29ವರ್ಷಗಳ ಬಳಿಕ ಅಸ್ಸಾಂನಲ್ಲಿ ರದ್ದಾಗಲಿದೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ

ಭಾನುವಾರ, ಮೇ 26, 2019
31 °C

29ವರ್ಷಗಳ ಬಳಿಕ ಅಸ್ಸಾಂನಲ್ಲಿ ರದ್ದಾಗಲಿದೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ

Published:
Updated:

ಅಸ್ಸಾಂ: 29 ವರ್ಷಗಳಿಂದ ಅಸ್ಸಾಂನಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್‌ಪಿಎ) ಇದೇ ಆಗಸ್ಟ್‌ನಲ್ಲಿ ರದ್ದಾಗಲಿದೆ. ಅಲ್ಲಿಂದ ಹಿಂದಿರುಗಲು ಸೇನೆಗೆ ಈಗಾಗಲೇ ಗೃಹ ಸಚಿವಾಲಯ ಸೂಚಿಸಿದೆ. 

1990ರ ನವೆಂಬರ್ 27ರಲ್ಲಿ ಪ್ರತ್ಯೇಕವಾದಿ ಸಂಘಟನೆ ಅಸ್ಸಾಂ ಸಂಯುಕ್ತ ವಿಮೋಚನಾ ರಂಗ (ಉಲ್ಫಾ) ತೀವ್ರವಾಗಿದ್ದ ಸಂದರ್ಭದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. 

ಉಲ್ಫಾ ಅಟ್ಟಹಾಸವನ್ನು ತಡೆಯುವುದಕ್ಕಾಗಿ ಹಾಗೂ ಅದರ ವಿರುದ್ಧ ಕಾರ್ಯಾಚರಣೆ ನಡೆಸಲು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ಈ ಕಾಯ್ದೆ ಮೂಲಕ ಒದಗಿಸಲಾಯಿತು. ಆಗ ಅಸ್ಸಾಂ ಅನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದೇ ಘೋಷಿಸಲಾಗಿತ್ತು.

‘ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಜುಲೈ 31ರೊಳಗೆ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದಾದ ನಂತರದ ಭದ್ರತೆ ಬಗ್ಗೆ ಯೋಜನೆ ರೂಪಿಸುವಂತೆ ಸೇನೆಗೆ ಕೇಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವಿವಾದಾತ್ಮಕ ಕಾಯ್ದೆ ಕುರಿತು

1958ರಲ್ಲಿ ಸಂಸತ್ತಿನಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಪ್ರಕ್ಷುಬ್ಧವಾಗಿದ್ದ ಸಪ್ತಸೋದರಿ ರಾಜ್ಯಗಳೆಂದು ಕರೆಯುವ ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೆ ತರಲಾಯಿತು.

ಈ ಕಾಯ್ದೆಯ ಅನ್ವಯ ಸಶಸ್ತ್ರ ಪಡೆಗಳು ಯಾವುದೇ ಕಾರ್ಯಾಚರಣೆ ನಡೆಸಲು, ನೋಟಿಸ್‌ ನೀಡದೆ ಯಾರನ್ನಾದರೂ, ಎಲ್ಲಿಂದಲಾದರೂ ಬಂಧಿಸುವ ಅಧಿಕಾರ ಹೊಂದಿರುತ್ತವೆ

ದೇಶದ ಭದ್ರತೆ, ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಜಾರಿಗೆ ಬಂದ ಎಎಫ್ಎಸ್‌ಪಿಎ ಸೇನಾಪಡೆಗಳಿಗೆ ಅಧಿಕಾರ ನೀಡಿತು. ಆದರೆ, ಇದರ ದುರ್ಬಳಕೆಯನ್ನು ತಡೆಯಲು ಯಾವುದೇ ರಕ್ಷಣೆ ಇಲ್ಲದ್ದಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಪ್ರತ್ಯೇಕತಾವಾದಿಗಳನ್ನು ನಿಗ್ರಹಿಸುವ ಹೆಸರಿನಲ್ಲಿ ಸೇನಾ ಪಡೆಗಳು ಸಾಮಾನ್ಯ ಜನರಿಗೆ ಸಾಕಷ್ಟು ಹಿಂಸೆ ನೀಡತೊಗಿದವು.

ಹಾಗಾಗಿ ಈ ವಿವಾದಾತ್ಮಕ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಈಶಾನ್ಯ ರಾಜ್ಯಗಳಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಇದಕ್ಕಾಗಿಯೇ ಇರೋಮ್ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದರು.  

ಕಳೆದ ವರ್ಷ ಈ ಕಾಯ್ದೆಯನ್ನು ಮೇಘಾಲಯದಲ್ಲಿ ಸಂಪೂರ್ಣವಾಗಿ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾಗಶಃ ರದ್ದು ಮಾಡಲಾಯಿತು. ಅಸ್ಸಾಂ ಮತ್ತು ಮ್ಯಾನ್ಮಾರ್‌ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದ 16 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾಯ್ದೆಯನ್ನು ರದ್ದು ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !