನೇ ಸ್ಥಾನಕ್ಕೆ ಬಂದು, ಎಎಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವ ಗುರಿ ಇಟ್ಟುಕೊಂಡಿದೆ. ಇದು ಸಾಧ್ಯವಾದರೆ ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಸಾಧನೆ ಮಾಡಬಹುದೆಂಬ ಯೋಚನೆ ಕಾಂಗ್ರೆಸ್‌ನದ್ದು.

ಈ ಉದ್ದೇಶ ಈಡೇರಬೇಕಾದರೆ ದಲಿತರು, ಮುಸ್ಲಿಮರು ಹಾಗೂ ಬೀದಿಬದಿ ವ್ಯಾಪಾರಿಗಳ ಮನಸ್ಸು ಗೆಲ್ಲಬೇಕು. ಪ್ರಸಕ್ತ ಈ ಮೂರೂ ವರ್ಗದ ಜನರು ಎಎಪಿ ಜೊತೆಗಿರುವಂತೆ ಕಾಣಿಸುತ್ತಿದೆ. ವಿದ್ಯುತ್‌, ನೀರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಮೂಲಕ ಕೇಜ್ರಿವಾಲ್‌ ಈ ವರ್ಗದ ಜನರ ಮನಸ್ಸು ಗೆದ್ದಿದ್ದಾರೆ.

‘ಮೋದಿ ಸರ್ಕಾರ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಕೇಜ್ರಿವಾಲ್‌ ಭರವಸೆಗಳನ್ನಲ್ಲದೆ ಬೇರೇನನ್ನೂ ಕೊಟ್ಟಿಲ್ಲ. ಆದ್ದರಿಂದ ನಮಗೆ (ಕಾಂಗ್ರೆಸ್‌) ಈ ಬಾರಿ ಒಳ್ಳೆಯ ಅವಕಾಶ ಇದೆ’ ಎಂದು ಕಾಂಗ್ರೆಸ್‌ನ ದೆಹಲಿ ಘಟಕದ ಕಾರ್ಯಾಧ್ಯಕ್ಷ ಹಾಗೂ ದೆಹಲಿ ವಾಯವ್ಯ ಕ್ಷೇತ್ರದ ಅಭ್ಯರ್ಥಿ ರಾಜೇಶ್‌ ತಿಲೋಟಿಯ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT