ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಶಂಕಿತರ ಪತ್ತೆಗೆ ಡ್ರೋನ್‌, ಗುಂಪಿನಲ್ಲಿದ್ದರೂ ಗುರುತಿಸಲು ನೆರವು

ಐಐಟಿ–ಗುವಾಹಟಿ ಮಾಜಿ ವಿದ್ಯಾರ್ಥಿಗಳ ಸಾಧನೆ
Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಐಐಟಿ–ಗುವಾಹಟಿಯ ಮೂವರು ಮಾಜಿ ವಿದ್ಯಾರ್ಥಿಗಳು ಇನ್‌ಫ್ರಾರೆಡ್‌ ಕ್ಯಾಮೆರಾ ಅಳವಡಿಸಿರುವ ವಿನೂತನ ಡ್ರೋನ್‌ ಅಭಿವೃದ್ಧಿಪಡಿಸಿದ್ದಾರೆ. ಕೊರೊನಾ ಸೋಂಕು ಇರುವ ವ್ಯಕ್ತಿ ಗುಂಪಿನೊಳಗಿದ್ದರೂ ನಿಖರವಾಗಿ ಪತ್ತೆ ಹಚ್ಚಲು ಈ ಡ್ರೋನ್‌ ನೆರವಾಗಲಿದೆ.

21 ದಿನಗಳ ಲಾಕ್‌ಡೌನ್‌ ನಂತರ, ಜನರು ಗುಂಪುಗುಂಪಾಗಿ ಓಡಾಡಲುಆರಂಭಿಸಿದರೆ, ದಟ್ಟಣೆಯಲ್ಲಿ ಸೋಂಕಿತ ವ್ಯಕ್ತಿ ಸೇರಿಕೊಂಡಿದ್ದರೆ ಆತನನ್ನು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಕೊರೊನಾ ವೈರಸ್‌ ಮತ್ತಷ್ಟೂ ವ್ಯಾಪಿಸಿ, ಮತ್ತಷ್ಟೂ ಸಂಕಷ್ಟದ ದಿನಗಳಿಗೆ ನಮ್ಮನ್ನು ದೂಡಬಹುದು. ಇಂತಹ ಸಂದರ್ಭದಲ್ಲಿ ಈ ಡ್ರೋನ್‌ ಕ್ಯಾಮೆರಾ ನೆರವಿಗೆ ಬರಲಿದೆ.

‘ಆರಂಭಿಕ ಹಂತದ ಸೋಂಕು ಹೊಂದಿರುವ ವ್ಯಕ್ತಿ ಗುಂಪಿನಲ್ಲಿ ಇದ್ದರೂ ಆತನನ್ನು ಗುರುತಿಸಲು ಸಾಧ್ಯವಾಗಲಿದೆ’ ಎಂದು ಈ ಸಾಧನ ಅಭಿವೃದ್ಧಿಪಡಿಸಿರುವ ಪ್ರೇಮಕುಮಾರ್‌ ವಿಸ್ಲವತ್‌, ಸಾಯಿಕುಮಾರ್‌ ಚಿಂತಲ ಹಾಗೂ ಸೂರಜ್‌ ಪೆದ್ದಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಶಂಕಿತ ವ್ಯಕ್ತಿಗಳ ದೇಹದ ಉಷ್ಣಾಂಶ ಪರೀಕ್ಷಿಸುವ ವೈದ್ಯಕೀಯ ಸಿಬ್ಬಂದಿಗೆ ಅಪಾಯ ತಪ್ಪಿದ್ದಲ್ಲ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು
ಕೊಂಡಿದ್ದರೂ ಅವರುಆತಂಕದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡುವ ಅಪಾಯವನ್ನು ಆದಷ್ಟೂ ಕಡಿಮೆಗೊಳಿಸಲು ಸಾಧ್ಯವೇ ಎಂದು ಯೋಚಿಸಿದಾಗ ಈ ಡ್ರೋನ್‌ ಕ್ಯಾಮೆರಾ ರೂಪುಪಡೆದುಕೊಂಡಿತು’ ಎಂದು ತಂಡದ ಸದಸ್ಯರೊಬ್ಬರಾದ ಪ್ರೇಮಕುಮಾರ್‌ ಹೇಳುತ್ತಾರೆ.

‘ಈ ಕ್ಯಾಮೆರಾ ಬಳಸಿ ಸಂಗ್ರಹಿಸಿದ ದತ್ತಾಂಶಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ, ಆ ಪ್ರಕರಣವನ್ನು ಶಂಕಿತ ಕೋವಿಡ್‌–19 ಎಂದು ಪರಿಗಣಿಸಬೇಕು. ಸೋಂಕು ಇರುವುದನ್ನು ದೃಢಪಡಿಸುವ ಪರೀಕ್ಷೆಗಳಿಗಾಗಿ ಈ ಮಾಹಿತಿಯನ್ನು ಬಳಸಿಕೊಳ್ಳಬಹುದು’ ಎಂದೂ ಹೇಳುತ್ತಾರೆ.

‘ಹಲವಾರು ಹಂತಗಳ ಪರೀಕ್ಷೆಗಳನ್ನು ನಡೆಸಿದ ನಂತರ ಈ ಸಾಧನಕ್ಕೆ ಅಂತಿಮರೂಪ ನೀಡಲಾಗಿದೆ. ಶಂಕಿತ ವ್ಯಕ್ತಿಯಿಂದ ಸುರಕ್ಷಿತ ಅಂತರದಲ್ಲಿ ನಿಂತುಕೊಂಡೇ ವೈದ್ಯರು ಅಥವಾ ಅರೆವೈದ್ಯಕೀಯ ಸಿಬ್ಬಂದಿ ವ್ಯಕ್ತಿಯೊಬ್ಬರ ದೇಹದ ಉಷ್ಣಾಂಶವನ್ನು ದಾಖಲಿಸಬಹುದು. ಆದರೆ, ಕೊರೊನಾ ಸೋಂಕು ಇರುವುದನ್ನು ಈ ಸಾಧನ ಬಳಸಿ ಪಡೆದ ದತ್ತಾಂಶಗಳಿಂದ ನಿರ್ಧರಿಸುವುದು ಸಲ್ಲ. ಇದಕ್ಕಾಗಿ ಪ್ರಮಾಣಿತ ವೈದ್ಯಕೀಯ ಪ್ರಕ್ರಿಯೆಗಳೇ ಅಂತಿಮ’ ಎಂದು ತಂಡದ ಮತ್ತೊಬ್ಬ ಸದಸ್ಯ ಸೂರಜ್‌ ಪೆದ್ದಿ ಹೇಳುತ್ತಾರೆ.

‘ಜನರಿಗೆ ಸೂಚನೆ ನೀಡಲು ಹಾಗೂ ಕೋವಿಡ್‌–19 ಪ್ರಕರಣಗಳು ವರದಿಯಾಗಿರುವ ಪ್ರದೇಶಗಳ ಮೇಲೆ ನಿಗಾ ಇಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈಡ್ರೋನ್‌ಗೆ ಧ್ವನಿವರ್ಧಕ ಅಳವಡಿಸಲಾಗಿದೆ’ ಎಂದು ಸಾಯಿಕುಮಾರ್‌ ಚಿಂತಲ ವಿವರಿಸುತ್ತಾರೆ.

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಪರೀಕ್ಷಾರ್ಥ ಬಳಕೆ
ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಷನ್ಸ್‌ ಎಂಜಿನಿಯರಿಂಗ್‌ ಪದವೀಧರರಾದ ಈ ಮೂವರು ಮಾರುತ್‌ ಡ್ರೋನ್‌ಟೆಕ್‌ ಎಂಬ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಇವರು ಅಭಿವೃದ್ಧಿಪಡಿಸಿರುವ ವಿಶಿಷ್ಟವಾದ ಈ ಡ್ರೋನ್‌ ಕ್ಯಾಮೆರಾದ ಪರೀಕ್ಷಾರ್ಥ ಬಳಕೆಯೂ ಆರಂಭವಾಗಿದ್ದು, ಕೋವಿಡ್‌–19 ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ರೋಗನಿದಾನ ಕಾರ್ಯದಲ್ಲಿ ಭರವಸೆ ಮೂಡಿಸಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಹಾಗೂ ತಿರುಚ್ಚಿ ಮಹಾನಗರ ಪಾಲಿಕೆ ಈ ಸಾಧನವನ್ನು ಬಳಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT