ವಿವಿಪ‍್ಯಾಟ್‌ ತಾಳೆ ಪ್ರಮಾಣ ಹೆಚ್ಚಿಸಬಾರದೇಕೆ?

ಗುರುವಾರ , ಏಪ್ರಿಲ್ 25, 2019
33 °C
ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ವಿವಿಪ‍್ಯಾಟ್‌ ತಾಳೆ ಪ್ರಮಾಣ ಹೆಚ್ಚಿಸಬಾರದೇಕೆ?

Published:
Updated:

ನವದೆಹಲಿ: ಮತಯಂತ್ರ ಮತ್ತು ವಿವಿಪ್ಯಾಟ್‌ ರಶೀತಿಗಳನ್ನು ತಾಳೆ ಮಾಡುವ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಚುನಾವಣಾ ಆಯೋಗಕ್ಕೆ ಎಷ್ಟು ಕಷ್ಟವಾಗಬಹುದು ಎಂಬ ಬಗ್ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಅಲ್ಲದೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಇತರ 20 ವಿರೋಧಪಕ್ಷ ಗಳವರು ಮತಯಂತ್ರಗಳಿಗೆ ಸಂಬಂಧಿಸಿದಂತೆ ನೀಡಿರುವ ಅರ್ಜಿಯನ್ನು ಏಪ್ರಿಲ್‌ 1ರಂದು ವಿಚಾರಣೆಗೆ ಎತ್ತಿಕೊಳ್ಳಲು ಕೋರ್ಟ್‌ ತೀರ್ಮಾನಿಸಿದೆ.

ಆಯೋಗವು ಪ್ರಸಕ್ತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆಯನ್ನು ಆಯ್ಕೆ ಮಾಡಿಕೊಂಡು ವಿವಿಪ್ಯಾಟ್‌ ಹಾಗೂ ಮತಯಂತ್ರದಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡಿ ನೋಡುತ್ತಿದೆ.

‘ಒಂದು ಕ್ಷೇತ್ರದಲ್ಲಿ ಮಾತ್ರ ಮತಗಳನ್ನು ತಾಳೆ ಮಾಡಿ ಸಾಕು’ ಎಂದಿರುವ ಉಪ ಚುನಾವಣಾ ಆಯುಕ್ತ ಸುದೀಪ್‌ ಜೈನ್‌ ಅವರಿಗೆ ಹಲವು ಪ್ರಶ್ನೆಗಳನ್ನು ಎಸೆದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿ ದೀಪಕ್‌ ಗುಪ್ತಾ, ‘ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ಯಾವತ್ತೂ ಅವಕಾಶ ಇರುತ್ತದೆ. ಹೀಗಿರುವಾಗ ಚುನಾವಣಾ ಆಯೋಗವೇ ಸ್ವಯಂಪ್ರೇರಣೆಯಿಂದ ಇನ್ನಷ್ಟು ಮತಗಟ್ಟೆಗಳ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ತಾಳೆ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಬಾರದೇಕೆ? ವಿವಿಪ್ಯಾಟ್‌ ಯಂತ್ರಗಳನ್ನು ಅಳವಡಿಸುವಂತೆ 2013ರಲ್ಲಿ ನ್ಯಾಯಾಲಯವೇ ಆದೇಶ ಕೊಡಬೇಕಾಗಿಬಂದ ಸಂದರ್ಭವನ್ನು ಸೃಷ್ಟಿ ಮಾಡಿದ್ದೇಕೆ? ನ್ಯಾಯಾಂಗವೂ ಸೇರಿದಂತೆ ಯಾವ ಸಂಸ್ಥೆಯೂ ಸುಧಾರಣೆಗೆ ಇರುವ ಅವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು’ ಎಂದರು.

ಈಗಿನ ವ್ಯವಸ್ಥೆ ಸರಿಯಾಗಿದೆ ಎಂದು ವಾದಿಸಿದ ಜೈನ್‌, ‘ತಾಳೆ ಮಾಡುವ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಿದರೆ ನಾವೇ ಮತಯಂತ್ರಗಳ ಮೇಲೆ ಸಂದೇಹ ವ್ಯಕ್ತಪಡಿಸಿದಂತಾಗುತ್ತದೆ. ಅದು ಅನಗತ್ಯ. ಭಾರತೀಯ ಸಾಂಖ್ಯಿಕ ಸಂಸ್ಥೆಯಿಂದ ಈ ಬಗ್ಗೆ ವರದಿಯನ್ನೂ ಪಡೆಯಲಾಗಿದೆ. ಮತಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದು ವಿವಿಪ್ಯಾಟ್‌ನೊಂದಿಗೆ ತಾಳೆ ಹಾಕಿದ್ದರಿಂದ ಸ್ಪಷ್ಟವಾಗಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ’ ಎಂದರು.

‘ಆಯೋಗವು ಈಗಿನ ವ್ಯವಸ್ಥೆ ಬಗ್ಗೆ ಸಂತೃಪ್ತಿ ಹೊಂದಲು ಆಧಾರವೇನು ಎಂಬುದನ್ನು ತಿಳಿಸಬೇಕು. ಇನ್ನಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡಲು ಸೂಚಿಸಿದರೆ ಮತ ಎಣಿಕೆಗೆ ಹೆಚ್ಚುವರಿಯಾಗಿ ಎಷ್ಟು ಸಮಯಾವಕಾಶ ಬೇಕಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು’ ಎಂದು ಚುನಾವಣಾ ಆಯೋಗಕ್ಕೆ ಪೀಠವು ಸೂಚಿಸಿತು.

‘2019ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಶೇ 50ರಷ್ಟು ಮತಗಟ್ಟೆಗಳ ಮತಯಂತ್ರ ಮತ್ತು ವಿವಿಪ್ಯಾಟ್‌ ರಶೀತಿಗಳನ್ನು ತಾಳೆ ಮಾಡಿಸಬೇಕು’ ಎಂದು 21 ವಿರೋಧಪಕ್ಷಗಳವರು ನೀಡಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಆಯೋಗಕ್ಕೆ ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !