ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪರೀಕ್ಷೆ, ಐಸೊಲೇಷನ್‌ಗೆ ವಿಶೇಷ ಟೆಂಟ್ ತಯಾರಿಸಿದೆ ಆಯುಧ ನಿರ್ಮಾಣ ಬೋರ್ಡ್

Last Updated 11 ಏಪ್ರಿಲ್ 2020, 11:07 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ದೇಶದ ರಕ್ಷಣಾ ವ್ಯವಸ್ಥೆ ಶ್ರಮಿಸುತ್ತಿದೆ. ಕೊರೊನಾ ವೈರಸ್‌ ಸೋಂಕು ಶಂಕಿತರ ಪರೀಕ್ಷೆಗೆ, ಐಸೊಲೇಷನ್‌ ಮಾಡಲು ಮತ್ತು ಆ ವ್ಯಕ್ತಿಗಳು ಪ್ರತ್ಯೇಕವಾಗಿರಿಸಲು (ಕ್ವಾರಂಟೈನ್‌) ಸಹಕಾರಿಯಾಗುವ ಎರಡು ಹಾಸಿಗೆಗಳಿಗೆ ವ್ಯವಸ್ಥೆ ಇರುವ ಟೆಂಟ್‌ಗಳನ್ನು ಆರ್ಡ್ನನ್ಸ್‌ ಫ್ಯಾಕ್ಟರಿ ಬೋರ್ಡ್‌ (ಒಎಫ್‌ಬಿ) ಸಿದ್ಧಪಡಿಸುತ್ತಿದೆ.

ವಾಟರ್‌ಫ್ರೂಫ್‌ (ನೀರು ಹೀರಿಕೊಳ್ಳದ) ಬಟ್ಟೆ, ಸ್ಟೀಲ್‌ ಹಾಗೂ ಅಲ್ಯೂಮಿನಿಯಂ ಅಲಾಯ್‌ ಬಳಸಿ ಟೆಂಟ್‌ ತಯಾರಿಸಲಾಗುತ್ತಿದೆ. ಇದು 9.55 ಚದರ ಮೀಟರ್‌ ವಿಸ್ತಾರ ಹರಡಿಕೊಳ್ಳುತ್ತದೆ. ದೇಶಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ವಾಹನಗಳನ್ನು ತಯಾರಿಸುವ ಆಯುಧ ನಿರ್ಮಾಣ ಬೋರ್ಡ್‌ (ಒಎಫ್‌ಬಿ) ಇದನ್ನು ನಿರ್ವಹಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.

'ಯಾವುದೇ ಸ್ಥಳ ಹಾಗೂ ಪ್ರದೇಶಗಳಲ್ಲಿ ಹೆಚ್ಚುವರಿ ವ್ಯವಸ್ಥೆಗಾಗಿ ಈ ಟೆಂಟ್‌ಗಳ ಬಳಕೆ ಮಾಡಬಹುದಾಗಿದೆ. ಆಸ್ಪತ್ರೆಗಳಹೊರತಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಜ್ಜುಗೊಳಿಸಲು ಈ ಟೆಂಟ್‌ಗಳು ನೆರವಾಗಲಿವೆ' ಎಂದು ತಿಳಿಸಿದೆ.

ಕಾನ್ಪುರದ ಆರ್ಡ್ನನ್ಸ್‌ ಎಕ್ವಿಪ್ಮೆಂಟ್‌ ಫ್ಯಾಕ್ಟರಿ ಟೆಂಟ್‌ಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ 50 ಟೆಂಟ್‌ಗಳನ್ನು ಅರುಣಾಚಲ ಪ್ರದೇಶ ಸರ್ಕಾರಕ್ಕೆ ತಲುಪಿಸಲಾಗಿದೆ. ಇನ್ನೂ ನಾಗ್ಪುರದ ಅಂಬಝರಿ ಆಯುಧ ನಿರ್ಮಾಣ ಫ್ಯಾಕ್ಟರಿ (ಒಎಫ್‌ಎಜೆ) ಸೋಂಕು ನಿವಾರಣೆಗಾಗಿ ಫ್ಯೂಮಿಗೇಷನ್‌ ಚೇಂಬರ್‌ (ಸೋಂಕು ನಿವಾರಕ ಔಷಧಿ ಸಿಂಪಡಿಸುವ ಘಟಕ) ಅಭಿವೃದ್ಧಿ ಪಡಿಸಿದೆ. ಮಡಿಸಿ ಒಯ್ಯಬಹುದಾದ ಈ ಘಟಕವನ್ನು ಒಎಫ್‌ಎಜೆ ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಅಳವಡಿಸಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ.

ದೇಶದಾದ್ಯಂತ 7,000 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದು, ಸೋಂಕಿತರಲ್ಲಿ 230 ಜನ ಸಾವಿಗೀಡಾಗಿದ್ದಾರೆ. ಸೋಂಕು ವ್ಯಾಪಿಸುವುದರ ನಿಯಂತ್ರಣಕ್ಕಾಗಿ ಏಪ್ರಿಲ್‌ 14ರ ವರೆಗೂ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಜಗತ್ತಿನಾದ್ಯಂತ ಸುಮಾರು 17 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT