ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ಪರೀಕ್ಷಾ ಶುಲ್ಕ ಇಳಿಸಿ’

ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆಗೆ ಐಸಿಎಂಆರ್ ಸೂಚನೆ
Last Updated 26 ಮೇ 2020, 20:11 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಪ್ರಯೋಗಾಲಯಗಳಲ್ಲಿ ಪ್ರತಿ ಕೋವಿಡ್–19 ತಪಾಸಣೆಗೆ ಗರಿಷ್ಠ ₹4,500 ದರ ನಿಗದಿಪಡಿಸಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್), ಇದೀಗ ದರ ಕಡಿತವನ್ನು ಪ್ರಸ್ತಾಪಿಸಿದೆ.

ನಾಲ್ಕೂವರೆ ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ತಪಾಸಣೆ ನಡೆಸಬೇಕು ಎಂದು ಸೂಚಿಸಿರುವ ಪರಿಷತ್, ಈ ಸಂಬಂಧ ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆ ನಡೆಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

‘ಈಗ ವಿವಿಧ ರೀತಿಯ ತಪಾಸಣಾ ಸಾಧನ ಹಾಗೂ ಕಿಟ್‌ಗಳು ಲಭ್ಯವಿವೆ. ಸ್ಥಳೀಯವಾಗಿಯೂ ಉಪಕರಣಗಳು ಲಭ್ಯವಾಗುತ್ತಿವೆ. ದರ ಕೂಡ ಸ್ಪರ್ಧಾತ್ಮಕವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಈ ಹಿಂದೆ ನಿಗದಿ ಪಡಿಸಿದ್ದ ಗರಿಷ್ಠ ದರ ಈಗ ಅನ್ವಯವಾಗುವುದಿಲ್ಲ’ ಎಂದು ಪರಿಷತ್ ಅಭಿಪ್ರಾಯಪಟ್ಟಿದೆ.

ಮಾರ್ಚ್ ತಿಂಗಳಲ್ಲಿ ದರ ನಿಗದಿಪಡಿಸಿದ್ದ ಪರಿಷತ್, ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿತ್ತು. ದರ ನಿಗದಿ ಬಗ್ಗೆ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಹುಪಾಲು ಜನರಿಗೆ ಇಷ್ಟು ದರವನ್ನು ಭರಿಸುವ ಶಕ್ತಿ ಇಲ್ಲ ಎಂದು ವಾದಿಸಿದ್ದರು. ಪರೀಕ್ಷೆಯ ದರ ನಿಗದಿ ಮಾಡಲು ಅನುಸರಿಸಿದ ಮಾನದಂಡದ ಬಗ್ಗೆಯೂ ಗೊಂದಲ ಇತ್ತು. ತಪಾಸಣಾ ದರ ಹೆಚ್ಚಿರುವುದೂ ಸಹ ತಪಾಸಣೆಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರಲು ಪ್ರಮುಖ ಕಾರಣವಾಗಿದೆ. ಮಾದರಿ‌ಗಳನ್ನು ತಪಾಸಣೆಗೆ ಒಳಪಡಿಸಲು ಖಾಸಗಿ ಪ್ರಯೋಗಾಲಯಗಳ ಜತೆಕರ್ನಾಟಕ, ಮಹಾರಾಷ್ಟ್ರ, ದೆಹಲಿ ಮೊದಲಾದ ರಾಜ್ಯ ಸರ್ಕಾರಗಳು ಈಗಾಗಲೇ ಮಾತುಕತೆ ನಡೆಸಿವೆ. ಈ ದರ ಐಸಿಎಂಆರ್ ನಿಗಿದಪಡಿಸಿದ ಗರಿಷ್ಠ ದರಕ್ಕಿಂತ ಕಡಿಮೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT