ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಶೇ 60ರಷ್ಟು ಐಸೊಲೇಷನ್ ಬೋಗಿಗಳನ್ನು ಶ್ರಮಿಕ ರೈಲುಗಳಿಗೆ ಬಳಸಲಿದೆ ರೈಲ್ವೆ

Last Updated 22 ಮೇ 2020, 15:02 IST
ಅಕ್ಷರ ಗಾತ್ರ

ನವದೆಹಲಿ: ಹವಾನಿಯಂತ್ರಿತ ರಹಿತ (ನಾನ್ ಎ.ಸಿ) ಬೋಗಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಕೋವಿಡ್‌–19 ಐಸೊಲೇಷನ್‌ಗಾಗಿ ಉಪಯೋಗಿಸಿದ್ದ ಕೆಲವು ಬೋಗಿಗಳನ್ನು ಮಾರ್ಪಡಿಸಿ, ಶ್ರಮಿಕ ವಿಶೇಷ ರೈಲುಗಳಿಗೆ ಬಳಸಿಕೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಐಸೊಲೇಷನ್‌ಗಾಗಿ ಬಳಸಿದ್ದ ಶೇ 60ರಷ್ಟು ಬೋಗಿಗಳನ್ನು ಪ್ರಯಾಣಿಕ ರೈಲಿನ ಸಾಮನ್ಯ ಬೋಗಿಗಳಾಗಿ ಪುನರ್ ರೂಪಿಸುವಂತೆ ಎಲ್ಲ ವಲಯ ಕಚೇರಿಗಳಿಗೆ ರೈಲ್ವೆ ಮಂಡಳಿಯು ಗುರುವಾರ ಪತ್ರ ಬರೆದಿದೆ.

ಐಸೊಲೇಷನ್ ಬೋಗಿಗಳನ್ನು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ, 3,100 ಬೋಗಿಗಳನ್ನು ಪುನಃ ಸಾಮಾನ್ಯ ಬೋಗಿಗಳಾಗಿ ಪರಿವರ್ತಿಸಲು ಇಲಾಖೆ ಮುಂದಾಗಿದೆ. ಇನ್ನುಳಿದ 2,131 ಬೋಗಿಗಳು ಐಸೊಲೇಷನ್‌ ವಾರ್ಡ್‌ಗಳಾಗಿ ಬಳಸಿಕೊಳ್ಳಲು ಲಭ್ಯವಿವೆ. ರಾಜ್ಯ ಸರ್ಕಾರಗಳು ಬೇಡಿಕೆ ಸಲ್ಲಿಸಿದರೆ ಅವುಗಳನ್ನು ಒದಗಿಸಲಾಗುತ್ತದೆ.

ವಲಸೆ ಕಾರ್ಮಿಕರನ್ನು ರವಾನಿಸಲು ಬೇಡಿಕೆ ಹೆಚ್ಚುತ್ತಿದ್ದು ದಿನಕ್ಕೆ 300ಕ್ಕೂ ರೈಲುಗಳನ್ನು ಇಲಾಖೆ ಓಡಿಸುತ್ತಿದೆ. ಈವರೆಗೆ 2,317 ಶ್ರಮಿಕ ವಿಶೇಷ ರೈಲುಗಳನ್ನು ಇಲಾಖೆ ಓಡಿಸಿದ್ದು, 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತಲುಪಿಸಿದೆ.

ಒಟ್ಟಾರೆಯಾಗಿ 5,231 ಬೋಗಿಗಳನ್ನು ರೈಲ್ವೆಯು ಐಸೊಲೇಷನ್ ವಾರ್ಡ್‌ಗಳಾಗಿ ಪರಿವರ್ತಿಸಿತ್ತು. ಪ್ರತಿಯೊಂದು ಸಾಮಾನ್ಯ ಬೋಗಿಯನ್ನು ಐಸೊಲೇಷನ್ ಬೋಗಿಯಾಗಿ ಮಾರ್ಪಡಿಸಲು ಸುಮಾರು ₹2 ಲಕ್ಷ ವೆಚ್ಚವಾಗಿತ್ತು.

ಕೋವಿಡ್ ಹೋರಾಟದಲ್ಲಿ ರೈಲ್ವೆ ಸಾಥ್: ಲಾಕ್‌ಡೌನ್ ಘೋಷಿಸಿ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ, ರೈಲ್ವೆ ಇಲಾಖೆಯು ಬೋಗಿಗಳನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿತ್ತು. ಇಲಾಖೆಯ ಕಾರ್ಖಾನೆಗಳಲ್ಲಿ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ತಯಾರಿಸಲು ಆರಂಭಿಸಲಾಗಿತ್ತು. ಇಲಾಖೆಯು ತನ್ನ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಸನ್ನದ್ಧವಾಗಿರಿಸಿಟ್ಟಿದ್ದು, ಚಿಕಿತ್ಸೆಗೆ ನೆರವಾಲು ವೈದ್ಯರು ಹಾಗೂ ಸಿಬ್ಬಂದಿಯನ್ನೂ ನಿಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT