ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ಅನಾರೋಗ್ಯ; 6 ರಾಜ್ಯಗಳಲ್ಲಿ 2,700 ಕಿ.ಮೀ ಪ್ರಯಾಣಿಸಿದ 50 ವರ್ಷದ ತಾಯಿ

Last Updated 17 ಏಪ್ರಿಲ್ 2020, 8:16 IST
ಅಕ್ಷರ ಗಾತ್ರ

ಕೊಟ್ಟಾಯಂ/ ತಿರುವನಂತಪುರಂ: ಅನಾರೋಗ್ಯ ಪೀಡಿತ ಮಗನನ್ನು ಕಾಣಲು 50 ವರ್ಷ ವಯಸ್ಸಿನ ಮಹಿಳೆ ಆರು ರಾಜ್ಯಗಳನ್ನು ದಾಟಿ, 2,700 ಕಿ.ಮೀ ದೂರ ಪ್ರಯಾಣಿಸಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಬಿಎಸ್‌ಎಫ್‌ ಯೋಧನಾಗಿರುವ ಮಗನನ್ನು ಕಾಣಲು ತಾಯಿ ದೇಶದಾದ್ಯಂತ ಲಾಕ್‌ಡೌನ್‌ ನಿರ್ಬಂಧಗಳ ನಡುವೆ ಪ್ರಯಾಣಿಸಿದ್ದಾರೆ. ಕಾರ್‌ನಲ್ಲಿ ಸೊಸೆ ಮತ್ತು ಮತ್ತೊಬ್ಬ ಸಂಬಂಧಿ ಜೊತೆಗೂಡಿ 50 ವರ್ಷ ವಯಸ್ಸಿನ ತಾಯಿ ಮೂರು ದಿನಗಳು ಪ್ರಯಾಣಿಸಿದ್ದಾರೆ.

ರಾಜಸ್ಥಾನದ ಜೋಧಪುರದಲ್ಲಿ ಬಿಎಸ್‌ಎಫ್‌ ಯೋಧ ಅರುಣ್‌ ಕುಮಾರ್‌ (29) ಮಾಂಸಖಂಡಗಳ ಊತ, ನೋವಿನಿಂದ (myositis) ಬಳಲುತ್ತಿದ್ದರು. 'ದೇವರ ದಯೆಯಿಂದ ಯಾವುದೇ ತೊಂದರೆಯಾಗದೆ ನಾವು ಇಲ್ಲಿಗೆ ತಲುಪಿದೆವು. ಮಗ ಈಗ ಚೇತರಿಸಿಕೊಳ್ಳುತ್ತಿದ್ದಾನೆ' ಎಂದು ಶೀಲಮ್ಮ ವಾಸನ್‌ ಹೇಳಿದ್ದಾರೆ.

ಜೋಧಪುರ ಏಮ್ಸ್‌ನ ವೈದ್ಯರೊಬ್ಬರು ಯೋಧನ ಆರೋಗ್ಯ ಸ್ಥಿತಿಯ ಕುರಿತು ಕುಟುಂಬಕ್ಕೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೇರಳದಿಂದ ಶೀಲಮ್ಮ ಮತ್ತು ಇತರರು ಪ್ರಯಾಣಿಸಲು ನಿರ್ಧರಿಸಿದರು.ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್‌ ಮೂಲಕ ರಾಜಸ್ಥಾನ ತಲುಪಿದ್ದಾರೆ.

ಕೇಂದ್ರ ಸಚಿವ ವಿ.ಮುರಳೀಧರನ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಚೇರಿ, ಕಾಂಗ್ರೆಸ್‌ ಮುಖಂಡ ಓಮನ್ ಚಾಂಡಿ ಅವರ ಸಹಕಾರದಿಂದ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅಗತ್ಯವಾದ ಪಾಸ್‌ಗಳನ್ನು ಪಡೆದಿದ್ದಾರೆ. ಹಿಂದೂಸಹಾಯವಾಣಿ, ವಿಎಚ್‌ಪಿ ಸಂಘಟನೆ ಕ್ಯಾಬ್‌ ಹಾಗೂ ಇಬ್ಬರು ಟ್ಯಾಕ್ಸಿ ಡ್ರೈವರ್‌ಗಳನ್ನು ನಿಯೋಜಿಸಿಕೊಟ್ಟಿದೆ. ಉಚಿತವಾಗಿ ಜೋಧಪುರ ಪ್ರಯಾಣಿಸಲು ಈ ಸಂಘಟನೆಗಳು ನೆರವಾಗಿವೆ.

ಕೊಟ್ಟಾಯಂನ ಜಿಲ್ಲಾಧಿಕಾರಿ ಪಿ.ಕೆ.ಸುಧೀರ್‌ ಬಾಬು ಅವರು ಅವಶ್ಯವಿರುವ ಪಾಸ್‌ಗಳನ್ನು ಸಿದ್ಧಪಡಿಸಿ ತಲುಪಿಸಿದ ಬಳಿಕ, ಕೊರುಥೋಡು ಪಂಚಾಯ್ತಿ ವ್ಯಾಪ್ತಿಯಿಂದ ಏಪ್ರಿಲ್‌ 11ರಂದು ಪ್ರಯಾಣ ಆರಂಭಿಸಿದ ಶೀಲಮ್ಮ ಮತ್ತು ಸಂಬಂಧಿಕರು ಏಪ್ರಿಲ್‌ 14ರಂದು, ವಿಷು (ಹೊಸ ವರ್ಷ) ದಿನದಂದು ಜೋಧಪುರ ತಲುಪಿದ್ದಾರೆ.

ಫೆಬ್ರುವರಿಯಲ್ಲಿ ರಜೆಯ ಮೇರೆಗೆ ಹಳ್ಳಿಗೆ ಬಂದಿದ್ದ ಯೋಧ ಅರುಣ್‌ ಕುಮಾರ್‌, ಕೆಲವು ದಿನಗಳ ನಂತರ ಕರ್ತವ್ಯಕ್ಕೆ ಮರಳಿದ್ದರು. ಅಲ್ಲಿ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾದ ಅವರು ತಾಯಿ ಮತ್ತು ಪತ್ನಿಯನ್ನು ಕಾಣುವ ಇಚ್ಛೆ ವ್ಯಕ್ತಪಡಿಸಿದ್ದರು. ಅವರ 1 ವರ್ಷ ವಯಸ್ಸಿನ ಮಗು ಕೇರಳದಲ್ಲೇ ಉಳಿದಿದೆ.

ಇತ್ತೀಚೆಗಷ್ಟೇ ತೆಲಂಗಾಣದ ತಾಯಿಯೊಬ್ಬರು ಆಂಧ್ರ ಪ್ರದೇಶದಲ್ಲಿ ಸಿಲುಕಿದ್ದ ಮಗನನ್ನು ಕರೆ ತರಲು 1,400 ಕಿ.ಮೀ. ಸ್ಕೂಟರ್‌ ಪ್ರಯಾಣ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT