ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತವರ ಸಂಖ್ಯೆ ತಿಳಿಯಲು ಪಾಕ್‌ಗೆ ಹೋಗಿ ಲೆಕ್ಕ ಹಾಕಿ

ಉಗ್ರರ ಮೇಲಿನ ವಾಯುದಾಳಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ರಾಜನಾಥ್‌
Last Updated 5 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಧುಬ್ರಿ (ಅಸ್ಸಾಂ) : ಪಾಕಿಸ್ತಾನದ ಬಾಲಾಕೋಟ್‌ನ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ತರಬೇತಿ ಶಿಬಿರದ ಮೇಲೆ ಭಾರತದ ವಾಯುಪಡೆ ನಡೆಸಿದ ದಾಳಿಯಲ್ಲಿ ಸತ್ತವರೆಷ್ಟು ಎಂಬ ರಾಜಕೀಯ ವಾಗ್ವಾದ ಮುಂದುವರಿದಿದೆ. ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂಬ ಮಾಹಿತಿ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ವಾಯು ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂಬುದು ತಿಳಿಯಲೇಕಿದ್ದರೆ ಕಾಂಗ್ರೆಸ್‌ನವರು ಪಾಕಿಸ್ತಾನಕ್ಕೆ ಹೋಗಿ ಲೆಕ್ಕ ಹಾಕಿ ಬರಲಿ ಎಂದು ಅವರು ಹರಿಹಾಯ್ದಿದ್ದಾರೆ.

ದಾಳಿಯ ಸತ್ಯಾಸತ್ಯತೆ ಪ್ರಶ್ನಿಸುವವರು ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ರಾಜಕೀಯಕ್ಕೆ ಬಳಸುವವರ ವಿರುದ್ಧ ರಾಜನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಯುದಾಳಿಯಲ್ಲಿ ಎಷ್ಟು ಜನರು ಸತ್ತರು ಎಂಬುದು ಒಂದಲ್ಲ ಒಂದು ದಿನ ಬಯಲಾಗಲಿದೆ ಎಂದು ಅವರು ಹೇಳಿದರು.

ಜೈಷ್‌ನ ತರಬೇತಿ ಶಿಬಿರ ಇರುವ ಸ್ಥಳದಲ್ಲಿ 300 ಮೊಬೈಲ್‌ಗಳು ‘ಸಕ್ರಿಯ’ವಾಗಿದ್ದವು ಎಂಬ ಮಾಹಿತಿಯನ್ನು ವಾಯುಪಡೆಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಘಟನೆ (ಎನ್‌ಟಿಆರ್‌ಒ) ನೀಡಿತ್ತು. ಅದರ ಬಳಿಕ ದಾಳಿ ನಡೆಸಲಾಗಿದೆ ಎಂದು ರಾಜನಾಥ್‌ ಹೇಳಿದ್ದಾರೆ.

‘ಈಗ, ಅಲ್ಲಿ ಎಷ್ಟು ಜನ ಸತ್ತರು ಎಂದು ನಾವು ಹೇಳಬೇಕಾಗಿಲ್ಲ. ಈ ಮೊಬೈಲ್‌ ಫೋನ್‌ಗಳನ್ನು ಜನರು ಬಳಸುತ್ತಿದ್ದರೇ ಅಥವಾ ಅಲ್ಲಿನ ಮರಗಳು ಬಳಸುತ್ತಿದ್ದವೇ? ಎನ್‌ಟಿಆರ್‌ಒ ನೀಡಿದ ಮಾಹಿತಿಯನ್ನೂ ನೀವು (ವಿರೋಧ ಪಕ್ಷಗಳು) ನಂಬುವುದಿಲ್ಲವೇ’ ಎಂದು ರಾಜನಾಥ್ ಪ್ರಶ್ನಿಸಿದ್ದಾರೆ.

‘ವಾಯುದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂದು ಕೆಲವು ರಾಜಕೀಯ ಪಕ್ಷಗಳ ನಾಯಕರು ಪ್ರಶ್ನಿಸುತ್ತಿದ್ದಾರೆ. ಎಷ್ಟು ಮಂದಿ ಸತ್ತರು ಎಂಬುದು ಒಂದಲ್ಲ ಒಂದು ದಿನ ತಿಳಿಯಲಿದೆ. ಎಷ್ಟು ಜನರು ಸತ್ತಿದ್ದಾರೆ ಎಂಬುದು ಪಾಕಿಸ್ತಾನದ ನಾಯಕರಿಗೆ ತಿಳಿದಿದೆ’ ಎಂದು ರಾಜನಾಥ್‌ ಹೇಳಿದ್ದಾರೆ.

‘ಎಷ್ಟು ಜನ ಸತ್ತರು? ಎಷ್ಟು ಜನ ಸತ್ತರು? ಎಂದು ವಿರೋಧ ಪಕ್ಷಗಳ ಮುಖಂಡರು ಕೇಳುತ್ತಿದ್ದಾರೆ. ವಾಯುಪಡೆಯ ಯೋಧರು 1,2,3,4 ಎಂದು ಮೃತದೇಹಗಳನ್ನು ಎಣಿಸಬೇಕಿತ್ತೇ? ಎಂತಹ ಅಪಹಾಸ್ಯ ಇದು’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT