ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ‘ವರ್ಷಕ್ಕೆ ಕೋಟಿ ಉದ್ಯೋಗ, ಸಕಲರಿಗೂ ವಸತಿ’

ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ
Last Updated 17 ಅಕ್ಟೋಬರ್ 2019, 9:58 IST
ಅಕ್ಷರ ಗಾತ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ, ‘ಸಂಕಲ್ಪಪತ್ರ’ವನ್ನು ಮಂಗಳವಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಆಶ್ವಾಸನೆಯನ್ನು ಬಿಜೆಪಿ ನೀಡಿದೆ. ವಿನಾಯಕ ದಾಮೋದರ ಸಾವರ್ಕರ್‌ಗೆ ‘ಭಾರತ ರತ್ನ’ ನೀಡುವಂತೆ ಮಹಾರಾಷ್ಟ್ರ ಬಿಜೆಪಿ ಘಟಕ ಒತ್ತಾಯಿಸಿದೆ. ಇದನ್ನೂ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿರುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇದೆ. ಎಲ್ಲಾ ಪ್ರಮುಖ ಪಕ್ಷಗಳೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ

288:ಒಟ್ಟು ಸ್ಥಾನಗಳು
3,239 (95.4%):ಒಟ್ಟು ಅಭ್ಯರ್ಥಿಗಳು
150 (4.6%):ಮಹಿಳಾ ಅಭ್ಯರ್ಥಿಗಳು
46:ಬಿಜೆಪಿ, ಶಿವಸೇನಾ, ಕಾಂಗ್ರೆಸ್‌, ಎನ್‌ಸಿಪಿಗಳು ಕಣಕ್ಕೆ ಇಳಿಸಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ

ಕಾಂಗ್ರೆಸ್‌ನಿಂದ ವದಂತಿ: ಮೋದಿ
ಚಾರಕಿ ದಾದ್ರಿ (ಹರಿಯಾಣ) (ಪಿಟಿಐ):
‘ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷವು ವಿಶ್ವದಾದ್ಯಂತ ವದಂತಿಗಳನ್ನು ಹರಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಹರಿಯಾಣ ವಿಧಾನಸಭಾ ಚುನಾವಣೆಯ ಸಲುವಾಗಿ ಮಂಗಳವಾರ ಇಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಶುದ್ಧ ಮತ್ತು ಪಾರದರ್ಶಕ ಆಡಳಿತ ನೀಡಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಉತ್ಸುಕರಾಗಿದ್ದಾರೆ’ ಎಂದು ಅವರು ಹೇಳಿದರು.

ಬಿಜೆಪಿ ಮೂಲಕ ಚುನಾವಣಾ ಕಣಕ್ಕೆ ಇಳಿದಿರುವ ಕುಸ್ತಿಪಟು ಬಬಿತಾ ಫೋಗಟ್‌ ಅವರ ಸಾಧನೆಯನ್ನು ಮೋದಿ ಶ್ಲಾಘಿಸಿದರು. ಹರಿಯಾಣದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ ಎಂದು ಮೋದಿ ಹೇಳಿದರು.

ಗುಂಪು ಸಂದೇಶಕ್ಕೆ ನೋಟಿಸ್‌
ನಾಂದೇಡ್‌:
ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಚುನಾವಣಾ ಪ್ರಚಾರ ಸಂಬಂಧಿ ಸಂದೇಶ ಮತ್ತು ಚಿತ್ರಗಳನ್ನು ಹಂಚಿಕೊಂಡ ಕಾರಣಕ್ಕೆ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ 12 ವಾಟ್ಸ್‌ಆ್ಯಪ್‌ ಗುಂಪುಗಳ ನಿರ್ವಾಹಕರಿಗೆ ಚುನಾವಣಾ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ನಾರಾಯಣ ರಾಣೆ ಬಿಜೆಪಿಗೆ:ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಮುಖ್ಯಸ್ಥ ನಾರಾಯಣ ರಾಣೆ, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಉತ್ತರ ಪ್ರದೇಶದ ಮಾಜಿ ಸಂಸದೆ ರಾಜಕುಮಾರಿ ರತ್ನಾಸಿಂಘ್‌ ಮಂಗಳವಾರ ಬಿಜೆಪಿ ಸೇರಿದ್ದಾರೆ.

‘ಹಿಂದೂರಾಷ್ಟ್ರವಾಗಲು ಬಿಡಲ್ಲ’
ಠಾಣೆ (ಮಹಾರಾಷ್ಟ್ರ):
‘ಭಾರತವು ಹಿಂದೂ ರಾಷ್ಟ್ರವಲ್ಲ. ಭಾರತವು ಕೇವಲ ಹಿಂದೂ ರಾಷ್ಟ್ರವಾಗಲು ನಾವು ಬಿಡುವುದಿಲ್ಲ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

‘ವಿಜಯದಶಮಿ ದಿನದಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ‘ಭಾರತ ಎಂದಿಗೂ ಹಿಂದೂ ರಾಷ್ಟ್ರ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಓವೈಸಿ ಈ ಮಾತು ಹೇಳಿದ್ದಾರೆ.

ಸಾವರ್ಕರ್‌ಗೆ ‘ಭಾರತ ರತ್ನ’ ಶಿಫಾರಸು

ಉದ್ಯೋಗ ಸೃಷ್ಟಿಸುವುದಿರಲಿ, ಆರು ತಿಂಗಳಲ್ಲಿ ಮತ್ತಷ್ಟು ಯುವಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕಾಂಗ್ರೆಸ್‌–ಎನ್‌ಸಿಪಿ ಅಧಿಕಾರಕ್ಕೆ ಬಂದರೆ, ಪರಿಸ್ಥಿತಿ ಬದಲಿಸುತ್ತೇವೆ.
–ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್‌ಗೆ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಇದು ನಮ್ಮ ಪ್ರಣಾಳಿಕೆಯಲ್ಲಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇವೆ.
ಜೆ.ಪಿ.ನಡ್ಡಾ,ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ

ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಂ ಗೋಡ್ಸೆಗೂ ‘ಭಾರತ ರತ್ನ’ ನೀಡುವಂತೆ ಈ ಸರ್ಕಾರವು ಮುಂದೊಂದು ದಿನ ಶಿಫಾರಸು ಮಾಡಿದರೆ ಆಶ್ಚರ್ಯವಿಲ್ಲ.
ಡಿ.ರಾಜಾ,ಸಿಪಿಐ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT