ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ ಆರಿಸಿದರೆ ಗ್ರಿಡ್‌ಗೆ ಕುತ್ತು?

ಇಂದು ರಾತ್ರಿ 9ಕ್ಕೆ ಬಲ್ಬ್ ಆರಿಸಿ ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ
Last Updated 4 ಏಪ್ರಿಲ್ 2020, 20:36 IST
ಅಕ್ಷರ ಗಾತ್ರ

ನವದೆಹಲಿ: ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ವಿದ್ಯುತ್‌ ದೀಪಗಳನ್ನು ಆರಿಸಿ ದೀಪ, ಮೇಣದ ಬತ್ತಿ ಅಥವಾ ಮೊಬೈಲ್‌ ಟಾರ್ಚ್‌ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯಿಂದ, ದೇಶದ ವಿದ್ಯುತ್‌ ವಿತರಣಾ ಜಾಲಕ್ಕೆ ಧಕ್ಕೆಯಾಗುವ ಆತಂಕ ಈಗ ಎದುರಾಗಿದೆ.

ದೇಶದಾದ್ಯಂತ ಎಲ್ಲರೂ ಏಕಕಾಲಕ್ಕೆ ವಿದ್ಯುತ್ ಬಳಕೆ ನಿಲ್ಲಿಸಿದರೆ ವಿದ್ಯುತ್‌ ಜಾಲದ ಮೇಲಿನ ಒತ್ತಡವು ದಿಢೀರ್ ಏರುಪೇರಾಗಲಿದೆ. ಇದರಿಂದ ಗ್ರಿಡ್‌ಗಳಿಗೆ ಹಾನಿಯಾಗಿ ದೇಶವೇ ಕತ್ತಲಲ್ಲಿ ಮುಳುಗುವ ಅಪಾಯವೂ ಇದೆ.

ಆದರೆ, ದೀಪ ಬೆಳಗಿಸುವ ಅವಧಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಭರವಸೆಯನ್ನು ವಿದ್ಯುತ್ ವಿತರಣಾ ಜಾಲದ (ಗ್ರಿಡ್‌) ವ್ಯವಸ್ಥಾಪಕರು ನೀಡಿದ್ದಾರೆ.

ಭಾನುವಾರ ರಾತ್ರಿ ಒಂಬತ್ತು ಗಂಟೆ ವೇಳೆಯಲ್ಲಿ ದಿಢೀರನೆ ಸುಮಾರು 12ರಿಂದ 13 ಗಿಗಾ ವಾಟ್‌ ವಿದ್ಯುತ್‌ ಲೋಡ್‌ ಕಡಿಮೆಯಾಗಬಹುದು. ಮತ್ತೆ ಒಂಬತ್ತು ನಿಮಿಷದ ಬಳಿಕ ಯಥಾಸ್ಥಿತಿಗೆ ಮರಳುತ್ತದೆ. ಈ ರೀತಿ ವ್ಯತ್ಯಾಸವಾಗುವುದನ್ನು ತಡೆಯಲು ಸಂಜೆ 6 ಗಂಟೆ 10 ನಿಮಿಷದಿಂದ ರಾತ್ರಿ 8ಗಂಟೆವರೆಗೆ ಜಲವಿದ್ಯುತ್‌ ಉತ್ಪಾದನೆ ಕಡಿಮೆಮಾಡಲಾಗುವುದು ಎಂದರು.

ಆತಂಕ ಬೇಡ: ಕೇಂದ್ರದ ಸ್ಪಷ್ಟನೆ

ವಿದ್ಯುತ್‌ ಗ್ರಿಡ್‌ಗಳ ಸುರಕ್ಷತೆ ಬಗ್ಗೆ ಯಾವುದೇ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸಬಾರದು. ಭಾನುವಾರ ರಾತ್ರಿ ವಿದ್ಯುತ್‌ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯ ತಿಳಿಸಿದೆ.

ವಿದ್ಯುತ್‌ ನಿರ್ವಹಣೆಗೆ ಸಲಹೆಗಳು

*ಎಸಿ, ಫ್ಯಾನ್‌ಗಳು, ಟಿ.ವಿ, ರೆಫ್ರಿಜರೇಟರ್‌ ಸ್ವಿಚ್ಡ್‌ಆಫ್‌ ಮಾಡಬಾರದು.

*ಮನೆಯಲ್ಲಿನ ವಿದ್ಯುತ್‌ ದೀಪಗಳನ್ನು ಮಾತ್ರ ಆರಿಸಬೇಕು.

*ಆಸ್ಪತ್ರೆ , ಪೊಲೀಸ್‌ ಠಾಣೆ, ಬೀದಿ ದೀಪ ಸೇರಿದಂತೆ ಅಗತ್ಯ ಸೇವೆಗಳಿರುವ ಸ್ಥಳಗಳಲ್ಲಿನ ವಿದ್ಯುತ್‌ ದೀಪಗಳನ್ನು ಆರಿಸಬಾರದು.

ಕತ್ತಲಲ್ಲಿ ಮುಳುಗಿತ್ತು ಲಾಸ್ ವೆಗಾಸ್

ಹಿಂದೊಮ್ಮೆ ಅಮೆರಿಕದ ಲಾಸ್‌ವೆಗಾಸ್‌ ಸಂಪೂರ್ಣ ಕತ್ತಲಲ್ಲಿ ಮುಳುಗಿತ್ತು. ಎಲ್ಲ ಗ್ರಿಡ್‌ಗಳು ಏಕಕಾಲಕ್ಕೆ ಹಾನಿಯಾಗಿದ್ದರಿಂದ ಹಲವು ದಿನಗಳ ಕಾಲ ಆ ನಗರ ಕತ್ತಲಲ್ಲಿ ಇರಬೇಕಾಯಿತು. ಸಂಪೂರ್ಣ ವಿದ್ಯುತ್ ದೀಪಗಳಿಂದಲೇ ಅಲಂಕರಿಸಲಾಗಿರುವ ಕಟ್ಟಡಗಳ ಸಂಖ್ಯೆ ಅಲ್ಲಿ ಹೆಚ್ಚು ಇದ್ದವು. ಅಲ್ಲದೆ, ವಿದ್ಯುತ್ ಚಾಲಿತ ಆಟಗಳಿಗೇ ಆ ನಗರ ಖ್ಯಾತಿ ಪಡೆದಿತ್ತು. ಟ್ರಿಪ್ ಆಗಿದ್ದರಿಂದ ಎಲ್ಲ ಗ್ರಿಡ್‌ಗಳು ಹಾಳಾಗಿದ್ದವು. ಕೊನೆಗೆ, ಅಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮರುಸ್ಥಾಪಿಸಿತ್ತು ಭಾರತೀಯರು

***

ವಿದ್ಯುತ್ ದೀಪಗಳನ್ನು ಆರಿಸಿ, ಮೊಂಬತ್ತಿ ಬೆಳಗಿಸುವ ಒಂಬತ್ತು ನಿಮಿಷಗಳ ಅವಧಿಯು ಪವರ್ ಗ್ರಿಡ್‌ನ ಸ್ಥಿರತೆಗೆ ಅಡ್ಡಿ ಆಗಬಹುದು. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು.

- ಜೈರಾಂ ರಮೇಶ್‌, ಮಾಜಿ ಇಂಧನ ಸಚಿವ, ಕಾಂಗ್ರೆಸ್‌ ಮುಖಂಡ

***

ಅಂತರರಾಜ್ಯ ಪವರ್‌ ಗ್ರಿಡ್‌ ವಿಫಲವಾದರೆ ದೇಶವೇ ಕತ್ತಲಲ್ಲೇ ಮುಳುಗುತ್ತದೆ. ವಿದ್ಯುತ್ ದೀಪಗಳನ್ನು ಆರಿಸದೇ ಮೊಂಬತ್ತಿ ಬೆಳಗಿಸಬೇಕು.

- ನಿತಿನ್‌ ರಾವುತ್‌, ಇಂಧನ ಸಚಿವ, ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT