ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಶೇ 50 ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸಬೇಕು; ಉಳಿದವರಿಗೆ ಸಮಯ ಬದಲು

Last Updated 19 ಮಾರ್ಚ್ 2020, 11:05 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಮನೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ಹೊರಡಿಸಲಾಗಿದೆ. ಸರ್ಕಾರದ ಇಲಾಖೆಗಳ ಬಿ ಮತ್ತು ಸಿ ಗುಂಪಿನ ಶೇ 50ರಷ್ಟು ನೌಕರರು ಏಪ್ರಿಲ್‌ 4ರ ವರೆಗೂ ಮನೆಯಿಂದ ಕಾರ್ಯನಿರ್ವಹಿಸಬೇಕಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗುರುವಾರ ಕೇಂದ್ರ ಸರ್ಕಾರದ ಕಚೇರಿಗಳಿಗೆ ಹೊಸ ಸುತ್ತೋಲೆಗಳನ್ನು ರವಾನಿಸಿದ್ದು, ಗ್ರೂಪ್‌ ಬಿ ಮತ್ತು ಸಿ ದರ್ಜೆಯ ನೌಕರರ ಕಾರ್ಯನಿರ್ವಹಣೆಗೆ ವಾರದ ರೋಸ್ಟರ್‌ ರೂಪಿಸುವಂತೆ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶೇ 50ರಷ್ಟು ನೌಕರರು ಮನೆಯಿಂದ ಕಾರ್ಯನಿರ್ವಹಿಸಿದರೆ, ಉಳಿದವರು ಕಚೇರಿಗೆ ಬರಬೇಕು. ಒಂದು ವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದವರು, ಮುಂದಿನ ವಾರ ಮನೆಯಲ್ಲಿ ಹಾಗೂ ಮನೆಯಿಂದ ಕಾರ್ಯಾಚರಿಸಿದವರು ಕಚೇರಿಗೆ ಬರುವಂತೆ ರೋಸ್ಟರ್‌ ಸಿದ್ಧಪಡಿಸುವಂತೆ ತಿಳಿಸಲಾಗಿದೆ.

ಮೊದಲ ವಾರದ ರೋಸ್ಟರ್‌ ಸಿದ್ಧಪಡಿಸುವಾಗ, ಕಚೇರಿಗೆ ಸಮೀಪದಲ್ಲಿರುವವರು ಹಾಗೂ ಕಚೇರಿಗೆ ಬರಲು ಸ್ವಂತ ವಾಹನಗಳನ್ನು ಬಳಸುತ್ತಿರುವವರನ್ನು ಮೊದಲು ಪರಿಗಣಿಸುವಂತೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನೌಕರರ ಕಾರ್ಯನಿರ್ವಹಣೆ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಕಚೇರಿಗೆ ಬರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಕಾರ್ಯನಿರ್ವಹಣೆಗೆ ಪ್ರತ್ಯೇಕ ಸಮಯ ನಿಗದಿ ಪಡಿಸಬೇಕಿದೆ. ಬೆಳಿಗ್ಗೆ 9ರಿಂದ ಸಂಜೆ 5:30, ಬೆಳಿಗ್ಗೆ 9:30ರಿಂದ 6 ಗಂಟೆ ಹಾಗೂ 10ರಿಂದ 6:30ರ ವರೆಗೂ ಮೂರು ಪಾಳಿಯ ಸಮಯ ತಿಳಿಸಲಾಗಿದೆ.

ಇನ್ನೂ ರೋಸ್ಟರ್‌ ಪ್ರಕಾರ ಮನೆಯಿಂದ ಕಾರ್ಯನಿರ್ವಹಿಸುವವರು ಟೆಲಿಫೋನ್‌ ಮತ್ತು ಎಲೆಕ್ಟ್ರಾನಿಕ್‌ ಸಾಧನಗಳ ಮೂಲಕ ಸಂಪರ್ಕದಲ್ಲಿರಬೇಕು. ತುರ್ತು ಅಗತ್ಯ ಎದುರಾದಾಗ ಅವರು ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕಾಗುತ್ತದೆ.

ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ಕಚೇರಿಗಳು ಹಾಗೂ ನೌಕರರಿಗೆ ಈ ಸೂಚನೆಗಳು ಅನ್ವಯವಾಗುವುದಿಲ್ಲ. ಕೋವಿಡ್‌–19 ನಿಯಂತ್ರಣಕ್ಕಾಗಿ ನೇರ ಕಾರ್ಯಾಚರಣೆಗಳಲ್ಲಿ ತೊಡಗಿರುವವರಿಗೂ ಇದು ಅನ್ವಯಿಸುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಸರ್ಕಾರಿ ಕಚೇರಿಗಳ ಪ್ರವೇಶಗಳಲ್ಲಿ ಥರ್ಮಲ್‌ ಸ್ಕ್ಯಾನರ್‌ಗಳನ್ನು ಅಳವಡಿಸಬೇಕು, ಪ್ರವೇಶದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಇಡಬೇಕು ಎಂದು ಮಾರ್ಚ್‌ 17ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ಸೂಚಿಸಿದೆ. ಜ್ವರ, ಕೆಮ್ಮಿನಂತಹ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಅಥವಾ ಪ್ರತ್ಯೇಕವಾಗಿರಬೇಕು.

ಕಚೇರಿಗಳಿಗೆ ಭೇಟಿಗಾಗಿ ಬರುವುದನ್ನು ಸಾಧ್ಯವಾದಷ್ಟು ಕಡಿತಗೊಳಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಗೆ ಭೇಟಿಗಾಗಿ ನೀಡುವ ಪಾಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಿರ್ವಹಿಸಲು ಪ್ರಯತ್ನಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT