ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್: ದಿಗ್ಬಂಧನ ಬಳಿಕ ನಿರ್ಬಂಧ

ಲಾಕ್‌ಡೌನ್‌ ಹಂತ ಹಂತವಾಗಿ ತೆರವಿಗೆ ಯೋಜನೆ ರೂಪಿಸಿ: ಸಚಿವರಿಗೆ ಪ್ರಧಾನಿ ಸೂಚನೆ
Last Updated 6 ಏಪ್ರಿಲ್ 2020, 22:17 IST
ಅಕ್ಷರ ಗಾತ್ರ

ನವದೆಹಲಿ:ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಹೇರಲಾಗಿರುವ ಲಾಕ್‌ಡೌನ್‌ ಇದೇ 14ಕ್ಕೆ ಕೊನೆಯಾಗಲಿ
ದೆಯೇ ಎಂಬ ಚರ್ಚೆ ತೀವ್ರವಾಗಿ ನಡೆಯುತ್ತಿದೆ. ಕೋವಿಡ್‌–19 ಸೂಕ್ಷ್ಮಪ್ರದೇಶಗಳು (ಹಾಟ್‌ಸ್ಪಾಟ್‌) ಎಂದು ಗುರುತಿಸಿಲ್ಲದ ಪ್ರದೇಶಗಳಲ್ಲಿ ಇದೇ 15ರಿಂದ ಚಟುವಟಿಕೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಚಟುವಟಿಕೆಗಳು ಆರಂಭಗೊಂಡರೂ ದಿಗ್ಬಂಧನ ಪೂರ್ಣ ಪ್ರಮಾಣದಲ್ಲಿ ತೆರವು ಆಗುವುದಿಲ್ಲ. ಮಾಲ್‌, ಸಿನಿಮಾ ಮಂದಿರಗಳು, ಧಾರ್ಮಿಕ ಕೇಂದ್ರಗಳಂತಹ ಹೆಚ್ಚು ಜನರು ಸೇರುವ ಪ್ರದೇಶಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ರೈಲು ಪ್ರಯಾಣಕ್ಕೆ ಟಿಕೆಟ್‌ ಕಾಯ್ದಿರಿಸುವವರು ಪ್ರಯಾಣದ ಕಾರಣವನ್ನು ಹೇಳಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೊರೊನಾ ಪಿಡುಗು ಹಿನ್ನೆಲೆಗೆ ಸರಿಯುವವರೆಗೆ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಮುಂದುವರಿಯಬಹುದು.

ಶಾಲಾ ಕಾಲೇಜು ಆರಂಭದ ಬಗ್ಗೆ ಲಾಕ್‌ಡೌನ್‌ನ ಕೊನೆಯ ದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಸಾರ್ವಜನಿಕ ಸಾರಿಗೆಯನ್ನು ಮತ್ತೆ ಆರಂಭಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಹೆಚ್ಚು ಜನರು ಸಂಚರಿಸುವ ಈವ್ಯವಸ್ಥೆಯನ್ನು ಆರಂಭಿಸಿದರೆ ಸೋಂಕು ಹರಡುವಿಕೆ ತೀವ್ರಗೊಳ್ಳಬಹುದು ಎಂಬ ಆತಂಕವೂ ಇದೆ.

ಪ್ರಧಾನಿ ಸೂಚನೆ: ಕೊರೊನಾ ವೈರಾಣು ವಿರುದ್ಧದ ಹೋರಾಟವು ‘ಸುದೀರ್ಘ’ವಾದುದು ಎಂದು ದೇಶದ ಜನರನ್ನು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಜತೆಗೆ, ಈಗ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವು ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ. ಕೊರೊನಾ ವೈರಾಣುವಿನಿಂದ ಅರ್ಥ ವ್ಯವಸ್ಥೆಯ ಮೇಲೆ ಆಗುವ ಪರಿಣಾಮ
ಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟದ ಸಭೆ ಸೋಮವಾರ ನಡೆದಿದೆ. ಅದಕ್ಕೂ ಮೊದಲು, ಪ್ರಧಾನಿಯವರು ಮಂತ್ರಿ ಪರಿಷತ್‌ ಸಭೆಯನ್ನೂ ನಡೆಸಿದ್ದಾರೆ. ಎರಡೂ ಸಭೆಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದಿವೆ. ಭಾರತದ ಅರ್ಥ ವ್ಯವಸ್ಥೆಯ ಮೇಲೆ ಕೊರೊನಾ ಪಿಡುಗಿನ ಪರಿಣಾಮವನ್ನು ಎರಡೂ ಸಭೆಗಳಲ್ಲಿ ಚರ್ಚಿಸಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ‘ಸ್ಥಳೀಯ ಸಾಮುದಾಯಿಕ ಪಸರಿಸುವಿಕೆ’ ಹಂತದಲ್ಲಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ. ಅಂದರೆ, ಕೆಲವು ಪ್ರದೇಶಗಳಲ್ಲಿ ಸೋಂಕು ಕೇಂದ್ರೀಕೃತವಾಗಿದೆ. ಹಾಗಾಗಿ, ದೇಶದ ಎಲ್ಲೆಡೆಯೂ ಲಾಕ್‌ಡೌನ್‌ ಅನ್ನು ಒಂದೇ ಬಾರಿಗೆ ಹಿಂದಕ್ಕೆ ಪಡೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

*ಲಾಕ್‌ಡೌನ್‌ನಿಂದ ಆರ್ಥಿಕತೆಯ ಮೇಲೆ ಆಗಲಿರುವ ಪರಿಣಾಮವನ್ನು ತಡೆಯಲು ಕೇಂದ್ರ ಹಣಕಾಸು ಸಚಿವಾಲಯ ಶೀಘ್ರದಲ್ಲೇ ಎರಡನೇ ಹಂತದ ಪರಿಹಾರ ಕೊಡುಗೆ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

*ತಬ್ಲೀಗ್‌ ಜಮಾತ್‌ನ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದವರು ಸೇರಿದಂತೆ 25,500ಕ್ಕೂಅಧಿಕ ಜನರನ್ನು ದೇಶದ ವಿವಿಧೆಡೆ ಕ್ವಾರಂಟೈನ್‌ ಮಾಡಲಾಗಿದೆ.

*ಭಾರತೀಯ ರೈಲ್ವೆಯು 2,500 ಬೋಗಿಗಳನ್ನು ಪ್ರತ್ಯೇಕಿಸಲಾದ ವಾರ್ಡ್‌ಗಳಾಗಿ ಈಗಾಗಲೇ ಪರಿವರ್ತಿಸಿದೆ. ಈ 2,500 ಬೋಗಿಗಳಲ್ಲಿ 40 ಸಾವಿರ ಪ್ರತ್ಯೇಕಿಸಲಾದ ವಾರ್ಡ್‌ಗಳು ಬಳಕೆಗೆ ಸಿದ್ಧವಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

*ಲಾಕ್‌ಡೌನ್‌ನ ಅವಧಿಯಲ್ಲಿ,ನ್ಯಾಯಾಲಯಗಳುವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

*ಭಾರತದ ನಗರಗಳಲ್ಲಿ ಆಹಾರ ವಿತರಣೆ ಕೇಂದ್ರಗಳು ಮತ್ತು ರಾತ್ರಿ ತಂಗುವ ವ್ಯವಸ್ಥೆ ಎಲ್ಲೆಲ್ಲಿ ಇವೆ ಎಂಬುದನ್ನು ಗೂಗಲ್‌ ಮ್ಯಾಪ್‌ ತೋರಿಸಲಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಅಗತ್ಯ ಸೇವೆಗಳನ್ನು ಗುರುತಿಸಲು ನೆರವಾಗುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.‘ಫುಡ್‌ ಶೆಲ್ಟರ್‌ (Food shelters) ಅಥವಾ ನೈಟ್‌ ಶೆಲ್ಟರ್‌ (Night shelters) ಎಂದು ಟೈಪ್ ಮಾಡಿ ಬಳಿಕ ನಗರದ ಹೆಸರು ಹಾಕಿ ಈ ಸೌಲಭ್ಯಗಳು ಎಲ್ಲಿವೆ ಎಂಬ ಮಾಹಿತಿ ಪಡೆಯಬಹುದು.

ಆಹಾರ, ವಸತಿ: ಗೂಗಲ್‌ ಮ್ಯಾಪ್‌ನಲ್ಲಿ ಮಾಹಿತಿ

ಭಾರತದ ನಗರಗಳಲ್ಲಿ ಆಹಾರ ವಿತರಣೆ ಕೇಂದ್ರಗಳು ಮತ್ತು ರಾತ್ರಿ ತಂಗುವ ವ್ಯವಸ್ಥೆ ಎಲ್ಲೆಲ್ಲಿ ಇವೆ ಎಂಬುದನ್ನು ಗೂಗಲ್‌ ಮ್ಯಾಪ್‌ ತೋರಿಸಲಿವೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಅಗತ್ಯ ಸೇವೆಗಳನ್ನು ಗುರುತಿಸಲು ನೆರವಾಗುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಈವರೆಗೆ 30 ನಗರಗಳನ್ನು ಇದಕ್ಕೆ ಸೇರಿಸಲಾಗಿದೆ. ಗೂಗಲ್‌ ಮ್ಯಾಪ್‌, ಸರ್ಚ್‌ ಮತ್ತು ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಈ ಮಾಹಿತಿ ಪಡೆಯಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇನ್ನಷ್ಟು ನಗರಗಳನ್ನು ಇದಕ್ಕೆ ಸೇರಿಸಲಾಗುವುದು ಎಂದು ಗೂಗಲ್‌ ಹೇಳಿದೆ. ‘ಫುಡ್‌ ಶೆಲ್ಟರ್‌ (Food shelters) ಅಥವಾ ನೈಟ್‌ ಶೆಲ್ಟರ್‌ (Night shelters) ಎಂದು ಟೈಪ್ ಮಾಡಿ ಬಳಿಕ ನಗರದ ಹೆಸರು ಹಾಕಿ ಈ ಸೌಲಭ್ಯಗಳು ಎಲ್ಲಿವೆ ಎಂಬ ಮಾಹಿತಿ ಪಡೆಯಬಹುದು.

40 ಸಾವಿರ ವಾರ್ಡ್‌ ಸಿದ್ಧ

ಭಾರತೀಯ ರೈಲ್ವೆಯು 2,500 ಬೋಗಿಗಳನ್ನು ಪ್ರತ್ಯೇಕಿಸಲಾದ ವಾರ್ಡ್‌ಗಳಾಗಿ ಈಗಾಗಲೇ ಪರಿವರ್ತಿಸಿದೆ. ಈ 2,500 ಬೋಗಿಗಳಲ್ಲಿ 40 ಸಾವಿರ ಪ್ರತ್ಯೇಕಿಸಲಾದ ವಾರ್ಡ್‌ಗಳು ಬಳಕೆಗೆ ಸಿದ್ಧವಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮೊದಲ ಹಂತದಲ್ಲಿ ಐದು ಸಾವಿರ ಬೋಗಿಗಳನ್ನು ಪ್ರತ್ಯೇಕಿಸಲಾದ ವಾರ್ಡ್‌ಗಳಾಗಿ ಬದಲಾಯಿಸಲಾಗುವುದು ಎಂದು ರೈಲ್ವೆ ಹೇಳಿತ್ತು. ದಿನವೊಂದಕ್ಕೆ 375 ಬೋಗಿಗಳನ್ನು ಪರಿವರ್ತಿಸುವ ಸಾಮರ್ಥ್ಯವನ್ನು ರೈಲ್ವೆ ಹೊಂದಿದೆ. 133 ಸ್ಥಳಗಳಲ್ಲಿ ಈ ಕೆಲಸ ನಡೆಯುತ್ತಿದೆ.

ಕೋರ್ಟ್‌ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್

ಲಾಕ್‌ಡೌನ್‌ನ ಅವಧಿಯಲ್ಲಿ, ನ್ಯಾಯಾಲಯಗಳುವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಮಾರ್ಚ್‌ 25ರಿಂದ ತ್ವರಿತ ವಿಚಾರಣೆಯ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ವಿಡಿಯೊ ಕಾನ್ಫರೆನ್ಸ್‌ ಮುಖಾಂತರವೇ ನಡೆಸುತ್ತಿದೆ.ಸೋಂಕು ವ್ಯಾಪಿಸುವುದನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಉಳಿದ ನ್ಯಾಯಾಲಯಗಳೂ ಇದೇ ವಿಧಾನದಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT