ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 30ರವರೆಗೂ ಪ್ರಯಾಣಿಕರ ರೈಲು ಸೇವೆ ರದ್ದು; ಸಂಚರಿಸಲಿದೆ ಶ್ರಮಿಕ್,ವಿಶೇಷ ರೈಲು

ಲಾಕ್‌ಡೌನ್‌
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರ ಸಾಮಾನ್ಯ ರೈಲು ಸೇವೆಗಳನ್ನು ಜೂನ್‌ 30ರ ವರೆಗೂ ರದ್ದು ಪಡಿಸಿದೆ. ಎಕ್ಸ್‌ಪ್ರೆಸ್‌, ಮೇಲ್‌ ಹಾಗೂ ಉಪನಗರ ರೈಲು ಸೇವೆಗಳು ಸೇರಿದಂತೆ ಪ್ರಯಾಣಿಕರ ರೈಲು ಸಂಚಾರ ಸೇವೆ ಆರಂಭಿಸುವುದನ್ನು ಮತ್ತೆ ಮುಂದೂಡಲಾಗಿದೆ.

ಈ ನಡುವೆ ಶ್ರಮಿಕ್‌ ವಿಶೇಷ ರೈಲುಗಳು ಹಾಗೂ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಸೇವೆ ಮುಂದುವರಿಯಲಿದೆ. ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಜನರು ಊರು ತಲುಪಲು ಅನುವಾಗುವ ನಿಟ್ಟಿನಲ್ಲಿ ವಿಶೇಷ ರೈಲು ಸಂಚಾರ ಮುಂದುವರಿಸಲು ನಿರ್ಧರಿಸಲಾಗಿದೆ.

ಜೂನ್‌ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್‌ 22ಕ್ಕೂ ಮುನ್ನ ಕಾಯ್ದಿರಿಸಲಾಗಿರುವ ರೈಲು ಟಿಕೆಟ್‌ ರದ್ದು ಪಡಿಸಲಾಗಿದ್ದು, ಟಿಕೆಟ್‌ನ ಪೂರ್ಣ ಹಣ ಹಿಂದಿರುಗಿಸುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.

ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಟಿಕೆಟ್‌ ಬುಕ್‌ ಮಾಡಿರುವವರು ಅವರಾಗಿಯೇ ಟಿಕೆಟ್‌ ರದ್ದು ಪಡಿಸಬೇಕಿಲ್ಲ. ಟಿಕೆಟ್‌ ಹಣ ಅದಾಗಿಯೇ ಬ್ಯಾಂಕ್‌ ಖಾತೆಗೆ ಮರುಪಾವತಿಯಾಗಲಿದೆ. ಆದರೆ,ರಿಸರ್ವೇಷನ್‌ ಕೌಂಟರ್‌ಗಳಲ್ಲಿ ಟಿಕೆಟ್‌ ಪಡೆದಿರುವವರುಮೂರು ತಿಂಗಳ ಒಳಗಾಗಿ ಹಣ ಪಡೆಯಬಹುದಾಗಿದೆ. ಪ್ರಸ್ತುತ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳು ಮುಚ್ಚಿರುವುದರಿಂದ ಕೂಡಲೇ ಕೌಂಟರ್‌ಗಳಿಗೆ ಹೋಗಿ ಹಣ ಪಡೆಯಲು ಸಾಧ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಯಾಣಿಕರ ಸಾಮಾನ್ಯ ರೈಲು ಸೇವೆಗಳನ್ನು ಕೂಡಲೇ ಪುನರಾರಂಭಿಸದಂತೆ ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದರು.

ಪ್ರಯಾಣಿಕರ ರೈಲು ಸೇವೆಗಳು ಮಾರ್ಚ್‌ 22ರಿಂದ ರದ್ದು ಪಡಿಸಲಾಗಿದೆ. ಅಗತ್ಯ ಸಾಮಾಗ್ರಿಗಳ ರವಾನೆಗಾಗಿ ಸರಕು ಸಾಗಣೆ ರೈಲುಗಳ ಸಂಚಾರ ನಡೆಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ವಲಸೆ ಕಾರ್ಮಿಕರು ಸೇರಿದಂತೆ ಇತರರನ್ನು ಊರುಗಳಿಗೆ ತಲುಪಿಸಲು ಮೇ 1ರಿಂದ ಭಾರತೀಯ ರೈಲ್ವೆ ಶ್ರಮಿಕ್‌ ವಿಶೇಷ ರೈಲುಗಳನ್ನು ನಡೆಸುತ್ತಿದೆ. ಮೇ 12ರಿಂದ ನಿಗದಿತ ಮಾರ್ಗಗಳಲ್ಲಿ ವಿಶೇಷ ರಾಜಧಾನಿ ರೈಲುಗಳ ಸಂಚಾರ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT