ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡು ಕಟ್ಟಿಕೊಂಡು ಈಜಿದರೆ ಪರಿಣಾಮ ಶೂನ್ಯ

Last Updated 5 ಫೆಬ್ರುವರಿ 2018, 7:08 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಳೆದಿಂಡು, ಬೆಂಡು ಕಟ್ಟಿಕೊಂಡು ಈಜುವವರಿಂದ ವಚನ ಸಾಹಿತ್ಯದ ಪರಿಣಾಮಕಾರಿ ಪ್ರತಿಪಾದನೆ ಎಂದಿಗೂ ಸಾಧ್ಯವಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಕುಮಾರಚಲ್ಯ ಪ್ರತಿಪಾದಿಸಿದರು. ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ 5ನೇ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಶರಣರ ಬದುಕು, ವಚನ ಸಾಹಿತ್ಯ ಗಳ ಆಳವಾದ ಅಧ್ಯಯನ ನಡೆಸದೇ ಕೆಲವರು ಆರ್ಭಟದಲ್ಲಿ ಮಾತನಾಡುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಶರಣ ಪದದ ಅರ್ಥ ತಿಳಿಯದೆ ಶರಣರ ವಚನಗಳ ಕುರಿತು ಮಾತನಾಡುತ್ತಾರೆ. ಇಂಥವರಿಂದ ವಚನ ಸಾಹಿತ್ಯದ ಮೌಲ್ಯಗಳು ಜನರಿಗೆ ತಲುಪಲು ಸಾಧ್ಯವಿಲ್ಲ. ಮೊದಲು ವಚನ ಸಾಗರ ಈಜಬೇಕು. ನಂತರ ವಚನಗಳ ಕುರಿತು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

ಇಂತಹ ಪ್ರವೃತ್ತಿಯ ಪರಿಣಾಮ ಇಂದು ವೀರಶೈವ, ಲಿಂಗಾಯತ ಎಂದು ವಿಭಜನೆಗೆ ಅವಕಾಶವಾಗಿದೆ. ವೀರಶೈವ, ಲಿಂಗಾಯತ ಎನ್ನುವ ಆರ್ಭಟದಷ್ಟೇ, ಹಿಂಜರಿಕೆಯೂ ತೊಡಕುಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಯಾವುದೇ ವಿಷಯ ಪ್ರತಿಪಾದಿಸುವಾಗ ಉತ್ಸಾಹ, ಹಮ್ಮಸ್ಸು, ಆರ್ಭಟಕ್ಕಿಂತ ವಾಸ್ತವದ ನೆಲೆಗಟ್ಟು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು. ಇಂತಹ ಮನೋಭಾವ ಮುಂದುವರಿದರೆ ವಚನ ಸಾಹಿತ್ಯದ ಮೌಲ್ಯಗಳೇ ನಾಶವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಶತಮಾನಗಳಿಂದಲೂ ಧರ್ಮಕ್ಕೆ, ಸಂಸ್ಕೃತಿಗೆ, ಪ್ರಭುತ್ವಕ್ಕೆ ಅಧೀನರಾಗಿದ್ದ ಜನರನ್ನು ಎಲ್ಲ ಸಂಕೋಲೆಗಳಿಂದ ಮುಕ್ತಗೊಳಿಸಲು 12ನೇ ಶತಮಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಸ್ಥಾಪಿಸಲು ಕ್ರಾಂತಿಯ ಬೀಜ ಬಿತ್ತಿದ್ದ ಮಹಾಪುರುಷ ಬಸವಣ್ಣ. ಆದರೆ, ಇಂದು ತೋರ್ಪಡಿಕೆಯ ಭಕ್ತಿ ಪ್ರಾಧಾನವಾಗಿ ಕಾಣುತ್ತಿದೆ. ಸ್ಥಾವರಕ್ಕೆ ಅಳಿವಿದೆ ಎಂದ ಬಸವಣ್ಣನ ಸಂದೇಶ ಧಿಕ್ಕರಿಸಿ ಇಂದು ಅಭಿಷೇಕಕ್ಕೇ ಸಾರ್ವಜನಿಕರ ತೆರಿಗೆ ಹಣ  ₹ 175 ಕೋಟಿ ಖರ್ಚು ಮಾಡಲಾಗುತ್ತಿದೆ. ಸ್ವಾಮೀಜಿಗಳು ಆಡಂಬರ ಮಾಡುತ್ತಿದ್ದಾರೆ. ಎಲ್ಲ ಮಠಗಳು ಮಹಾಮನೆಗಳಾಗಿ, ಸ್ವಾಮಿ ಗಳು ನಿಜ ಶರಣರಾಗಿ ಕೆಲಸ ಮಾಡಿದರೆ ಮಾತ್ರ ವಚನ ಸಾಹಿತ್ಯದ ಆಶಯಗಳು ಸಾಕಾರಗೊಳ್ಳುತ್ತವೆ ಎಂದರು.

ಶರಣ ಎಂದರೆ ಸಮಗ್ರ ವಚನ ಪರಿಭಾವಿಸಿದವರು. ಅಧೀನತೆಯಿಂದ ಮುಕ್ತ‌ವಾದವರು. ನಿಯಂತ್ರಣ ಮೀರದವರು ನಿಜ ಶರಣರು. ವಚನಗಳ ಜೀವಾಳ ಶ್ರದ್ಧೆ, ಜ್ಞಾನ, ತ್ಯಾಗ. ಇವುಗಳನ್ನು ಪರಿಪಾಲಿಸದಿದ್ದರೆ ಅವರು ನಿಜವಾದ ಶರಣರಲ್ಲ. ಹುಸಿ ಭಕ್ತರು, ನುಡಿ ವಂಚಕರು ಇದ್ದಾರೆ. ಈ ಪ್ರಜ್ಞೆ ಅಂದು ಕೆಲಸ ಮಾಡದಿದ್ದರೆ 12ನೇ ಶತಮಾನದಲ್ಲಿ ವಚನ ಚಳವಳಿ ಸಾಧ್ಯವಿರಲ್ಲಿಲ್ಲ ಎಂದರು.

‘ಇಂದು ಶರಣರ ವಚನಗಳ ಕುರಿತು ಮಾತನಾಡುವುದು ಮಾತ್ರವಲ್ಲ. ಅವರ ವಿಚಾರ ಎಷ್ಟು ಪಾಲಿಸುತ್ತಿದ್ದೇವೆ ಎಂಬುದು ಮುಖ್ಯ. ಸೈದ್ಧಾಂತಿಕವಾದ ವಚನ ಸಾಹಿತ್ಯವು ಶಾಸ್ತ್ರದ ಮಿತಿ ದಾಟಿ ಬೆಳೆದಿದೆ. ವಚನ ಸಾಹಿತ್ಯ ಜನ ಸಾಮಾನ್ಯರನ್ನು ತಲುಪಬೇಕು ಎಂಬುದರ ಬದಲಾಗಿ ವಚನ ಸಾಹಿತ್ಯದ ಬಳಿಯೇ ಜನರು ಬರಬೇಕು’ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳಾನಾಧ್ಯಕ್ಷೆ ಡಾ.ಜಿ.ವಿ. ಜಯಾ ರಾಜಶೇಖರ್, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಬಸವಕೇಂದ್ರ ಬಸವ ಮರುಳಸಿದ್ದ ಸ್ವಾಮೀಜಿ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಜಿ. ಹನುಮಂತಪ್ಪ ಗೌಡ, ಅಶೋಕ ನಾಯಕ್, ಪಿ. ರುದ್ರೇಶ್, ಎಚ್‌.ಎಲ್‌. ಷಡಕ್ಷರಿ ಉಪಸ್ಥಿತರಿದ್ದರು.

ಸಮಾರೋಪಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ ‘ಕೃಷಿ ಕೃತ್ಯ ಕಾಯಕ’ ಕುರಿತು ರೈತ ವಿಜ್ಞಾನಿ ಮಲ್ಲಣ್ಣ ಶಂಕರಣ್ಣ ನಾಗರಾಳ, ಡಾ.ಬಿ.ಜಿ. ಧನಂಜಯ ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT