ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ಕಾಂಗ್ರೆಸ್ ಆಕ್ರೋಶ

Last Updated 28 ಡಿಸೆಂಬರ್ 2018, 17:09 IST
ಅಕ್ಷರ ಗಾತ್ರ

ನವದೆಹಲಿ:ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್(ಆಕಸ್ಮಿಕ ಪ್ರಧಾನಿ) ಸಿನಿಮಾ ಮೂಲಕ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್‌ ನಾಯಕರು ದೂರಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಕುರಿತ ಚಿತ್ರ ಇದಾಗಿದ್ದು, ಅನುಪಮ್‌ ಖೇರ್‌ ಅವರು ಸಿಂಗ್‌ ಪಾತ್ರದಲ್ಲಿ ನಟಿಸಿದ್ದಾರೆ.

2004ರಿಂದ 2008ರವರೆಗೆ ಮನಮೋಹನ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬಾರು ಬರೆದಿರುವ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಪುಸ್ತಕ ಆಧರಿಸಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಗುರುವಾರ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದು, ಇದರಲ್ಲಿ ಕಾಂಗ್ರೆಸ್‌ನ ಒಳ ರಾಜಕೀಯಕ್ಕೆ ಸಿಂಗ್‌ ಬಲಿಪಶು ಆಗಿದ್ದರು ಎಂಬರ್ಥದ ದೃಶ್ಯಗಳಿವೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

‘ಈ ರೀತಿಯ ಅಪಪ್ರಚಾರದಿಂದ ಅವರಿಗೆ ಉಪಯೋಗವೇನೂ ಆಗುವುದಿಲ್ಲ. ಎಂದಿಗೂ ಸತ್ಯಕ್ಕೇ ಜಯ ಸಿಗುತ್ತದೆ’ ಎಂದು ಹೇಳಿದ್ದಾರೆ.

‘ಒಂದು ಕುಟುಂಬವು ಹತ್ತು ವರ್ಷ ದೇಶವನ್ನು ಹೇಗೆ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು ಮತ್ತು ಡಾ. ಸಿಂಗ್‌ ಹೇಗೆ ಆ ಕುಟುಂಬದ ಕೈಗೊಂಬೆಯಾಗಿದ್ದರು ಎಂಬಂತಹ ಗಮನ ಸೆಳೆಯುವ ಅಂಶಗಳನ್ನು ತಿಳಿದುಕೊಳ್ಳಬೇಕೆಂದರೆ ಸಿನಿಮಾದ ಟ್ರೇಲರ್‌ ವೀಕ್ಷಿಸಿ. ಸಿನಿಮಾ ಜ.11ರಂದು ಬಿಡುಗಡೆಯಾಗಲಿದೆ’ ಎಂದು ಹೇಳಿದ್ದ ಬಿಜೆಪಿ, ಟ್ರೇಲರ್‌ನ ಲಿಂಕ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೆವಾಲಾ, ‘ಬಿಜೆಪಿ ಈ ರೀತಿ ಎಷ್ಟೇ ಅಪಪ್ರಚಾರ ನಡೆಸಿದರೂ ಮೋದಿ ಸರ್ಕಾರದಿಂದ ಗ್ರಾಮೀಣ ಜನರು ಅನುಭವಿಸಿರುವ ಯಾತನೆ, ಹೆಚ್ಚುತ್ತಿರುವ ನಿರುದ್ಯೋಗ, ನೋಟು ರದ್ದು ದುರಂತ, ಜಿಎಸ್‌ಟಿ ಎಡವಟ್ಟು, ಆರ್ಥಿಕ ದುರಾಡಳಿತ ಬಗ್ಗೆ ಪ್ರಶ್ನಿಸುವುದನ್ನು ಕಾಂಗ್ರೆಸ್‌ ನಿಲ್ಲಿಸುವುದಿಲ್ಲ’ ಎಂದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಮನಮೋಹನ್‌ ಸಿಂಗ್‌ ಅವರಿಗೆ ಈ ಸಿನಿಮಾದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಎದ್ದು ಹೋದರು.

ವಿಶೇಷ ಪ್ರದರ್ಶನಕ್ಕೆ ಆಗ್ರಹ

ಅನುಪಮ್ ಖೇರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ ಜಯ ಬರೂ ಅವರ ಪುಸ್ತಕವನ್ನು ಆಧರಿಸಿದೆ.ಬರೂ ಅವರು 2004-2008 ರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಜನವರಿ 11ಕ್ಕೆ ಈ ಸಿನಿಮಾ ತೆರೆಕಾಣಲಿದ್ದು, ಅದಕ್ಕಿಂತ ಮುನ್ನ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಬೇಕು ಎಂದು ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸತ್ಯಜಿತ್ ತಂಬೇ ಪಾಟೀಲ್ ಒತ್ತಾಯಿಸಿದ್ದಾರೆ.

ಟ್ರೇಲರ್ ನೋಡಿ ಅನಿಸಿದ್ದು ಏನೆಂದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ತಪ್ಪಾಗಿ ಬಿಂಬಿಸಿದ್ದು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತೆ ಚಿತ್ರಿಸಲಾಗಿದೆ. ಕಾಂಗ್ರೆಸ್‍ಗೆ ಅವಹೇಳನ ಮಾಡುವ ರೀತಿಯಲ್ಲಿ ಸತ್ಯಕ್ಕೆ ದೂರವಾದ ದೃಶ್ಯಗಳು ಇದರಲ್ಲಿವೆ.ಹಾಗಾಗಿ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕು.ನಾವು ಆ ಸಿನಿಮಾವನ್ನು ನೋಡಿದ ನಂತರವೇ ಚಿತ್ರ ಬಿಡುಗಡೆ ಮಾಡಬೇಕು. ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದರೆ ನಾವು ಸಿನಿಮಾ ಪ್ರದರ್ಶನವನ್ನು ಅಡ್ಡಿಪಡಿಸುತ್ತೇವೆ ಎಂದು ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈ ಸಿನಿಮಾದ ಟ್ರೇಲರ್ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ, ಟ್ರೇಲರ್ ದೃಶ್ಯವನ್ನು ಟ್ವೀಟ್ ಮಾಡಿದೆ.
ಕುಟುಂಬ ರಾಜಕಾರಣ 10 ವರ್ಷಗಳ ಭಾರತವನ್ನು ಯಾವ ರೀತಿ ಲೂಟಿ ಮಾಡಿದೆ ಎಂಬುದರ ಕಥೆ ಇಲ್ಲಿದೆ. ಮುಂದಿನ ಹಕ್ಕುದಾರ ಸಿದ್ಧರಾಗುವವರೆಗೆ ಡಾ. ಸಿಂಗ್ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದರೆ? ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌ನ ಅಧಿಕೃತ ಟ್ರೇಲರ್ ವೀಕ್ಷಿಸಿ.ಜನವರಿ 11ಕ್ಕೆ ಸಿನಿಮಾ ತೆರೆಗೆ ಎಂದು ಬಿಜೆಪಿ ಟ್ವೀಟಿಸಿದೆ.

ಭ್ರಷ್ಟಾಚಾರ ಹಗರಣಗಳು ಒಂದರ ಮೇಲೊಂದರತೆನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಹೇಗೆ ನಿಭಾಯಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕೇಳುವ ದೃಶ್ಯವೊಂದನ್ನು ಆ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಇಂಥಾ ದೃಶ್ಯಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಆದಾಗ್ಯೂ, ಬಿಜೆಪಿ ಸಂಸದೆ ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ರಾಜಕೀಯ ವ್ಯಕ್ತಿಗಳ ಜೀವನ ಚರಿತ್ರೆ ಆಧಾರಿತ ಸಿನಿಮಾಗಳಲ್ಲಿ ಇದೊಂದು ಗೇಮ್ ಚೇಂಜರ್ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೃತ್ತಿ ಜೀವನದ ಮಹತ್ವದ ಪಾತ್ರ: ಅನುಪಮ್‌ ಖೇರ್‌

ಮುಂಬೈ:‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದಲ್ಲಿ ನಾವು ನಿರ್ವಹಿಸಿರುವ ಪಾತ್ರ ಮಹತ್ವದ್ದಾಗಿದ್ದು, ಉತ್ತಮ ಅಭಿನಯ ನೀಡಿದ್ದೇನೆ. ಈ ಪಾತ್ರ ನಿರ್ವಹಿಸಿರುವ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ, ಪಾತ್ರದಿಂದ ಹಿಂದೆ ಸರಿಯುವುದೂ ಇಲ್ಲ’ ಎಂದು ನಟ ಅನುಪಮ್‌ ಖೇರ್‌ ಟ್ವೀಟ್‌ ಮಾಡಿದ್ದಾರೆ.

‘ಚಿತ್ರ ನೋಡಿದ ನಂತರ ಡಾ. ಮನಮೋಹನ್‌ ಸಿಂಗ್‌ ಅವರು ಕೂಡ ನನ್ನ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ಚಿತ್ರದಲ್ಲಿ ಕಾಂಗ್ರೆಸ್‌ ವಿರುದ್ಧದ ಅಂಶಗಳಿದ್ದು, ಚಿತ್ರ ಬಿಡುಗಡೆಗೆ ಮುನ್ನ, ಪಕ್ಷದ ನಾಯಕರಿಗೆ ಮೊದಲು ಈ ಸಿನಿಮಾ ತೋರಿಸಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಯುವ ಘಟಕ ಚಿತ್ರದ ನಿರ್ಮಾಪಕರಿಗೆ ಪತ್ರ ಬರೆದಿತ್ತು.

‘ಈ ದೇಶವನ್ನು ನಾನು ಮಾರಾಟಮಾಡಬೇಕಿತ್ತೇ ಎಂದು ಮನಮೋಹನ್‌ ಸಿಂಗ್‌ ಪ್ರಶ್ನಿಸುವ ದೃಶ್ಯ ಚಿತ್ರದಲ್ಲಿದೆ. ಸಿಂಗ್‌ ಎಷ್ಟು ಉನ್ನತ ವ್ಯಕ್ತಿ ಎಂಬುದು ಇದರಿಂದ ತಿಳಿಯುತ್ತದೆ.ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮಾಡುವ ಬದಲು, ತಮ್ಮ ಪಕ್ಷದ ನಾಯಕನ ಕುರಿತು ಸಿನಿಮಾ ಮಾಡಿದ್ದಕ್ಕೆ ಹೆಮ್ಮೆ ಪಡಬೇಕು.ಅವರೇ ಪ್ರೇಕ್ಷಕರನ್ನು ಸಿನಿಮಾ ನೋಡಲು ಕರೆದುಕೊಂಡು ಬರಬೇಕು’ ಎಂದು ಅನುಪಮ್‌ ಖೇರ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. ಅವರ ಪಕ್ಷದ ಕಾರ್ಯಕರ್ತರಿಗೂ ಈ ಬಗ್ಗೆ ಅವರು ತಿಳಿಸಿಕೊಡಬೇಕು’ಎಂದಿದ್ದಾರೆ.

ನಿಷೇಧ ಇಲ್ಲ

ಭೋಪಾಲ್‌ : ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರಕ್ಕೆ ನಿಷೇಧ ಹೇರುವುದಿಲ್ಲ ಎಂದು ಕಾಂಗ್ರೆಸ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಹೇಳಿದೆ.

* ಐದು ವರ್ಷದಲ್ಲಿ ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಬಿಜೆಪಿ ಜನರಿಗೆ ಉತ್ತರ ನೀಡಬೇಕಾಗಿರುವುದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಚಿತ್ರವನ್ನು ಬಳಸಿಕೊಳ್ಳುತ್ತಿದೆ

ಪಿ.ಎಲ್. ಪೂನಿಯಾ,ಕಾಂಗ್ರೆಸ್‌ ನಾಯಕ

*‘ಆಕಸ್ಮಿಕ ಪ್ರಧಾನಿ’ಗಿಂತ ನಿಕೃಷ್ಟವಾಗಿರುವ ‘ವಿವೇಚನಾರಹಿತ ಪ್ರಧಾನಿ’ ಬಗ್ಗೆ ಬಿಜೆಪಿಯವರು ಯಾವಾಗ ಸಿನಿಮಾ ಮಾಡುತ್ತಾರೋ ನೋಡೋಣ..

ಒಮರ್‌ ಅಬ್ದುಲ್ಲಾ,ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ

*ರಫೇಲ್‌ ಯುದ್ಧವಿಮಾನ ಹಗರಣ, ನೋಟು ರದ್ದು ಪರಿಣಾಮ, ಬ್ಯಾಂಕ್‌ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವವರ ಕುರಿತೂ ಬಿಜೆಪಿ ಸಿನಿಮಾ ಮಾಡಲಿ.

ಮನೋಜ್‌ ಝಾ,ಆರ್‌ಜೆಡಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT