ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ: ಕಾಂಗ್ರೆಸ್ ನಿರ್ಣಯ

ಕಾಂಗ್ರೆಸ್‌ ಕಾರ್ಯಕಾರಿಣಿ ಕರೆ
Last Updated 2 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ವಾರ್ಧಾ, ಮಹಾರಾಷ್ಟ್ರ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್‌ ಗೋಡ್ಸೆ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗುವಂತೆ ಕಾಂಗ್ರೆಸ್‌ ಕಾರ್ಯಕಾರಿಣಿ ಕರೆ ನೀಡಿದೆ.

ವಾರ್ಧಾದ ಸೇವಾಗ್ರಾಮ ಆಶ್ರಮದ ಮಹಾದೇವ ಭವನದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಆರಂಭವಾದ ಕಾರ್ಯಕಾರಿಣಿಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಯಿತು.

1942ರಲ್ಲಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಇದೇ ಸ್ಥಳದಲ್ಲಿ ನಡೆದಿದ್ದ ಸಭೆಯಲ್ಲಿ ಬ್ರಿಟಿಷರ ವಿರುದ್ಧ ‘ಭಾರತಬಿಟ್ಟು ತೊಲಗಿ’ ನಿರ್ಣಯ ಅಂಗೀಕರಿಸಲಾಗಿತ್ತು. ಈಗ ಅದೇ ಸ್ಥಳದಲ್ಲಿ ಕಾಂಗ್ರೆಸ್‌ ಕಾರ್ಯಕಾರಿಣಿಯು ಬಿಜೆಪಿ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ತುರ್ತು ಅಗತ್ಯವಿದೆ ಎಂದು ಗುಡುಗಿದೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜೊತೆಯಾಗಿ ದೇಶದಲ್ಲಿ ದ್ವೇಷ ಮತ್ತು ಭೀತಿ ಹುಟ್ಟಿಸುವ ರಾಜಕಾರಣದಲ್ಲಿ ತೊಡಗಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಮಹಾತ್ಮ ಗಾಂಧಿ ಅವರ ಕನ್ನಡಕವನ್ನು ಜಾಹೀರಾತು ಮತ್ತು ಪ್ರಚಾರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಅವರ ತತ್ವ, ಸಿದ್ಧಾಂತಗಳನ್ನು ಮಾತ್ರ ನೆನಪಿಸಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಆಂದೋಲನ ಪ್ರಚಾರ ಜಾಹೀರಾತಿನಲ್ಲಿ ಗಾಂಧೀಜಿಯ ಕನ್ನಡಕವನ್ನು ಲಾಂಛನವನ್ನಾಗಿ ಬಳಸಿಕೊಳ್ಳುತ್ತಿದೆ.

ದೆಹಲಿಗೆ ಪಾದಯಾತ್ರೆ ಹೊರಟಿದ್ದ ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸರು ಮತ್ತು ಅರೆಸೇನಾ ಪಡೆಯನ್ನು ಬಳಸಿದ್ದನ್ನು ಖಂಡಿಸಿ ಕಾರ್ಯಕಾರಿಣಿ ನಿರ್ಣಯ ಅಂಗೀಕರಿಸಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದರು.

‘ಬಾಪು ಕೂಡ ಒಪ್ಪಿರಲಿಲ್ಲ’

‘ಬಾಪು ಜೀವಮಾನವಿಡಿ ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಿದ್ದರು. ಅವರ ಹತ್ಯೆಗೂ ಆರ್‌ಎಸ್‌ಎಸ್‌ ಸಿದ್ಧಾಂತವೇ ಪ್ರೇರಣೆಯಾಯಿತು’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ವಿಪರ್ಯಾಸವೆಂದರೆ ಇಂದು ಅದೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌, ಮಹಾತ್ಮ ಗಾಂಧಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಕಿಡಿ ಕಾರಿದ್ದಾರೆ.

******

ಮೋದಿ ನೇತೃತ್ವದ ಸರ್ಕಾರ ಚರ್ಚೆ ಮತ್ತು ಭಿನ್ನಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬಹುಸಂಸ್ಕೃತಿ ದೇಶದಲ್ಲಿ ಏಕಸಂಸ್ಕೃತಿ ಹೇರುವ ಮೂಳಕ ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿದೆ
– ಕಾಂಗ್ರೆಸ್‌ ಕಾರ್ಯಕಾರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT