ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಚಿತ್ರಣ | ಗುಜರಾತ್: ಅಂಕೆಗೆ ಸಿಗದ ಸೋಂಕು

Last Updated 12 ಮೇ 2020, 20:00 IST
ಅಕ್ಷರ ಗಾತ್ರ

ಅಹಮದಾಬಾದ್: ಅತಿವೇಗವಾಗಿ ಕೋವಿಡ್–19 ಸೋಂಕಿತರು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ಗುಜರಾತ್‌ ಮುಂಚೂಣಿಯಲ್ಲಿದೆ. ಇಲ್ಲೀಗ ಸೋಂಕಿತರ ಸಂಖ್ಯೆಎಂಟೂವರೆ ಸಾವಿರ ದಾಟಿದೆ. ರಾಜಧಾನಿ ಅಹಮದಾಬಾದ್ ‌ಒಂದರಲ್ಲೇ 6 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಅಹಮದಾಬಾದ್, ಸೂರತ್, ವಡೋದರ – ಈ ಮೂರು ನಗರಗಳಲ್ಲಿ ಸೋಂಕು ಕೇಂದ್ರೀಕೃತವಾಗಿದೆ.

ರಾಜ್ಯದಲ್ಲಿ ಕಳೆದ ಒಂಬತ್ತು ದಿನಗಳಿಂದ ದಿನವೊಂದಕ್ಕೆ ಸರಿಸುಮಾರು 300 ಹೊಸ‍ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಅಹಮದಾಬಾದ್‌ನ ಪಾಲುಶೇ 75. ಏಪ್ರಿಲ್ 28ರಂದು 3,774ರಷ್ಟಿದ್ದ ಸೋಂಕಿತರ ಸಂಖ್ಯೆ ಮೇ 7ರ ಹೊತ್ತಿಗೆ 7 ಸಾವಿರ ದಾಟಿ, ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೊರೊನಾದಿಂದ ಮೃತಪಟ್ಟಿರುವ 513 ಜನರ ಪೈಕಿ 395 ಜನರು (ಶೇ 77) ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ರಾಜ್ಯದಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು ಮಾರ್ಚ್ 19ರಂದು. ಮೊದಲ ಕೋವಿಡ್ ಸಾವು ಸಂಭವಿಸಿದ್ದು ಮಾರ್ಚ್ 25ರಂದು. ಈವರೆಗೆ 2,700ಕ್ಕೂ ಹೆಚ್ಚು ಮಂದಿ ವೈರಾಣು ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ, ಗುಜರಾತ್‌ನಲ್ಲಿ ಗುಣಮುಖ ದರ ತೀರಾ ಕಡಿಮೆ ಇದೆ.

ಗುಜರಾತ್‌ನಲ್ಲಿ ಈ ಮಟ್ಟದಲ್ಲಿ ಪ್ರಕರಣ ಹೆಚ್ಚಲು ಮೂರು ಕಾರಣಗಳನ್ನು ಗುರುತಿಸಲಾಗಿದೆ. ಅಹಮದಾಬಾದ್‌ ಹಾಗೂ ಸೂರತ್ ನಗರಗಳು ಜಾಗತೀಕರಣಕ್ಕೆ ತೆರೆದುಕೊಂಡಿವೆ. ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ವ್ಯಾಪಾರದ ನಿಮಿತ್ತ ಯುರೋಪ್‌ನ ರಾಷ್ಟ್ರಗಳು, ಕೊಲ್ಲಿ ದೇಶಗಳು, ಚೀನಾ, ಹಾಂಗ್‌ಕಾಂಗ್‌ನಿಂದ ಲಕ್ಷಾಂತರ ಜನರು ರಾಜ್ಯಕ್ಕೆ ಬಂದುಹೋಗಿದ್ದಾರೆ. ಥರ್ಮಲ್ ಪರೀಕ್ಷೆ, 14 ದಿನಗಳ ಕ್ವಾರಂಟೈನ್ ನಿಯಮಗಳು ಸೂಕ್ತವಾಗಿ ಪಾಲನೆಯಾಗಲಿಲ್ಲ. ಇದು ಮೊದಲ ಕಾರಣ.

ಎರಡನೆಯದಾಗಿ, ತಬ್ಲೀಗ್‌ ಜಮಾತ್‌ಗೆಂದು ರಾಜ್ಯದಿಂದ ಸುಮಾರು 1,500 ಜನರು ಹೋಗಿಬಂದಿದ್ದರು. ಇವರೆಲ್ಲಾ ಅಹಮದಾಬಾದ್, ಸೂರತ್ ಹಾಗೂ ವಡೋದರ ನಿವಾಸಿಗಳಾಗಿದ್ದು, ಈ ಮೂರು ನಗರಗಳಲ್ಲಿಯೇ ಸೋಂಕು ಪಸರಿಸುತ್ತಿದೆ. ಆದರೆ ಇವರಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.‘ಸೋಂಕಿತರ ಪ್ರಮಾಣ ಏರಿಕೆಯಾಗಲು ದೆಹಲಿಯ ತಬ್ಲೀಗ್‌ ಜಮಾತ್‌ ಸಭೆಯಿಂದ ವಾಪಸಾದವರೇ ಕಾರಣ’ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ದೂರಿದ್ದಾರೆ.

ಇದೇ ವೇಳೆ ‘ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿದ್ದೂ ಸೋಂಕು ವ್ಯಾಪಕವಾಗಿ ಹರಡಲು ಕಾರಣ’ ಎಂದು ರಾಜ್ಯ ಕಾಂಗ್ರೆಸ್ ಘಟಕ ಆರೋಪಿಸಿದೆ.ಫೆಬ್ರುವರಿ 24ರಂದು ಗುಜರಾತ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗಿಯಾಗಿದ್ದರು. ಕೊರೊನಾ ಅಡಿಯಿಡುತ್ತಿದ್ದ ಸಮಯದಲ್ಲಿ ದೊಡ್ಡ ಪ್ರಮಾಣದ ಜನರನ್ನು ಜಮಾವಣೆ ಮಾಡಿ ಸರ್ಕಾರ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಆರೋಪ ಹೊರಿಸಿದೆ. ಸೋಂಕು ವ್ಯಾಪಕವಾಗಿ ಹರಡಲು ಇದು ಮೂರನೇ ಕಾರಣ ಎನ್ನಲಾಗುತ್ತಿದೆ.ಸೋಂಕಿತರ ಜತೆ ಸಂಪರ್ಕ ಇದ್ದುದರಿಂದ ಅಹಮದಾಬಾದ್‌ ಪಾಲಿಕೆ ಆಯುಕ್ತ ವಿಜಯ್ ನೆಹ್ರಾ ಅವರನ್ನು ಕ್ವಾರಂಟೈನ್ ಮಾಡುವ ಅನಿವಾರ್ಯ ಸೃಷ್ಟಿಯಾಯಿತು. ಇವರು ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ವರದಿಗಳಿವೆ.

ಕೋವಿಡ್ ರೋಗಿಗಳಿದ್ದ ಅಹಮದಾಬಾದ್‌ನ ಆಸ್ಪತ್ರೆ ಒಂದರಲ್ಲಿ, ಮುಸ್ಲಿಮರು ಮತ್ತು ಹಿಂದೂಗಳನ್ನು ಪ್ರತ್ಯೇಕ ವಾರ್ಡ್‌ಗಳಿಗೆ ಹಾಕಲಾಗಿತ್ತು. ಇದು ಜಾಗತಿಕಮಟ್ಟದಲ್ಲಿ ಭಾರಿ ಟೀಕೆಗೆ ಕಾರಣವಾಗಿತ್ತು. ಆದರೆ, ಇದು ಸುಳ್ಳು ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿತು.

ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದು ಕೇಂದ್ರದ ಗಮನಕ್ಕೆ ಬಂದ ಬಳಿಕ ತವರು ರಾಜ್ಯದ ಪರಿಸ್ಥಿತಿ ಹತೋಟಿಗೆ ತರಲುಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಮುಂದಾದರು. ನಿರ್ವಹಣೆಯಲ್ಲಿ ಸರ್ಕಾರ ಸೋಲಲು ಬಹುಮುಖ್ಯವಾದ ಇನ್ನೊಂದು ಕಾರಣವಿದೆ. ಮುಖ್ಯಮಂತ್ರಿ ರೂಪಾಣಿ ಹಾಗೂ ಆರೋಗ್ಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ನಡುವೆ ಭಿನ್ನಮತ ತಲೆದೋರಿದ್ದು, ಕೋವಿಡ್‌ ಹೋರಾಟದಲ್ಲಿ ರಾಜ್ಯ ಹಿಂದೆ ಬೀಳುವಂತೆ ಮಾಡಿದೆ ಎಂಬ ಕಳವಳ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT