ಭಾನುವಾರ, ಸೆಪ್ಟೆಂಬರ್ 15, 2019
27 °C

ಪೊಲೀಸ್‌ ಅಧಿಕಾರಿ ಕೊಂದ ಆರೋಪಿಗಳಿಗೆ ಅದ್ದೂರಿ ಸ್ವಾಗತ

Published:
Updated:
Prajavani

ಲಖನೌ: ಕಳೆದ ವರ್ಷ ದನದ ಹತ್ಯೆಗೆ ಸಂಬಂಧಿಸಿ ಉತ್ತರ ಪ್ರದೇಶದ ಸ್ಯಾನಾದಲ್ಲಿ ನಡೆದ ಸಂಘರ್ಷದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಸಿಂಗ್‌ ಕೊಲೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅಬ್ಬರದ ಸ್ವಾಗತ ನೀಡಿದ್ದಾರೆ.

ಬುಲಂದ್‌ಶಹರ್‌ ಜಿಲ್ಲೆಯ ಸ್ಯಾನಾ ಪೊಲೀಸ್‌ ಠಾಣಾಧಿಕಾರಿಯಾಗಿದ್ದ ಸುಬೋಧ್‌ ಅವರನ್ನು ಉದ್ರಿಕ್ತ ಗುಂಪು ಕಳೆದ ಡಿಸೆಂಬರ್‌ನಲ್ಲಿ ಕೊಂದಿತ್ತು. ಈ ಗುಂಪಿನಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಒಟ್ಟು 88 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿತ್ತು. ಅವರಲ್ಲಿ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ತಲಾ ಒಬ್ಬ ಕಾರ್ಯಕರ್ತರು ಮತ್ತು ಬಿಜೆಪಿಯ ಒಬ್ಬ ಮುಖಂಡ ಸೇರಿದ್ದಾರೆ. 

ಆರು ಆರೋಪಿಗಳನ್ನು ಶನಿವಾರ ಸಂಜೆ ಬುಲಂದ್‌ಶಹರ್‌ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಅಲಹಾಬಾದ್‌ ಹೈಕೋರ್ಟ್‌ ಈ ಆರು ಮಂದಿಗೆ ಜಾಮೀನು ನೀಡಿತ್ತು. ಅವರು ಬಿಡುಗಡೆಯಾಗುವ ಸುದ್ದಿ ತಿಳಿದು ಸಾವಿರಾರು ಮಂದಿ ಜೈಲಿನ ಹೊರಗೆ ಸೇರಿದ್ದರು. ಜೈಲಿನ ಗೇಟಿನಿಂದ ಈ ಆರು ಮಂದಿ ಹೊರಬರುತ್ತಿದ್ದಂತೆಯೇ ‘ಜೈ ಶ್ರೀರಾಂ’ ಮತ್ತು  ‘ವಂದೇ ಮಾತರಂ’ ಘೋಷಣೆ ಮುಗಿಲು ಮುಟ್ಟಿತು. 

ಅವರೆಲ್ಲರಿಗೂ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ವೀರರು ಎಂದು ಕೊಂಡಾಡಲಾಯಿತು. ಇನ್ನೂ 38 ಆರೋಪಿಗಳು ಜೈಲಿನಲ್ಲಿಯೇ ಇದ್ದಾರೆ. 

ಕಳೆದ ವರ್ಷ ನಡೆದ ಸಂಘರ್ಷದಲ್ಲಿ ಸುಬೋಧ್‌ ಮತ್ತು ಇನ್ನೊಬ್ಬ ಯುವಕ ಬಲಿಯಾಗಿದ್ದರು. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.  ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. 

Post Comments (+)