ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೊರೊನಾ ಪ್ರಕರಣ 3,000 ಸಮೀಪ: ತಮಿಳುನಾಡಿನಲ್ಲಿ ಒಂದೇ ದಿನ 102 ಪ್ರಕರಣ

Last Updated 4 ಏಪ್ರಿಲ್ 2020, 7:19 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 600 ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಇದು ಈವರೆಗೂ ಭಾರತದಲ್ಲಿ ಒಂದೇ ದಿನದಲ್ಲಿ ವರದಿಯಾಗಿರುವ ಅತಿ ಹೆಚ್ಚು ಪ್ರಕರಣವಾಗಿದ್ದು, ಒಟ್ಟು ಕೋವಿಡ್‌–19 ಪ್ರಕರಣಗಳು 3,000 ಸಮೀಪಿಸಿದೆ. ದೆಹಲಿ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಈ ವಾರ ಸೋಂಕು ಪ್ರಕರಣಗಳು ತೀವ್ರ ಏರಿಕೆಯಾಗಿವೆ.

ದೇಶದಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 68 ಮುಟ್ಟಿದೆ. ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 2,902 ತಲುಪಿದ್ದು, ಪ್ರಸ್ತುತ 2,650 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 183 ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಭಾವ ತೀವ್ರವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಮಹಾರಾಷ್ಟ್ರದಲ್ಲಿ 423 ಸೊಂಕು ಪ್ರಕರಣಗಳು ದಾಖಲಾಗಿವೆ ಹಾಗೂ ಶುಕ್ರವಾರ ಒಂದೇ ದಿನ 88 ಜನರಲ್ಲಿ ಸೋಂಕು ದೃಢಪಟ್ಟಿದೆ. ಮುಂಬೈ ನಗರದಲ್ಲೇ 200 ಪ್ರಕರಣಗಳು ವರದಿಯಾಗಿವೆ ಹಾಗೂ ಸೋಂಕಿನಿಂದ 19 ಮಂದಿ ಬಲಿಯಾಗಿದ್ದಾರೆ.

ಏಪ್ರಿಲ್‌ 4ರಂದು ಬೆಳಿಗ್ಗೆ 9ರ ವರೆಗೂ ತಮಿಳುನಾಡಿನಲ್ಲಿ ಕೋವಿಡ್‌–19 ದೃಢಪಟ್ಟ 102 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕು ಪ್ರಕರಣಗಳು 411 ತಲುಪಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಶುಕ್ರವಾರ 167 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣಗಳು 386 ತಲುಪಿದೆ.

ಬಹುತೇಕ ಹೊಸ ಪ್ರಕರಣಗಳು ನಿಜಾಮುದ್ದೀನ್ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ಧಾರ್ಮಿಕ ಸಭೆಗೆ ಸಂಬಂಧಿಸಿದ್ದೇ ಆಗಿವೆ. ದೆಹಲಿ ತಬ್ಲೀಗ್‌ ಜಮಾತ್‌ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದವರು ಹಾಗೂ ಅವರಿಂದ ಸೋಂಕು ವ್ಯಾಪಿಸಿರುವುದುಸೇರಿ ಒಟ್ಟು 647 ಪ್ರಕರಣಗಳು ವರದಿಯಾಗಿವೆ. ದೆಹಲಿ ಸಭೆಯಲ್ಲಿ ಭಾಗಿಯಾಗಿದ್ದವರು ಸೋಂಕಿಗೆ ಒಳಗಾಗಿರುವುದು ಅಂಡಮಾನ್‌ ಮತ್ತು ನಿಕೊಬಾರ್‌, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ವರದಿಯಾಗಿದೆ.

ಆಂಧ್ರ ಪ್ರದೇಶದಲ್ಲಿ ಸೋಂಕು ಪ್ರಕರಣಗಳು 161, ತೆಲಂಗಾಣದಲ್ಲಿ 158 ಪ್ರಕರಣಗಳು, ಕೇರಳದಲ್ಲಿ 295 ಹಾಗೂ ಕರ್ನಾಟಕದಲ್ಲಿ 128 ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶದಲ್ಲಿ 50 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣ174 ಮುಟ್ಟಿದೆ. ಹರಿಯಾಣದಲ್ಲಿ 49, ರಾಜಸ್ಥಾನದಲ್ಲಿ 179, ಮಧ್ಯ ಪ್ರದೇಶದಲ್ಲಿ 104 ಹಾಗೂ ಗುಜರಾತ್‌ನಲ್ಲಿ 95 ಪ್ರಕರಣಗಳು ದಾಖಲಾಗಿವೆ.

ಮಣಿಪುರದಲ್ಲಿ ಎರಡು ಪ್ರಕರಣಗಳು, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಅಸ್ಸಾಂನಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ ಹಾಗೂ ಲಡಾಕ್‌ನಲ್ಲಿ ಸೋಂಕಿತರ ಸಂಖ್ಯೆ 14 ತಲುಪಿದೆ. ಇನ್ನೂ ಬಿಹಾರದಲ್ಲಿ 29, ಚಂಡೀಗಢದಲ್ಲಿ 18, ಛತ್ತೀಸ್‌ಗಢದಲ್ಲಿ 9, ಗೋವಾ ಹಾಗೂ ಹಿಮಾಚಲ ಪ್ರದೇಶದಲ್ಲಿ ತಲಾ 6 ಪ್ರಕರಣಗಳು, ಜಾರ್ಖಂಡ್‌ನಲ್ಲಿ ಎರಡು, ಪಶ್ಚಿಮ ಬಂಗಾಳದಲ್ಲಿ 63 ಹಾಗೂ ಒಡಿಶಾದಲ್ಲಿ 5 ಪ್ರಕರಣಗಳು ದಾಖಲಾಗಿವೆ.

ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿದ್ದು, ಸೋಂಕಿನಿಂದ 59 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 2.77 ಲಕ್ಷ ಪ್ರಕರಣಗಳು ದಾಖಲಾಗಿದೆ ಹಾಗೂ 7,400 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT