ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ದೇಶ ಸ್ತಬ್ಧ

Last Updated 23 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೊರೊನಾ ವೈರಾಣು ಹರಡುವಿಕೆ ತಡೆಯ ಪ್ರಯತ್ನಗಳನ್ನು ರಾಜ್ಯ ಸರ್ಕಾರಗಳು ಅಸಾಧಾರಣ ಮಟ್ಟಕ್ಕೆ ಒಯ್ದಿವೆ. ಮಹಾರಾಷ್ಟ್ರ ಮತ್ತು ಪಂಜಾಬ್‌ ಸರ್ಕಾರ ಇಡೀ ರಾಜ್ಯದಲ್ಲಿ ಕರ್ಫ್ಯೂ ಘೋಷಿಸಿವೆ. ಸೋಂಕು ತಡೆಯುವ ಪ್ರಯತ್ನದ ಭಾಗವಾಗಿ ದೇಶದೊಳಗಿನ ವಿಮಾನಯಾನವನ್ನು ಸ್ಥಗಿತಗೊಳಿಸಲು ವಿಮಾನಯಾನ ಸಂಸ್ಥೆಗಳು ಸಜ್ಜಾಗಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆಯು 468ಕ್ಕೆ ಏರಿದೆ.

ಚೀನಾದ ವುಹಾನ್‌ನಲ್ಲಿ ಸುಮಾರು ಮೂರು ತಿಂಗಳ ಹಿಂದೆ ಪತ್ತೆಯಾದ ವೈರಾಣು ಈವರೆಗೆ 15 ಸಾವಿರಕ್ಕೂ ಹೆಚ್ಚು ಜನರ ಬಲಿ ಪಡೆದಿದೆ. ಸುಮಾರು ಮೂರೂವರೆ ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ.ಭಾನುವಾರ ರಾತ್ರಿಯಿಂದ ಸೋಮವಾರ ರಾತ್ರಿಯ ಅವಧಿಯಲ್ಲಿ ದೇಶದಲ್ಲಿ ಸೋಂಕು ದೃಢಪಟ್ಟ 73 ಪ್ರಕರಣಗಳು ವರದಿಯಾಗಿವೆ. ಹಾಗಾಗಿಯೇ ಅಸಾಧಾರಣ ಕ್ರಮಗಳಿಗೆ ರಾಜ್ಯಗಳು ಮುಂದಾಗಿವೆ. ಸೋಂಕು ತಡೆಗಾಗಿ ಕರ್ಫ್ಯೂ ಘೋಷಿಸಿದ ಮೊದಲ ರಾಜ್ಯ ಪಂಜಾಬ್‌. ಆದರೆ, ಇಲ್ಲಿ ಅಗತ್ಯ ಸೇವೆಗಳು
ಇರುತ್ತವೆ.

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ. ಸರ್ಕಾರವು ಕೈಗೊಂಡ ಕ್ರಮಗಳನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮೋದಿ ಅವರ ಈ ಸೂಚನೆಗೆ ಕಾರಣ.

ಇದೇ ಬುಧವಾರದಿಂದ ದೇಶೀಯ ವಿಮಾನಗಳ ಹಾರಾಟ ಇರುವುದಿಲ್ಲ ಎಂದು ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ವಿದೇಶಗಳಿಂದ ಬರುವ ವಿಮಾನಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ದೇಶದಾದ್ಯಂತ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಅಂತರರಾಜ್ಯ ಬಸ್‌ ಸೇವೆ ಕೂಡ ಲಭ್ಯ ಇಲ್ಲ. ಹಾಗಾಗಿ, ಸಾರಿಗೆ ಸೇವೆ ಬಹುತೇಕ ಸ್ಥಗಿತವಾದಂತಾಗಿದೆ.

ಕೇರಳದಲ್ಲಿ 95 ಪ್ರಕರಣ

ಕೇರಳದಲ್ಲಿ ಸೋಮವಾರ ಒಂದೇ ದಿನ 28 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇವರ ಪೈಕಿ 25 ಮಂದಿ ವಿದೇಶದಿಂದ ಬಂದವರು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 95ಕ್ಕೆ ಏರಿದೆ. ಅವರಲ್ಲಿ ನಾಲ್ವರು ಈಗಾಗಲೇ ಗುಣಮುಖರಾಗಿದ್ದಾರೆ. ರಾಜ್ಯದ ಎಲ್ಲ ಗಡಿಗಳನ್ನು ಬಂದ್‌ ಮಾಡಲಾಗಿದೆ. ಸೋಮವಾರದಿಂದಲೇ ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.

ಅಗತ್ಯ ವಸ್ತು ತಯಾರಿಕೆಗೆ ಒತ್ತು

ಅಗತ್ಯ ವಸ್ತುಗಳ ತಯಾರಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಉದ್ಯಮ ನಾಯಕರ ಜತೆಗಿನ ಸಭೆಯಲ್ಲಿ ಪ್ರಧಾನಿ ಕರೆ ಕೊಟ್ಟಿದ್ದಾರೆ. ಈಗಿನ ಸನ್ನಿವೇಶದಲ್ಲಿ, ಅಗತ್ಯ ವಸ್ತುಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆಯೂ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆಯೂ ಉದ್ಯಮ ರಂಗವನ್ನು ಅವರು ಕೋರಿದ್ದಾರೆ.

34 ಸೋಂಕಿತರು ಗುಣಮುಖ

ಕೋವಿಡ್‌ನಿಂದಾಗಿ ಒಂಬತ್ತನೇ ಸಾವು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿಯೂ ಒಬ್ಬ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಈ ನಡುವೆಯೂ ಆಶಾದಾಯಕ ವಿಚಾರವೆಂದರೆ, ಸೋಂಕು ತಗುಲಿದ್ದವರ ಪೈಕಿ 34 ವ್ಯಕ್ತಿಗಳು ಗುಣಮುಖರಾಗಿ
ದ್ದಾರೆ. ಭಾನುವಾರದ ಹೊತ್ತಿಗೆ ಗುಣಮುಖರಾದವರ ಸಂಖ್ಯೆ 24 ಇತ್ತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕು ಹರಡುವಿಕೆಯು ವಿಳಂಬವಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ ಹೇಳಿದೆ.

ಸೋಂಕಿನ ಲಕ್ಷಣ ಇರುವವರು ಮತ್ತು ಸೋಂಕಿತರನ್ನು ಪ್ರತ್ಯೇಕವಾಗಿಸುವುದು ಸೋಂಕು ಹರಡುವಿಕೆ ಪ್ರಮಾಣವನ್ನು ಶೇ 62ರಷ್ಟು ಕಡಿಮೆ ಮಾಡುತ್ತದೆ. ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ಸೋಂಕಿತರ ಸಂಖ್ಯೆಯು ಗರಿಷ್ಠ ಮಟ್ಟಕ್ಕೆ ಏರುವುದು ಶೇ 89ರಷ್ಟು ವಿಳಂಬವಾಗುತ್ತದೆ. ಹೀಗಾಗಿ ಸೋಂಕಿತರಿಗೆ ವೈದ್ಯಕೀಯ ನೆರವು ನೀಡುವ ಅವಕಾಶ ಹೆಚ್ಚುತ್ತದೆ ಎಂದು ಪರಿಷತ್‌ನ ವರದಿಯು ಹೇಳಿದೆ.

* ದೆಹಲಿ, ಜಾರ್ಖಂಡ್‌, ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ರಾಜ್ಯವ್ಯಾಪಿ ಲಾಕ್‌ಡೌನ್‌ ಘೋಷಿಸಲಾಗಿದೆ. ಬಿಹಾರ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇದೆ. ಕೇರಳ, ರಾಜಸ್ಥಾನ ಮತ್ತು ಉತ್ತರಾಖಂಡ ಸೇರಿ ಹಲವು ರಾಜ್ಯಗಳು ಈ ಮೊದಲೇ ಲಾಕ್‌ಡೌನ್‌ ಘೋಷಿಸಿದ್ದವು

* ಲಾಕ್‌ಡೌನ್‌ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ

* ಪರೋಲ್‌ ಮೇಲೆ ಬಿಡುಗಡೆ ಮಾಡಬಹುದಾದ ಕೈದಿಗಳ ಪಟ್ಟಿ ಮಾಡುವುದಕ್ಕೆ ಉನ್ನತಾಧಿಕಾರ ಸಮಿತಿ ರಚಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ‍್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸೋಂಕು ಹರಡುವಿಕೆ ತಡೆಯುವುದಕ್ಕಾಗಿ ಜೈಲುಗಳಲ್ಲಿನ ದಟ್ಟಣೆ ಕಡಿಮೆಗೊಳಿಸುವುದು ಇದರ ಉದ್ದೇಶ

* ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿ 80 ಜಿಲ್ಲೆಗಳಲ್ಲಿ ಪ್ರಯಾಣ ನಿರ್ಬಂಧ ಹೇರಲಾಗಿದೆ. ಹಾಗಾಗಿ ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಯಾವುದೇ ವ್ಯವಸ್ಥೆ ಇಲ್ಲ

* ವಿದೇಶದಿಂದ ಬಂದವರು ಸ್ವಯಂ ಪ್ರತ್ಯೇಕವಾಗಿರಬೇಕಾದ ನಿಯಮವನ್ನು ಉಲ್ಲಂಘಿಸಿದರೆ, ಪಾಸ್‌ಪೋರ್ಟ್‌ ಮುಟ್ಟುಗೋಲು ಸೇರಿದಂತೆ ಇತರ ಕಾನೂನು ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಸರ್ಕಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT