ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಬ್‌ ಕಂಪನಿಗಳಿಗೆ ಮೂಗುದಾರ ಹಾಕೋರ‍್ಯಾರು?

Last Updated 22 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಗೈಯಲ್ಲೇ ಸಾರಿಗೆ’ ಪರಿಕಲ್ಪನೆಯೊಂದಿಗೆ ಆರಂಭವಾದ ಮೊಬೈಲ್‌ ಆ್ಯಪ್‌ ಆಧರಿತ ಕಂಪನಿಗಳ ಕ್ಯಾಬ್‌ಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಿದೆ. ಆರಂಭದಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡಿದ್ದ ಕಂಪನಿಗಳು, ಕ್ರಮೇಣ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಆರಂಭಿಸಿವೆ. ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿವೆ.

ಇಂಥ ಕಂಪನಿಗಳ ನಿಯಂತ್ರಣಕ್ಕೆ ಎಷ್ಟೇ ನಿಯಮಗಳನ್ನು ರೂಪಿಸಿದರೂ ಅವುಗಳು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿಲ್ಲ. ಪ್ರಯಾಣಿಕರು ಹಾಗೂ ಚಾಲಕರ ಮೇಲೆ ಕಂಪನಿಗಳು ನಡೆಸುತ್ತಿರುವ ದಬ್ಬಾಳಿಕೆಯೂ ನಿಲ್ಲುತ್ತಿಲ್ಲ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕಂಪನಿಗಳ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು ಎಂಬುದು ಪ್ರಯಾಣಿಕರ ಒಕ್ಕೊರಲ ಒತ್ತಾಯ.

ಆಟೊಗೆ ಪಾವತಿಸುತ್ತಿದ್ದ ಪ್ರಯಾಣ ದರದಲ್ಲೇ ಕಾರಿನಲ್ಲಿ ಪ್ರಯಾಣಿಸುವ ಅವಕಾಶ ನೀಡಿದ್ದು ಓಲಾ ಕಂಪನಿ. 2010ರಲ್ಲಿ ಈ ಕಂಪನಿ ಕಾರ್ಯಾರಂಭ ಮಾಡುತ್ತಿದ್ದಂತೆ, ಮೊಬೈಲ್ ಆ್ಯಪ್‌ ಬಳಸಿ ಕ್ಯಾಬ್‌ ಬುಕ್ಕಿಂಗ್‌ ಮಾಡುವರ ಸಂಖ್ಯೆ ಹೆಚ್ಚಾಯಿತು.‌ ಕಂಪನಿ ಆದಾಯವೂ ವೃದ್ಧಿಯಾಯಿತು. 2013ರಲ್ಲಿ ಉಬರ್‌ ಕಂಪನಿಯೂ ನಗರಕ್ಕೆ ಲಗ್ಗೆ ಇಟ್ಟಿತು.

ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ ‘ಸರ್ಜ್ ಪ್ರೈಸಿಂಗ್’ ಹೆಸರಿನಲ್ಲಿ ಕಂಪನಿಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾರಂಭಿಸಿದವು. ಇದರ ವಿರುದ್ಧ ಧ್ವನಿ ಎತ್ತಿದ್ದ ಪ್ರಯಾಣಿಕರು, ‘ಸರ್ಜ್ ಪ್ರೈಸಿಂಗ್’ಗೆ ಕಡಿವಾಣ ಹಾಕಲು ಸರ್ಕಾರವನ್ನು ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ. ಕಾನೂನು ಹೋರಾಟ ನಡೆಸಿದ ಪ್ರಯಾಣಿಕರು, ನ್ಯಾಯಾಲಯದ ಮೊರೆ ಹೋಗಿ ‘ಸರ್ಜ್ ಪ್ರೈಸಿಂಗ್’ ರದ್ದುಪಡಿಸುವಲ್ಲಿ ಯಶಸ್ವಿಯಾದರು. ಆದರೂ ಬೇರೆ ಬೇರೆ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದು ನಿಂತಿಲ್ಲ.

ನಿಯಮ ಉಲ್ಲಂಘನೆ ನಿರಂತರ: ಕ್ಯಾಬ್‌ ಕಂಪನಿ ನಿಯಂತ್ರಣಕ್ಕಾಗಿ 'ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಕಾಯ್ದೆ-2016'  ಜಾರಿಗೆ ತರಲಾಗಿದೆ.

ಚಾಲಕರ ಪೂರ್ವಾಪರ ಬಗ್ಗೆ ಪೊಲೀಸರು ನೀಡುವ ಪ‍್ರಮಾಣ ಪತ್ರವಿದ್ದರೆ, ಪ್ರಯಾಣಿಕರ ಸುರಕ್ಷತಾ ಕ್ರಮ ಅಳವಡಿಸಿಕೊಂಡ ಕ್ಯಾಬ್‌ಗಳಿಗೆ ಮಾತ್ರ ಪರವಾನಗಿ ನೀಡುವುದಾಗಿ ಸಾರಿಗೆ ಇಲಾಖೆ ಹೇಳಿತ್ತು. ಇದು ಆರ್‌ಟಿಒ ಕಚೇರಿ ಮಧ್ಯವರ್ತಿಗಳಿಗೆ ಅನುಕೂಲವಾಯಿತೇ ಹೊರತು ಬೇರೇನೂ ಆಗಲಿಲ್ಲ.

ಪ್ರತಿ ಕ್ಯಾಬ್‌ನಲ್ಲಿ ಜಿಪಿಎಸ್ ಅಳವಡಿಸಬೇಕು. ಪ್ಯಾನಿಕ್ ಬಟನ್ ಇರಬೇಕು. ಸಿ.ಸಿ.ಟಿ.ವಿ ಕ್ಯಾಮೆರಾ ಇರಬೇಕು. 24 ಗಂಟೆಯ ಸಹಾಯವಾಣಿ ಸ್ಥಾಪಿಸಬೇಕು. ಆಟೊ ಮಾದರಿಯಲ್ಲೇ ಮೀಟರ್‌ ಅಳವಡಿಸಬೇಕು ಎಂಬ ಇಲಾಖೆಯ ನಿಯಮಗಳನ್ನು ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಪಾಲಿಸುತ್ತಿಲ್ಲ.

ಕ್ಯಾಬ್‌ಗಳಿಗೆ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ದರವನ್ನು ಇತ್ತೀಚೆಗಷ್ಟೇ ನಿಗದಿಪಡಿಸಲಾಗಿದೆ. ಇದು ಪ್ರಯಾಣಿಕಸ್ನೇಹಿ ನಡೆ ಅಲ್ಲ. ಚಾಲಕರಿಗೂ ಆ ದರಪಟ್ಟಿ ಸಮಾಧಾನ ತಂದಿಲ್ಲ. ಕಂಪನಿಗಳು ಮಾತ್ರ ಆ ದರಕ್ಕೆ ಒಪ್ಪಿಗೆ ಸೂಚಿಸಿವೆ.

2010ರಲ್ಲಿ ಕೇವಲ 10 ಸಾವಿರ ಕ್ಯಾಬ್‌ಗಳಿದ್ದವು. ಈಗ ಅವುಗಳ ಸಂಖ್ಯೆ ಲಕ್ಷ ದಾಟಿದೆ. ನಿತ್ಯವೂ ₹1.50 ಲಕ್ಷದಷ್ಟು ಮಂದಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಶುಲ್ಕಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಕೆಲವರು ಕಂಪನಿ ವಿರುದ್ಧ ಹೋರಾಟ ನಡೆಸುತ್ತಿದ್ದು, ಅವರ ಪರವಾಗಿ ಸರ್ಕಾರ ನಿಲ್ಲುತ್ತಿಲ್ಲ.

ಚಾಲಕರ ಪಾಡು ಹೇಳತೀರದು: ಓಲಾ, ಉಬರ್‌ ಕಂಪನಿಗಳು ‘ಅಟ್ಯಾಚ್‌ಮೆಂಟ್‌’ ಹೆಸರಿನಲ್ಲಿ ಬಾಡಿಗೆ ಕಾರುಗಳನ್ನು ಪಡೆದವು. ಪ್ರೋತ್ಸಾಹ ಧನ, ಮಕ್ಕಳಿಗೆ ಉಚಿತ ಶಿಕ್ಷಣ, ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳನ್ನು ನೀಡುವುದಾಗಿ ಚಾಲಕರಿಗೆ ಹೇಳಿದ್ದವು. ಆರಂಭದಲ್ಲಿ ಚಾಲಕರು, ತಿಂಗಳಿಗೆ ₹25 ಸಾವಿರದಿಂದ ₹1 ಲಕ್ಷದವರೆಗೆ ದುಡಿಯುತ್ತಿದ್ದರು.

2016ರಲ್ಲಿ ಪ್ರೋತ್ಸಾಹ ಧನಕ್ಕೆ ಕತ್ತರಿ ಬಿತ್ತು. ಅನುಚಿತ ವರ್ತನೆ, ಬುಕ್ಕಿಂಗ್‌ ರದ್ದು ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಚಾಲಕರಿಗೆ ದಂಡ ವಿಧಿಸುವುದು ಶುರುವಾಯಿತು. ಚಾಲಕರ ಆದಾಯ ಕಡಿಮೆಯಾಯಿತು. ಕಂಪನಿಗಳ ದೌರ್ಜನ್ಯ ಖಂಡಿಸಿದ್ದ ಚಾಲಕರು, ಪ್ರತಿಭಟನೆ ನಡೆಸಲಾರಂಭಿಸಿದರು. ಅದರಲ್ಲಿ ಪಾಲ್ಗೊಂಡಿದ್ದ ಕೆಲ ಚಾಲಕರಿಗೆ ಕಂಪನಿಗಳು ದಂಡವನ್ನೂ ವಿಧಿಸಿದವು.

ಓಲಾ ಕಂಪನಿಯ ಮುರುಗೇಶ್‌ಪಾಳ್ಯ ಕಚೇರಿ ಮೇಲೆ ಚಾಲಕರು ಕಲ್ಲು ತೂರಾಟ ನಡೆಸಿದರು. ಅದೇ ವೇಳೆ ಚಾಲಕ ಮೋಹನ್‌ ಹಾಗೂ ಶ್ರೀನಿವಾಸ್‌ ಎಂಬುವರು ಫಿನಾಯಿಲ್ ಕುಡಿದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದರು. ಅದಾದ ನಂತರವೂ ಕಂಪನಿ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬೇರೆ ರಾಜ್ಯಗಳಿಂದ ಚಾಲಕರನ್ನು ಕರೆತಂದು ಕ್ಯಾಬ್‌ ನಡೆಸುವ ಪ್ರಯತ್ನವನ್ನೂ ಕಂಪನಿಯವರು ಮಾಡಿದರು.

ಎರಡೂ ಕಂಪನಿಗಳ ಕಿರುಕುಳದಿಂದ ಬೇಸತ್ತ ಕೆಲ ಚಾಲಕರು, ’ನಮ್ಮ ಟೈಗರ್‌’ ಆ್ಯಪ್‌ ಸಿದ್ಧಪಡಿಸಿದರು. ಅದಕ್ಕೆ ಇದುವರೆಗೂ ಸಾರಿಗೆ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಹೈ, ಕ್ಯಾಬ್‌ 10, ಟ್ರಿನಿಟಿ... ಹೀಗೆ ಹಲವು ಕಂಪನಿಗಳು ಇತ್ತೀಚೆಗೆ ಆರಂಭವಾಗಿವೆ. ಇವುಗಳ ಆ್ಯಪ್‌ಗಳು ಹೆಚ್ಚು ಪ್ರಸಿದ್ಧಿಯಾಗಿಲ್ಲ. ವ್ಯವಹಾರವೂ ಅಷ್ಟಕ್ಕಷ್ಟೇ. ಹೀಗಾಗಿ ಹಲವು ಚಾಲಕರು, ಕಷ್ಟಗಳನ್ನು ಸಹಿಸಿಕೊಂಡೇ ಓಲಾ ಹಾಗೂ ಉಬರ್‌ ಕಂಪನಿಗಳಲ್ಲೇ ಕ್ಯಾಬ್‌ ಓಡಿಸುತ್ತಿದ್ದಾರೆ.

ಚಾಲಕರ ಅಭಿಪ್ರಾಯ

ಚಾಲಕರಿಗೆ ಮಾರಕವಾಗಿರುವ ಓಲಾ, ಉಬರ್ ಕಂಪನಿಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಸರ್ಕಾರದಿಂದಲೇ ಹೊಸ ಕಂಪನಿ ತೆರೆಯಬೇಕು. ಆಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

– ತನ್ವೀರ್ ಪಾಷಾ, ‘ಓಲಾ ಹಾಗೂ ಉಬರ್ ಕಂಪನಿ ಕ್ಯಾಬ್‌ಗಳ ಮಾಲೀಕರು ಮತ್ತು ಚಾಲಕರ ಒಕ್ಕೂಟ’ದ ಅಧ್ಯಕ್ಷ

ಕಂಪನಿಗಳು ಮೊದಲಿಗಿಂತಲೂ ಹೆಚ್ಚಿನ ಕಮಿಷನ್‌ ಪಡೆಯುತ್ತಿವೆ. ಚುನಾವಣೆ ಬಂದಾಗಲ್ಲಷ್ಟೇ ರಾಜಕೀಯ ಪಕ್ಷಗಳಿಗೆ ನಮ್ಮ ನೆನಪಾಗುತ್ತದೆ. ಚಾಲಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪಕ್ಷಗಳು, ಪ್ರತ್ಯೇಕ ಚಾಲಕರ ಘಟಕಗಳನ್ನೇ ಸ್ಥಾಪಿಸಿಕೊಂಡಿವೆ. ನೈಜ ಚಾಲಕರ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ.

– ಕೆ.ಗಿರೀಶ್, ಚಾಲಕ

ವಾಹನಗಳಲ್ಲಿ ಸುರಕ್ಷತಾ ಕ್ರಮಗಳು ಯಾವ ರೀತಿ ಇರಬೇಕು ಎಂಬ ಬಗ್ಗೆ ನಿಯಮ ರೂಪಿಸಿದ್ದೇವೆ. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಕಂಪನಿಗಳಿಗೆ ಹೇಳಿದ್ದೇವೆ. ಕ್ಯಾಬ್‌ ಸೇವೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ಮಾಡಲಿದ್ದೇವೆ

–  ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ (ಕಾಂಗ್ರೆಸ್)

ಪ್ರಯಾಣಿಕರು ಹಾಗೂ ಚಾಲಕರ ಅಭಿಪ್ರಾಯ ಪಡೆದುಕೊಂಡು ಇಬ್ಬರಿಗೂ ತೊಂದರೆ ಆಗದಂತೆ ನಿಯಮಗಳನ್ನು ರೂಪಿಸಲಿದ್ದೇವೆ. ಕ್ಯಾಬ್‌, ಆಟೊಗಳನ್ನು ನಿಲ್ಲಿಸಲು ಪ್ರತ್ಯೇಕ ತಂಗುದಾಣಗಳನ್ನು ನಿರ್ಮಿಸಲಿದ್ದೇವೆ.

– ರವಿಕುಮಾರ್, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ (ಬಿಜೆಪಿ)

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಚಾಲಕರಿಗೆ ಉದ್ಯೋಗ ಹಾಗೂ ಲಾಭ ಗಳಿಸಲು ಅನುಕೂಲವಾಗುವ ಮತ್ತು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುವ ನಿಯಮಗಳನ್ನು ರೂಪಿಸಲಿದ್ದೇವೆ

– ರಮೇಶ್‌ಬಾಬು, ವಿಧಾನಪರಿಷತ್ ಸದಸ್ಯ (ಜೆಡಿಎಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT