ಮಂಗಳವಾರ, ಏಪ್ರಿಲ್ 7, 2020
19 °C

ಕಾಶ್ಮೀರದಲ್ಲಿ ಕೋವಿಡ್‌–19ಗೆ ಮೊದಲ ಬಲಿ: ಇಬ್ಬರು ಮಕ್ಕಳಲ್ಲಿ ಕೊರೊನಾ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕೋವಿಡ್‌ ಸೋಂಕಿನಿಂದ ಇಲ್ಲಿನ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 65 ವರ್ಷದ ವ್ಯಕ್ತಿಯೊಬ್ಬರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್‌ ಸೋಂಕಿನಿಂದ ಉಂಟಾದ ಮೊದಲ ಸಾವು ಇದಾಗಿದೆ. ಶ್ರೀನಗರದಲ್ಲಿ ಗುರುವಾರ ಇಬ್ಬರು ಮಕ್ಕಳಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದು, ಒಬ್ಬರು ಗುಣಮುಖರಾಗಿದ್ದಾರೆ.

ಮಾರ್ಚ್‌ 24ರಂದು ಸೌದಿ ಅರೇಬಿಯಾದಿಂದ ಸೋಂಕಿತ ಮಹಿಳೆಯು ಶ್ರೀನಗರಕ್ಕೆ ಬಂದಿದ್ದರು. ಈಕೆಯೊಂದಿಗೆ ಮೊಮ್ಮಕ್ಕಳಾದ ಏಳು ವರ್ಷದ ಒಂದು ಮಗು ಹಾಗೂ ಎಂಟು ತಿಂಗಳ ಹಸುಗೂಸು ಕೂಡ ಬಂದಿತ್ತು. ಮಕ್ಕಳಿಗೂ ಕೋವಿಡ್‌ ಸೋಂಕು ತಗುಲಿದೆ ಎಂದು ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ತಿಳಿಸಿದ್ದಾರೆ.

ಗುರುವಾರ ಮೃತಪಟ್ಟ ಕೋವಿಡ್‌–19 ಸೋಂಕಿತ 65 ವರ್ಷದ ವ್ಯಕ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕುಟುಂಬಸ್ಥರು ದೂರಿದ ಹಿನ್ನೆಲೆಯಲ್ಲಿ ಶ್ರೀನಗರದ ಸಿ.ಡಿ ಆಸ್ಪತ್ರೆ ಹಾಗೂ ಎಸ್‌ಕೆಐಎಂಎಸ್‌ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಾಶ್ಮೀರದ ವಿಭಾಗೀಯ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ದಾಖಲಾಗಿದ್ದ 13 ಮಂದಿಯಲ್ಲಿ ಗುರುವಾರ ಮೂವರಿಗೆ ಸೋಂಕು ದೃಢಪಟ್ಟಿಲ್ಲ ಎಂದು ಇಲ್ಲಿನ ಸರ್ಕಾರದ ವಕ್ತಾರ ರಗ್ಜಿನ್‌ ಸಂಪೆಲ್‌ ತಿಳಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಕೋವಿಡ್‌ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಶ್ರೀನಗರದ ಎಲ್ಲ ಮಸೀದಿ, ಚರ್ಚ್‌ ಹಾಗೂ ದೇವಸ್ಥಾನಗಳನ್ನು ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಇಕ್ಬಾಲ್‌ ಚೌಧರಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು